ಕೆಲ ಆಹಾರ ಪದಾರ್ಥ, ಈ ಔಷಧಿಗಳು ದೇಹಕ್ಕೆ ಡೇಂಜರ್​: ಆಘಾತಕಾರಿ ಅಂಶ ಬಹಿರಂಗ

ಆರೋಗ್ಯ ಮತ್ತು ಆಹಾರ ಇಲಾಖೆಯು ನಡೆಸಿದ ಆಹಾರ, ಔಷಧಿ ಸೇರಿದಂತೆ ಇನ್ನಿತರ ವಸ್ತುಗಳ ಮಾದರಿ ತಪಾಸಣೆಯಲ್ಲಿ ಆಘಾತಕಾರಿ ಅಂಶಗಳು ಬಹಿರಂಗಗೊಂಡಿವೆ. ಕುಡಿಯುವ ನೀರಿನ ಬಾಟಲ್‌ಗಳು, ಕರಿದ ಬಟಾಣಿ, ಖೋವಾ, ಪನ್ನೀರ್, ಸಿಹಿ ತಿಂಡಿಗಳು ಸೇರಿದಂತೆ ಹಲವು ಆಹಾರ ಪದಾರ್ಥಗಳಲ್ಲಿ ಅಸುರಕ್ಷಿತ ಅಂಶಗಳು ಪತ್ತೆಯಾಗಿವೆ. ಹಲವು ಕಂಪನಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಮತ್ತು ಪರವಾನಗಿ ರದ್ದುಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆಲ ಆಹಾರ ಪದಾರ್ಥ, ಈ ಔಷಧಿಗಳು ದೇಹಕ್ಕೆ ಡೇಂಜರ್​: ಆಘಾತಕಾರಿ ಅಂಶ ಬಹಿರಂಗ
ಸಾಂದರ್ಭಿಕ ಚಿತ್ರ
Edited By:

Updated on: Apr 08, 2025 | 7:57 PM

ಬೆಂಗಳೂರು, ಏಪ್ರಿಲ್​ 08: ನಾವು ಸೇವಿಸುವ ಆಹಾರ, ತಿಂಡಿ-ತಿನಿಸು ಎಲ್ಲವೂ ಕಲಬರಿಕೆಯುಕ್ತವಾಗಿದೆ. ಇದೀಗ, ಕುಡಿಯುವ ನೀರಿನ ಬಾಟಲ್ (Water Bottle) ಸಹ ಆರೋಗ್ಯಕ್ಕೆ ಮಾರಕ ಎಂಬ ಆಘಾತಕಾರಿ ವರದಿಯನ್ನು ಆರೋಗ್ಯ ಇಲಾಖೆ (Health Department) ಬಿಡುಗಡೆ ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯ ಇಲಾಖೆಯು ಆಹಾರ ಪದಾರ್ಥಗಳು ಹಾಗೂ ತಯಾರಿಕಾ ಘಟಕಗಳ ಮೇಲೆ ದಾಳೆ ನಡೆಸುತ್ತಲೇ ಇದೆ‌. ನೋಟಿಸ್ ನೀಡಿ, ದಂಡ ವಿಧಿಸಿದೆ. ಇದರ ಬೆನ್ನಲ್ಲೇ ಮತ್ತಷ್ಟು ಆಘಾತಕಾರಿ ಅಂಶಗಳು‌ ಹೊರಬಿದ್ದಿವೆ.

