
ಬೆಂಗಳೂರು, ಜುಲೈ 30: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳ (IT Employees) ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗಳಿಗೆ (Working Hours) ವಿಸ್ತರಿಸುವ ಬಗ್ಗೆ ನಿಯಮ ರೂಪಿಸಲು ಕರ್ನಾಟಕ ಸರ್ಕಾರ ಇತ್ತೀಚೆಗೆ ಮುಂದಾಗಿದ್ದು, ವ್ಯಾಪಕ ವಿರೋಧಕ್ಕೆ ಗುರಿಯಾಗಿತ್ತು. ಸರ್ಕಾರದ ಕ್ರಮದ ವಿರುದ್ಧ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ತೀವ್ರವಾಗಿ ಪ್ರತಿಭಟಿಸಿತ್ತು. ಇದೀಗ ಅಂತಿಮವಾಗಿ ಸರ್ಕಾರ ಐಟಿ ವೃತ್ತಿಪರರಿಗೆ ಶುಭ ಸುದ್ದಿ ನೀಡಿದೆ. ಐಟಿ ಮತ್ತು ಐಟಿಇಎಸ್ ವಲಯದಲ್ಲಿ ದೈನಂದಿನ ಕೆಲಸದ ಸಮಯವನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಹಿಂತೆಗೆದುಕೊಂಡಿದೆ. ಈ ಬಗ್ಗೆ ಕೆಐಟಿಯು ಮಾಹಿತಿ ನೀಡಿದೆ.
ಸರ್ಕಾರದ ಪ್ರಸ್ತಾವನೆಯ ವಿರುದ್ಧ ಕೆಐಟಿಯು ನಿರಂತರ ಆರು ವಾರಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿತ್ತು. ಅಂತಿಮವಾಗಿ, ಪ್ರಸ್ತಾವನೆ ಕೈಬಿಡುವುದಾಗಿ ಸರ್ಕಾರದ ಪರವಾಗಿ ಕಾರ್ಮಿಕ ಇಲಾಖೆಯ ಹೆಚ್ಚುವರಿ ಕಾರ್ಮಿಕ ಆಯುಕ್ತ ಜಿ ಮಂಜುನಾಥ್ ದೃಢಪಡಿಸಿದ್ದಾರೆ ಎಂದು ಕೆಐಟಿಯು ತಿಳಿಸಿದೆ. ಒಕ್ಕೂಟದ ಪದಾಧಿಕಾರಿಗಳೊಂದಿಗಿನ ಸಭೆಯಲ್ಲಿ ಜಿ ಮಂಜುನಾಥ್ ನಿರ್ಧಾರ ತಿಳಿಸಿದ್ದಾರೆ ಎಂಬುದಾಗಿ ಕೆಐಟಿಯು ಹೇಳಿದೆ.
ಪ್ರಸ್ತಾವಿತ ಬದಲಾವಣೆಯೊಂದಿಗೆ ಮುಂದುವರಿಯದೇ ಇರಲು ಸರ್ಕಾರ ನಿರ್ಧರಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಚೇರಿಯೂ ದೃಢಪಡಿಸಿರುವುದಾಗಿ ಸುದ್ದಿ ಸಂಸ್ಥೆ ‘ಪಿಟಿಐ’ ವರದಿ ಮಾಡಿದೆ.
ಪ್ರಸ್ತಾವಿತ ‘ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ 2025’ ಭಾಗವಾಗಿರುವ ಪ್ರಸ್ತಾವಿತ ತಿದ್ದುಪಡಿಯಲ್ಲಿ, 1961 ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯನ್ನು ಪರಿಷ್ಕರಿಸಲು ಉದ್ದೇಶಿಸಲಾಗಿತ್ತು. ಇದು ಅನುಷ್ಠಾನಗೊಂಡಿದ್ದೇ ಆದಲ್ಲಿ, ದೈನಂದಿನ ಕೆಲಸದ ಸಮಯ ವಿಸ್ತರಣೆಯಾಗುತ್ತಿತ್ತು.
