ಮದ್ಯದಂಗಡಿ ಮಾಲೀಕರಿಗೆ ಸಿಹಿ ಸುದ್ದಿ: ನವೀಕರಣ ಶುಲ್ಕ ಇಳಿಕೆ
ಕರ್ನಾಟಕ ಸರ್ಕಾರವು ಅಬಕಾರಿ ಪರವಾನಗಿ ನವೀಕರಣ ಶುಲ್ಕವನ್ನು ಶೇಕಡಾ 100ರಷ್ಟು ಹೆಚ್ಚಿಸಿತ್ತು. ಇದರಿಂದ ಮದ್ಯದಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಸರ್ಕಾರ, ಶುಲ್ಕವನ್ನು ಶೇಕಡಾ 50ರಷ್ಟು ಕಡಿಮೆ ಮಾಡಿದೆ. ಈ ಪರಿಷ್ಕೃತ ದರ ಜುಲೈ 1 ರಿಂದ ಜಾರಿಯಾಗಲಿದೆ.

ಬೆಂಗಳೂರು, ಜೂನ್ 24: ಖಚಾನೆಗೆ ಅತಿ ಹೆಚ್ಚು ವರಮಾನ ತರುವ ಅಬಕಾರಿ ಇಲಾಖೆಯಿಂದ (Excise Department) ಇನ್ನೂ ಹೆಚ್ಚಿನ ರಾಜಸ್ವ ಸಂಗ್ರಹಕ್ಕೆ ಸರ್ಕಾರ ಮುಂದಾಗಿದ್ದು, ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು (Excise Certificate Renewal Fee) ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಈ ತೀರ್ಮಾನದಿಂದ ಹೈರಾಣಾಗಿರುವ ಮದ್ಯದಂಗಡಿ ಮಾಲೀಕರು ನವೀಲಕರಣ ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಡ ಹೇರುತ್ತಿದ್ದರು. ಅಲ್ಲದೆ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಇದೀಗ, ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಸರ್ಕಾರ ಲೈಸೆನ್ಸ್ ನವೀಕರಣ ಶುಲ್ಕವನ್ನು ಇಳಿಸಿದೆ.
ಅಬಕಾರಿ ಲೈಸೆನ್ಸ್ ನವೀಕರಣ ಶುಲ್ಕವನ್ನು ಶೇಕಡಾ 50ರಷ್ಟು ಇಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದಲ್ಲಿ ಅಬಕಾರಿ ವರ್ಷ ಜುಲೈನಿಂದ ಆರಂಭವಾಗಲಿದ್ದು, ರಾಜ್ಯದಲ್ಲಿ ಎಲ್ಲ ಅಬಕಾರಿ ಸನ್ನದುದಾರರು ತಮ್ಮ ಲೈಸನ್ಸ್ಗಳನ್ನು ನವೀಕರಣ ಮಾಡಿಕೊಳ್ಳುತ್ತಾರೆ. ಇದನ್ನು ಗಮನಿಸಿಯೇ ಸರ್ಕಾರ ಲೈಸನ್ಸ್ ನವೀಕರಣ ಶುಲ್ಕವನ್ನು ಬರೋಬ್ಬರಿ ಶೇ 100 ರಷ್ಟು ಹೆಚ್ಚಳ ಮಾಡಿತ್ತು. ಈ ಪರಿಷ್ಕೃತ ದರ ಜುಲೈ 1 ರಿಂದ ಜಾರಿಯಾಗಲಿತ್ತು. ಈ ಮೂಲಕ ಸರ್ಕಾರ ಸನ್ನದ್ದು ಶುಲ್ಕದಿಂದ 879 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಿತ್ತು.
