
ಮಂಗಳೂರು, ಜುಲೈ 9: ಪೊಲೀಸ್ ಇಲಾಖೆಯಲ್ಲಿ (Karnataka Police)ಸಿ ಬ್ಬಂದಿ ಕೊರತೆ ನಿವಾರಿಸಲು ನೇಮಕಾತಿ ನಡೆಯುತ್ತಿದೆ. 545 ಪಿಎಎಸ್ಐಗಳಿಗೆ (PSI Recruitment) ನೇಮಕಾತಿ ಆದೇಶ ನೀಡಲಾಗಿದ್ದು, ತರಬೇತಿಗೆ ಹೋಗಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ (Dr. G Parameshwara) ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ 402 ಪಿಎಎಸ್ಐ ಹುದ್ದೆಗಳ ನೇಮಕಾತಿ ಬಾಕಿ ಇದೆ. ಅದನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ 10-15 ಸಾವಿರ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ನಾವು ತಕ್ಷಣ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ. ಕೇವಲ ಮಾತಿಗಾಗಿ ನಾನು ಈ ರೀತಿ ಹೇಳುತ್ತಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆದ ಕಾನ್ಫರೆನ್ಸ್ನಲ್ಲಿ ವಿವಿಧ ಅಪರಾಧಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ವೇಳೆ, ಕ್ರೈಂ ರೇಟ್ ಕಡಿಮೆಯಾಗಿರುವುದು ಕಂಡುಬಂದಿದೆ. ಕಾನೂನನ್ನು ಬಹಳ ಕಠಿಣವಾಗಿ ತೆಗೆದುಕೊಂಡಿದ್ದರಿಂದ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ಕ್ರಮಕೈಗೊಂಡ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರಲು ಸಾಧ್ಯವಾಗಿದೆ. ಕರಾವಳಿಯಲ್ಲಿ ವಿಶೇಷ ಕಾರ್ಯಪಡೆ ರಚನೆಯಿಂದ ಶಾಂತಿ-ಸುವ್ಯವಸ್ಥೆಗೆ ಪೂರಕವಾಗಿದೆ ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು ಬಳಿಕ ಅಭಿವೃದ್ಧಿ, ಬೆಳವಣಿಗೆಯಲ್ಲಿ ಹೆಚ್ಚು ಅವಕಾಶಗಳಿರುವ ಕರಾವಳಿಯಲ್ಲಿ ಶಾಂತಿ ಅತೀ ಮುಖ್ಯ. ಅದಕ್ಕಾಗಿ ಈ ಭಾಗಕ್ಕೆ ಹೆಚ್ಚು ಗಮನ ಹರಿಸುತ್ತೇವೆ. ಒಂದೆರಡು ಜನ ಬೇರೆ ರೀತಿಯಲ್ಲಿ ಇದ್ದರೂ ಜಿಲ್ಲೆಯ ಜನ ಉತ್ತಮವಾಗಿರುವವರು. ಎಲ್ಲರೂ ಚೆನ್ನಾಗಿದ್ದರೆ ಪೊಲೀಸ್‌ನವರು ಯಾಕೆ? ತಪ್ಪು ಮಾಡಿದವರನ್ನು ಸರಿಪಡಿಸಲು ಪೊಲೀಸ್ ಇಲಾಖೆ ಇದೆ. ಅದಕ್ಕಾಗಿ ಕಾನೂನು, ನಿಯಮಗಳನ್ನು ರೂಪಿಸಲಾಗುತ್ತಿದೆ. ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಎಲ್ಲಾ ವರ್ಗದ ಜನರೊಂದಿಗೆ ಸಭೆ ನಡೆಸುತ್ತೇವೆ. ಅಲ್ಲಿ ಸಲಹೆಗಳನ್ನು ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಹೊರ ಠಾಣೆ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಸ್ಪಿ ಅವರಿಂದ ಪ್ರಸ್ತಾವನೆ ಬಂದಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಮಂಗಳೂರಿನ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ, ಸಾಧಕ-ಬಾಧಕಗಳನ್ನು ಸಂಗ್ರಹಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ನೀರಿಗಾಗಿ ತಂದೆ-ತಾಯಿ ಪಡುತ್ತಿರುವ ಕಷ್ಟ ನೋಡಲಾಗದೇ ಸಿಎಂಗೆ ಪತ್ರ ಬರೆದ 5ನೇ ಕ್ಲಾಸ್ ವಿದ್ಯಾರ್ಥಿನಿ
ಈಗ ಎರಡು ಠಾಣೆಗಳಿಗೆ ಒಂದು 112 ಪೊಲೀಸ್ ವಾಹನ ಇದೆ. ಒಂದು ಠಾಣೆಗೆ ಒಂದು ವಾಹನ ಬೇಕು ಎಂಬ ಬೇಡಿಕೆಯಂತೆ 112 ವಾಹನ ಸಂಖ್ಯೆಯನ್ನು ಹೆಚ್ಚು ಮಾಡುತ್ತೇವೆ. ಕೇಂದ್ರ ಸರಕಾರದ ಆದೇಶದ ಪ್ರಕಾರ 15 ವರ್ಷಗಳಾದ ವಾಹನಗಳನ್ನು ತೆಗೆಯುತ್ತಿದ್ದೇವೆ. ಅವುಗಳ ಬದಲಿಗೆ ಹೊಸ ವಾಹನ ನೀಡುವ ಕಾರ್ಯ ಪ್ರಗತಿಯಲ್ಲಿದೆ. 112 ಉಪಯೋಗ ಜಾಸ್ತಿಯಿದ್ದರೆ ಆ ವಾಹನವನ್ನೂ ಹೆಚ್ಚು ಮಾಡುತ್ತೇವೆ. ಗೃಹರಕ್ಷಕ ದಳದ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆ ಬಗ್ಗೆ ಗಮನ ಹರಿಸುತ್ತೇವೆ ಎಂದು ಅವರು ಭರವಸೆ ನೀಡಿದರು.
ಕೋಮುದ್ವೇಷದಿಂದ ಆದ ಕೊಲೆಗಳು, ಸಾಲು ಸಾಲು ಪ್ರಕರಣಗಳ ಹಿನ್ನಲೆ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಇಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಾಂತಿ ಸಭೆ ಆಯೋಜಿಸಲಾಗಿದೆ. ಗೃಹ ಸಚಿವ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಜಿಲ್ಲೆಯ ವಿವಿಧ ಸಮುದಾಯದ ಮುಖಂಡರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಶಿಕ್ಷಣ, ಸಂಘ ಸಂಸ್ಥೆ-ಸಂಘಟನೆ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಜಿಲ್ಲೆಯಲ್ಲಿ ಕೋಮುಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆಯಾಗಲಿದೆ.
Published On - 9:11 am, Wed, 9 July 25