ದಿನಕ್ಕೆ ಗರಿಷ್ಠ 10 ಗಂಟೆಗಳ (ಓವರ್‌ಟೈಮ್ ಸೇರಿದಂತೆ) ಕಾನೂನುಬದ್ಧ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಕೆಐಟಿಯು ಆರೋಪಿಸಿತ್ತು. ಒಂದು ವೇಳೆ ಅಂಥ ಬದಲಾವಣೆ ಮಾಡಿದ್ದೇ ಆದಲ್ಲಿ, ಅದು ಎರಡು-ಪಾಳಿ ವ್ಯವಸ್ಥೆಗೆ ದಾರಿ ಮಾಡಿಕೊಡಲಿದೆ. ಅಲ್ಲದೆ, ಉದ್ಯೋಗಿಗಳ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿತಗೊಳಿಸಬೇಕಾಗಿ ಬರುವ ಸಾಧ್ಯತೆಯಿದೆ ಎಂದು ಕೆಐಟಿಯು ಎಚ್ಚರಿಸಿತ್ತು.
In a significant victory for the Karnataka State IT/ITeS Employees Union (KITU) and IT sector employees, the Karnataka Government has been forced to withdraw its proposal to increase working hours in the IT/ITeS sector. pic.twitter.com/CkezCaDpsA
— Karnataka State IT/ITeS Employees Union (@kitu_hq) July 29, 2025
ರಾಜ್ಯಾದ್ಯಂತ ಐಟಿ ಉದ್ಯೋಗಿಗಳಿಗೆ ಸಿಕ್ಕ ಜಯ ಇದಾಗಿದೆ ಎಂದು ಕೆಐಟಿಯು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಹೇಳಿದ್ದಾರೆ. ಈ ನಿರಂತರ ಹೋರಾಟದಿಂದಾಗಿ ಕರ್ನಾಟಕ ಸರ್ಕಾರವು ಈ ವಲಯದಲ್ಲಿ ಕೆಲಸದ ಸಮಯವನ್ನು ಹೆಚ್ಚಿಸುವ ಪ್ರಯತ್ನದಿಂದ ಹಿಂದೆ ಸರಿಯಬೇಕಾಯಿತು ಎಂದು ಅವರು ಹೇಳಿದ್ದಾರೆ.
ಜೂನ್ 18 ರಂದು ಕಾರ್ಮಿಕ ಇಲಾಖೆ ಕರೆದಿದ್ದ ಬಂಡವಾಳಗಾರರ ಸಮಾಲೋಚನಾ ಸಭೆಯಲ್ಲಿ, ಕೆಲಸದ ಅವಧಿ ಹೆಚ್ಚಿಸುವ ಪ್ರಸ್ತಾವನೆಯ ಬಗ್ಗೆ ಮಂಡಿಸಲಾಗಿತ್ತು. ಆಗ ಕೆಐಟಿಯು ಬಲವಾಗಿ ವಿರೋಧಿಸಿದ್ದಲ್ಲದೆ, ಇದು ವೈಯಕ್ತಿಕ ಜೀವನದ ಮೂಲಭೂತ ಹಕ್ಕಿನ ಮೇಲಿನ ದಾಳಿ ಎಂದು ಹೇಳಿತ್ತು.
ಇದನ್ನೂ ಓದಿ: ಉದ್ಯೋಗಿ ಕೆಲಸದ ಅವಧಿ ಎಷ್ಟಿರಬೇಕು? ಕಾರ್ಮಿಕ ಕಾನೂನು ಏನು ಹೇಳುತ್ತೆ? ಇಲ್ಲಿದೆ ವಿವರ
ಕೆಐಟಿಯು ಕರ್ನಾಟಕದ ಐಟಿ ವಲಯದ ಉದ್ಯೋಗಿಗಳನ್ನು ಪ್ರತಿನಿಧಿಸುವ ನೋಂದಾಯಿತ ಒಕ್ಕೂಟವಾಗಿದೆ. ಇದು, ಉದ್ಯೋಗಿ ಹಕ್ಕುಗಳು ಮತ್ತು ಕೆಲಸ-ಜೀವನದ ಸಮತೋಲನದ ವಿಚಾರವಾಗಿ ನಿರಂತರವಾಗಿ ಉದ್ಯೋಗಿಗಳ ಪರ ಕಾರ್ಯನಿರ್ವಹಿಸುತ್ತಿದೆ.
Published On - 7:43 am, Wed, 30 July 25