ಒಟ್ಟು 1,891 ಔಷಧಿಗಳ ಮಾದರಿಗಳನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಈ ಪೈಕಿ 1,296 ಉತ್ತಮ ಗುಣಮಟ್ಟದ ಔಷಧ ಮತ್ತು 41 ಗುಣಮಟ್ಟವಲ್ಲದ ಔಷಧಿಗಳೆಂದು ತಪಾಸಣೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಫೆ‌‌‌‌ಬ್ರವರಿ ಮತ್ತು ಮಾರ್ಚ್​ ತಿಂಗಳಿನಲ್ಲಿ ಒಟ್ಟು 18 ಮೊಕದ್ದಮೆಗಳು ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿವೆ. ರಿಂಗರ್ ಲ್ಯಾಕ್ಟೇಟ್ ದ್ರಾವಣಕ್ಕೆ ಸಂಬಂಧಿಸಿದಂತೆ 196 ಬ್ಯಾಚ್‌ನ ಮಾದರಿಗಳಲ್ಲಿ 113 ಉತ್ತಮ ಗುಣಮಟ್ಟವಲ್ಲವೆಂದು ಸಾಬೀತಾಗಿದೆ.

ಈ ಸಂಬಂಧ ತಯಾರಿಕಾ ಸಂಸ್ಥೆಯಾದ M/s Paschim Banga Pharmaceuticals ವಿರುದ್ಧ ಮಾರ್ಚ್ ಅಂತ್ಯದವರೆಗೆ ವಿವಿಧ ನ್ಯಾಯಾಲಯಗಳಲ್ಲಿ 78 ಪ್ರಕರಣಗಳು ದಾಖಲಾಗಿವೆ. ಉತ್ತಮ ಗುಣಮಟ್ಟವಲ್ಲದ ಔಷಧ ಹಾಗೂ ನಿಯಮ ಉಲ್ಲಂಘಿಸಿದ್ದ ತಯಾರಿಕಾ ಸಂಸ್ಥೆಗಳ ವಿರುದ್ಧ 43 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದೆ. ಈವರೆಗೆ ಒಟ್ಟು 215 ಸಂಸ್ಥೆಗಳ ಪರವಾನಿಗೆಗಳ ಅಮಾನತ್ತು ಮಾಡಲಾಗಿದ್ದು, 24 ಲಕ್ಷಕ್ಕೂ‌ ಅಧಿಕ ಮೌಲ್ಯದ ಉತ್ತಮ ಗುಣಮಟ್ಟದಲ್ಲದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇದನ್ನೂ ಓದಿ
ಐಸ್ ಕ್ರೀಮ್​ನಲ್ಲಿ​​​ ಈ ಅಂಶ ಪತ್ತೆ, ನೀವು ತಿನ್ನುವ ಮುನ್ನ ಎಚ್ಚರ
ನೀವು ಐಸ್​ಕ್ರೀಂ ಪ್ರಿಯರೇ? ಹಾಗಿದ್ರೆ ಈ ಸುದ್ದಿ ಓದಲೇಬೇಕು..!
ನಾವು ಕುಡಿಯುವ ನೀರು ಸುರಕ್ಷಿತವಾ? ತಿಳಿಯಲಿದೆ ವಾಟರ್ ಬಾಟಲ್​ಗಳ ಅಸಲಿ ಬಣ್ಣ
ಬೆಂಗಳೂರಿನ ಹಲವೆಡೆ ಇನ್ನೂ ನಿಂತಿಲ್ಲ ಇಡ್ಲಿ ತಯಾರಿಗೆ ಪ್ಲಾಸ್ಟಿಕ್ ಬಳಕೆ

ಆಹಾರ ಪದಾರ್ಥಗಳ ತಪಾಸಣಾ ವರದಿ ಬಹಿರಂಗ

ಕೇವಲ ಔಷಧಿಗಳು ಮಾತ್ರವಲ್ಲದೆ, ಆಹಾರ ಹಾಗೂ ಆಹಾರ ಪದಾರ್ಥಗಳ ಪರೀಕ್ಷೆ ಸಹ ನಡೆಸಲಾಗಿದೆ. 2025ರ ಫೆಬ್ರವರಿ ತಿಂಗಳಿನಲ್ಲಿ ಒಟ್ಟಾರೆ 3,698 ಆಹಾರ ಪದಾರ್ಥಗಳ ತಪಾಸಣಾ ವರದಿ ಬಹಿರಂಗವಾಗಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಹಾಗಾದರೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಆಹಾರ ಉತ್ಪನ್ನ ಹಾಗೂ ಸಾಮಾಗ್ರಿಗಳ ಆಘಾತಕಾರಿ ಅಂಶಗಳ ವರದಿ ಇಲ್ಲಿದೆ.