ಆದರೆ, ಸರ್ಕಾರದ ಈ ಆದೇಶದಿಂದ ಮದ್ಯದಂಗಡಿ ಮಾಲೀಕರಿಗೆ ಸಾಕಷ್ಟು ಹೊರೆಯಾಗುತ್ತಿತ್ತು. ಹೀಗಾಗಿ, ಮದ್ಯದಂಗಡಿ ಮಾಲೀಕರು ಲೈಸನ್ಸ್ ನವೀಕರಣ ಶುಲ್ಕ ಏರಿಸಿದ್ದಕ್ಕೆ ಪ್ರತಿಭಟನೆ ನಡೆಸಿ, ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಸರ್ಕಾರ ಸನ್ನದುದಾರರ ಲೈಸನ್ಸ್ ನವೀಕರಣ ಶುಲ್ಕವನ್ನು ಅರ್ಧದಷ್ಟು ಕಡಿಮೆ ಮಾಡಿದೆ. ಈ ಪರಿಷ್ಕೃತ ದರ ಜುಲೈ 1ರಿಂದ ಜಾರಿಗೆ ಬರಲಿದೆ.
ಸರ್ಕಾರ ಎಷ್ಟು ಏರಿಕೆ ಮಾಡಿತ್ತು?
ಸರ್ಕಾರ ಲೈಸನ್ಸ್ ನವೀಕರಣ ಶುಲ್ಕವನ್ನು ಬರೋಬ್ಬರಿ ಶೇ 100 ರಷ್ಟು ಹೆಚ್ಚಳ ಮಾಡಿತ್ತು. ಅಂದರೆ, ಎರಡು ಲಕ್ಷ ರೂ. ಇದ್ದ ಶುಲ್ಕ ನಾಲ್ಕು ಲಕ್ಷ ರೂ. ಹೀಗೆ, ಎಲ್ಲ ಮದ್ಯದಂಗಡಿಗಳ ಲೈಸೆನ್ಸ್ ಶುಲ್ಕದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿತ್ತು.
ಇದನ್ನೂ ಓದಿ: ಮದ್ಯಪ್ರಿಯರಿಗೆ 3ನೇ ಬಾರಿ ದರ ಏರಿಕೆ ಶಾಕ್: ಯಾವ ಎಣ್ಣೆ ಎಷ್ಟು ಹೆಚ್ಚಳ?
ಲೈಸೆನ್ಸ್ ದರ ಎಷ್ಟಿದೆ? ಹೆಚ್ಚಳದ ಬಳಿಕ ಎಷ್ಟಾಗಲಿತ್ತು?
CL9 ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಈ ಮೊದಲು ಲೈಸೆನ್ಸ್ ಶುಲ್ಕ 8,62,000 ರೂ. ಇತ್ತು. ಈಗ ಅದನ್ನು 15,00,000 ರೂ.ಗೆ ಹೆಚ್ಚಿಸಲು ಮುಂದಾಗಿತ್ತು. ಸೆಸ್ 2,25,000 ರೂ. ಸೇರಿ ಒಟ್ಟು ಒಟ್ಟು 17,25,000 ರೂ. ಆಗಲಿತ್ತು.
CL 6A ಸ್ಟಾರ್ ಹೋಟೆಲ್ ಲೈಸೆನ್ಸ್ ಶುಲ್ಕ 9,75,000 ರೂ. ಇದ್ದಿದ್ದು 20 ಲಕ್ಷ ರೂ. ಮಾಡಲಾಗಿತ್ತು. ಇದಕ್ಕೆ ಸೆಸ್ 3 ಲಕ್ಷ ರೂ. ಸೇರಿ ಒಟ್ಟು 23 ಲಕ್ಷ ರೂ. ಆಗಲಿತ್ತು.
CL 7 ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಲೈಸೆನ್ಸ್ ಶುಲ್ಕ 9,75,000 ರೂ. ಇದ್ದದ್ದು 17,00,000 ರೂ.ಗೆ ಏರಿಕೆಯಾಗಲಿತ್ತು. ಸೆಸ್ 2,55,000 ರೂ. ಸೇರಿ ಒಟ್ಟು 19,550,00 ರೂ. ಆಗಲಿತ್ತು. ಇದೀಗ, ಶೇ 50 ರಷ್ಟು ಕಡಿಮೆ ಮಾಡಿದ್ದರಿಂದ ಲೈಸೆನ್ಸ್ ನವೀಕರಣ ಶುಲ್ಕ ಅರ್ಧದಷ್ಟು ಕಡಿಮೆಯಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Tue, 24 June 25







