ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳಿಗೆ ಹಾಸಿಗೆ ಮೀಸಲು, ಡಾ ಕೆ. ಸುಧಾಕರ ಮಾತುಕತೆ ಫಲಪ್ರದ
ಕರ್ನಾಟಕದ ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಖಾಸಗೀ ಆಸ್ಪತ್ರೆಗಳ ಜೊತೆ ಇಂದು ಮಾತುಕತೆ ನಡೆಸಿದರು. ಮುಂದಿನವಾರದಿಂದ ತಮ್ಮ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳಿವೆ ಹಾಸಿಗೆ ಕಾದಿರಿಸಲು ಖಾಸಗೀ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.
ಕಳೆದ ವರ್ಷ ಖಾಸಗಿ ಆಸ್ಪತ್ರೆಗಳಲ್ಲಿ 50 % ರಷ್ಟು ಹಾಸಿಗೆಯನ್ನು ಕೋವಿಡ್ಗೆ ಮೀಸಲಿಡಲಾಗಿತ್ತು. ಇದೇ ರೀತಿ ಈ ಬಾರಿ ಕೂಡ ಕೊವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿಡಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಗಳ ಸಂಘಟನೆ (PHANA) ಸಂಘಟನೆ ಜೊತೆ ವೀಡಿಯೋ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಕೋವಿಡ್ ಅಲ್ಲದ ರೋಗಿಗಳಿಗೆ ದಾಖಲಾತಿ ಅವಶ್ಯಕತೆ ಇಲ್ಲದಿದ್ದಲ್ಲಿ ಅಂತಹ ರೋಗಿಗಳಿಗೆ ಮನವಿ ಮಾಡಿ, ಬಿಡುಗಡೆ ಮಾಡಬೇಕು. ಅವನ್ನು ಕೋವಿಡ್ ಗೆ ಮೀಸಲಿಡಬೇಕು ಎಂದು ಹೇಳಲಾಗಿದೆ. ಒಂದು ವಾರದೊಳಗೆ 50% ರಷ್ಟು ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆಗಳವರು ಒಪ್ಪಿಕೊಂಡಿದ್ದಾರೆ. ಅಲ್ಪ ರೋಗ ಲಕ್ಷಣ ಹಾಗೂ ಲಕ್ಷಣ ರಹಿತ ರೋಗಿಗಳಿಗೆ ಹೋಟೆಲ್ ಗಳಲ್ಲಿ, ಕೋವಿಡ್ ಕೇರ್ ಸೆಂಟರ್ಗಳಲ್ಲಿ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ. ಆಸ್ಪತ್ರೆಗಳ ಹಾಸಿಗೆಗಳಲ್ಲಿ ಅನಿವಾರ್ಯ ಇರುವವರಿಗೆ ಚಿಕಿತ್ಸೆ ನೀಡಬೇಕೆಂದು ಸೂಚಿಸಲಾಗಿದೆ ಎಂದರು.
ರೆಮ್ಡಿಸಿವರ್ ಔಷಧಿ ಬಗ್ಗೆ ಚರ್ಚೆ
ರೆಮಿಡಿಸಿವಿರ್ ಔಷಧಿ ತಯಾರಿಕೆ, ಪೂರೈಕೆಯನ್ನು ಕಂಪನಿಗಳು ಸ್ಥಗಿತಗೊಳಿಸಿವೆ. ರಾಜ್ಯಕ್ಕೆ ಇದರ ಅಗತ್ಯ ಇದೆ. ಕೆಲ ಖಾಸಗಿ ಆಸ್ಪತ್ರೆಗಳು ಔಷಧಿ ಲಭ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಡ್ರಗ್ ಕಂಟ್ರೋಲರ್ ಜೊತೆ ಚರ್ಚಿಸಿ, ಅಗತ್ಯವಿರುವ ಔಷಧ ಪ್ರಮಾಣ ಗುರುತು ಮಾಡಿ, ಸರ್ಕಾರದಿಂದಲೇ ನಿರ್ದಿಷ್ಟ ದರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಪೂರೈಸುವ ಕ್ರಮ ವಹಿಸಲಾಗುವುದು. ಆಕ್ಸಿಜನ್, ಆಕ್ಸಿಜನ್ ಜನರೇಟರ್ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಕೊರತೆಯ ಸಂಭವ ಬಂದರೆ ಕೈಗಾರಿಕಾ ಆಕ್ಸಿಜನ್ ಬಳಸಲು ಕ್ರಮ ವಹಿಸಲಾಗುವುದು ಎಂದರು.
ತಾಂತ್ರಿಕ ಸಲಹಾ ಸಮಿತಿಯು ಮುಂದಿನ ಎರಡು ತಿಂಗಳ ಕೊರೊನಾ ಸ್ಥಿತಿಗತಿಯನ್ನು ಅಂದಾಜಿಸಿದ್ದು, ಸರ್ಕಾರ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದೆ. ಈ ಒಂದು ವರ್ಷದ ಅನುಭವದಲ್ಲಿ ಕೊರೊನಾ ಬಗ್ಗೆ ಗೊತ್ತಾಗಿದೆ. ಕೋವಿಡ್ನಿಂದಾಗಿ ಆರ್ಥಿಕ ನಷ್ಟ ಉಂಟಾಗಿದ್ದು, ಜನರು ಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಲಾಕ್ ಡೌನ್ ನಂತಹ ಕಠಿಣ ಕ್ರಮಕ್ಕೆ ಮುಂದಾಗುವುದು ಕಷ್ಟ ಎಂದರು.
ಕೋವಿಡ್ ಪರೀಕ್ಷೆಯಲ್ಲಿ ತಪ್ಪೆಸಗಿದ ನೌಕರರನ್ನು ವಜಾಗೊಳಿಸಲಾಗಿದೆ. ಇದೊಂದು ತಪ್ಪಿಗಾಗಿ ಸರ್ಕಾರ ಮಾಡಿದ ಉತ್ತಮ ಕೆಲಸಗಳನ್ನು ಮರೆಮಾಚುವುದು ಬೇಡ. ಈವರೆಗೆ 2.2 ಕೋಟಿಗೂ ಅಧಿಕ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 85 % ನಷ್ಟು ಆರ್ ಟಿಪಿಸಿಆರ್ ಪರೀಕ್ಷೆಯಾಗಿದೆ ಎಂದರು. ಕೊರೊನಾ ತಡೆಗೆ ಜನರ ಸಹಕಾರ ಅಗತ್ಯ. ಲಾಕ್ ಡೌನ್ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಆದರೆ ಅಂತಹ ಅನಿವಾರ್ಯ ತರಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಲಾಕ್ ಡೌನ್ ನಿಂದ ಎಷ್ಟು ನಷ್ಟವಾಗುತ್ತದೆ ಎಂಬ ಅರಿವಿದೆ ಎಂದರು.
ಇದನ್ನೂ ಓದಿ:
ದುರ್ಬಲ ವರ್ಗದ ಜನರ ರಕ್ಷಣೆಗೆ ಯಾವ ದೇಶಗಳು ಏನು ಮಾಡಿವೆ ಮೌಲ್ಯಮಾಪನವಾಗಲಿ ಎಂದ ನಿರ್ಮಲಾ