ಕುಡಿಯುವ ನೀರಿನ ಬಾಟಲ್

296 ಕುಡಿಯುವ ನೀರಿನ ಬಾಟಲ್‌ಗಳ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಪೈಕಿ 255 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 72 ಮಾದರಿಗಳು ಸುರಕ್ಷಿತ, 95 ಮಾದರಿಗಳು ಅಸುರಕ್ಷಿತ ಹಾಗೂ 88 ಮಾದರಿಗಳಲ್ಲಿ ಕಳಪೆ ಅಂಶ ಪತ್ತೆಯಾಗಿದೆ.

ಕರಿದ ಹಸಿರು ಬಟಾಣಿ

115 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಕೆ ಮಾಡಲಾಗಿತ್ತು. ಈ ಪೈಕಿ 45 ಮಾದರಿಗಳು ಸುರಕ್ಷಿತ ಎಂದು 69 ಮಾದರಿಗಳು ಅಸುರಕ್ಷಿತ ಎಂದು ವರದಿ ಬಂದಿದೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿದೆ.

ಇನ್ನು, 2025ರ ಮಾರ್ಚ್ ತಿಂಗಳಿನಲ್ಲಿ ಒಟ್ಟು 3,204 ಆಹಾರ ಪದಾರ್ಥಗಳ ಟೆಸ್ಟಿಂಗ್ ನಡೆಸಲಾಗಿದೆ.

ತುಪ್ಪ

49 ಕಂಪನಿಗಳ ತುಪ್ಪದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಈ ಪೈಕಿ 6 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, ಎಲ್ಲ ಮಾದರಿಗಳು ಸುರಕ್ಷಿತವಾಗಿವೆ ಎನ್ನಲಾಗಿದೆ.

ಖೋವಾ

43 ಮಾದರಿಯ ಖೋವಾ ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಈ ಪೈಕಿ 9 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣವಾಗಿದ್ದು, 3 ಮಾದರಿಗಳು ಕಳಪೆ, 6 ಮಾದರಿಗಳು ಸುರಕ್ಷಿತ ಎಂದು ವರದಿ ಬಹಿರಂಗಗೊಂಡಿದೆ.

ಪನ್ನೀರ್

ಪನ್ನೀರ್‌ಗಳ 231 ಮಾದರಿಗಳ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವುಗಳಲ್ಲಿ 32 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 2 ಅಸುರಕ್ಷಿತ 30 ಮಾದರಿಗಳು ಸುರಕ್ಷಿತ ಎಂದು ವರದಿ ಬಂದಿದೆ. ಬಾಕಿ ಮಾದರಿಗಳು ವಿಶ್ಲೇಷಣೆ ಕಾರ್ಯ ಪ್ರಗತಿಯಲ್ಲಿದೆ.

ಸಿಹಿ ತಿಂಡಿ

ಸಿಹಿ ತಿಂಡಿಗಳ 198 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 83 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು 2 ಮಾದರಿಗಳು ಅಸುರಕ್ಷಿತ, 81 ಮಾದರಿಗಳು ಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಖಾರ ಮಿಕ್ಸರ್

ಖಾರ ಮಿಕ್ಸರ್​ಗಳ 119 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಅವುಗಳಲ್ಲಿ 27 ಮಾದರಿಗಳ ವಿಶೇಷಣಾ ಕಾರ್ಯ ಪೂರ್ಣಗೊಂಡಿದ್ದು, ಈ ಪೈಕಿ 4 ಮಾದರಿಗಳು ಅಸುರಕ್ಷಿತ ಹಾಗೂ 23 ಮಾದರಿಗಳು ಸುರಕ್ಷಿತ ಎಂದು ವರದಿ ಬಂದಿದೆ.

ಜ್ಯೂಸ್, ಪಾನೀಯ

ಸ್ಥಳೀಯವಾಗಿ ತಯಾರಿಸಲ್ಪಡುವ ಜ್ಯೂಸ್, ಪಾನೀಯಗಳ 46 ಮಾದರಿಗಳನ್ನು ಹಾಗೂ ಐಸ್ ಕ್ಯಾಂಡಿಗಳ 39 ಮಾದರಿಗಳನ್ನು ಮತ್ತು ಐಸ್ ಕ್ರೀಂಗಳ 107 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿತ್ತು. ಇನ್ನೂ ಹೆಚ್ಚಿನ ಮಾದರಿಗಳ ಸಂಗ್ರಹಣಾ ಮತ್ತು ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿದೆ. ಅಲ್ಲದೇ ಆಹಾರ ಪದಾರ್ಥಗಳ ತಯಾರಿಕಾ, ಮಾರಾಟ ಘಟಕಗಳಿಗೆ ಪರಿಶೀಲನಾ ಭೇಟಿ ನೀಡಿ ಲೋಪಗಳು ಕಂಡುಬಂದ 92 ಘಟಕಗಳಿಗೆ ನೋಟಿಸ್ ಅನ್ನು ಜಾರಿಗೊಳಿಸಲಾಗಿದ್ದು, 06 ಘಟಕಗಳಿಗೆ 38 ಸಾವಿರ ರೂ. ದಂಡ ವಿಧಿಸಲಾಗಿದೆ.

ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ ಮೇಲೂ ಕಾರ್ಯಾಚರಣೆ

ಇದಲ್ಲದೆ, ಹೋಟೆಲ್‌ ಮತ್ತು ರೆಸ್ಟೋರೆಂಟ್​ಗಳಲ್ಲಿ ಜಿರಳೆ, ಇಲಿಗಳು ಸೇರಿದಂತೆ ಕ್ರಿಮಿ ಕೀಟಗಳ ನಿಯಂತ್ರಣಕ್ಕೆ ವಹಿಸಲಾಗಿರುವ ಕ್ರಮಗಳ ಕುರಿತಂತೆ 590 ಹೋಟೆಲ್‌ ಮತ್ತು ರೆಸ್ಟೋರೆಂಟ್​ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು.

ಈ ವೇಳೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗದ 214 ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಿಗೆ ನೋಟಿಸ್ ಅನ್ನು ಜಾರಿಗೊಳಿಸಲಾಗಿತ್ತು. 11 ಹೋಟೆಲ್‌ಗಳು, ರೆಸ್ಟೋರೆಂಟ್​ಗಳಿಗೆ 1,15,000 ದಂಡ ವಿಧಿಸಲಾಗಿತ್ತು. ಆಹಾರ ಮಾದರಿಗಳ ವಿಶ್ಲೇಷಣಾ ಫಲಿತಾಂಶಗಳನ್ನು ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇದನ್ನೂ ಓದಿ: ನಾವು ಕುಡಿಯುವ ನೀರು ಸುರಕ್ಷಿತವಾ? ತಿಳಿಯಲಿದೆ ವಾಟರ್ ಬಾಟಲ್​ಗಳ ಅಸಲಿ ಬಣ್ಣ

ಒಟ್ಟಾರೆಯಾಗಿ, ಆರೋಗ್ಯ ಇಲಾಖೆ ಸಾರ್ವಜನಿಕರ ಆರೋಗ್ಯ ಕಾಪಾಡಲು ಅಖಾಡಕ್ಕೆ ಇಳಿದಿದೆ. ತಪ್ಪು ಮಾಡಿದ ಕಂಪನಿ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Tue, 8 April 25