Corona second wave: ದುರ್ಬಲ ವರ್ಗದ ಜನರ ರಕ್ಷಣೆಗೆ ಯಾವ ದೇಶಗಳು ಏನು ಮಾಡಿವೆ ಮೌಲ್ಯಮಾಪನವಾಗಲಿ ಎಂದ ನಿರ್ಮಲಾ

ವಿಶ್ವದಾದ್ಯಂತ ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಮತ್ತು ಆರ್ಥಿಕತೆ ರಕ್ಷಣೆಗೆ ದಕ್ಷಿಣ ಏಷ್ಯಾದ ರಾಷ್ಟ್ರಗಳು ಹೇಗೆ ಸ್ಪಂದಿಸುತ್ತಿವೆ ಎಂಬ ಮೌಲ್ಯಾಂಕ ಆಗಬೇಕು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Corona second wave: ದುರ್ಬಲ ವರ್ಗದ ಜನರ ರಕ್ಷಣೆಗೆ ಯಾವ ದೇಶಗಳು ಏನು ಮಾಡಿವೆ ಮೌಲ್ಯಮಾಪನವಾಗಲಿ ಎಂದ ನಿರ್ಮಲಾ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ (ಸಂಗ್ರಹ ಚಿತ್ರ)
Follow us
Srinivas Mata
|

Updated on:Apr 12, 2021 | 1:40 PM

ಕೊರೊನಾ ಎರಡನೇ ಅಲೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳು ದುರ್ಬಲ ವರ್ಗದ ರಕ್ಷಣೆಗಾಗಿ ಹೇಗೆ ಸ್ಪಂದಿಸುತ್ತಿವೆ ಎಂಬ ಬಗ್ಗೆ ಮೌಲ್ಯಮಾಪನ ಮಾಡಬೇಕು. ಈ ಭಾಗದಲ್ಲಿ ಚೇತರಿಕೆ ಕಾಣುತ್ತಿದ್ದರೂ ಇಂಥದ್ದೊಂದು ಕೆಲಸ ಆಗಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಆಗುತ್ತಿರುವ ಆರ್ಥಿಕ ಹಿಂಜರಿತದ ಬಗ್ಗೆ ನಿರ್ಮಲಾ ಸೀತಾರಾಮನ್ ಅವರ ಮೊದಲ ಹೇಳಿಕೆ ಇದು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮತ್ತು ವಿಶ್ವ ಬ್ಯಾಂಕ್​ನ ಸಭೆಯಲ್ಲಿ ಕಳೆದ ವಾರ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ವಿಶ್ವದಾದ್ಯಂತ ಮತ್ತೊಮ್ಮೆ ಆತಂಕಗೊಳ್ಳುವ ಮಟ್ಟಕ್ಕೆ ಕೊರೊನಾ ಸೋಂಕು ಪ್ರಕರಣಗಳನ್ನು ಕಾಣುತ್ತಿದ್ದೇವೆ. ಹೊಸ ಬಗೆಯ ಕೊರೊನಾ ಮೂಲ ವೈರಾಣುಗಳಿಗಿಂತ ಹೆಚ್ಚು ಸೋಂಕು ಹರಡುವಂಥದ್ದಾಗಿವೆ. ಹಲವು ದೇಶಗಳಲ್ಲಿ ವ್ಯಾಪಿಸುತ್ತಿವೆ,” ಎಂದು ಏಪ್ರಿಲ್ 9ನೇ ತಾರೀಕಿನಂದು ವಿಶ್ವ ಬ್ಯಾಂಕ್ ಅಭಿವೃದ್ಧಿ ಸಮಿತಿಯ 103ನೇ ಸಭೆಯಲ್ಲಿ ಹೇಳಿದ್ದಾರೆ. ಅಲ್ಲಿ ಅವರು ಭಾರತ, ಬಾಂಗ್ಲಾದೇಶ್, ಭೂತಾನ್ ಮತ್ತು ಶ್ರೀಲಂಕಾ ದೇಶಗಳನ್ನು ಪ್ರತಿನಿಧಿಸಿದ್ದರು.

30 ಕೋಟಿ ಮಂದಿಗೆ ಲಸಿಕೆ ಹಾಕುವ ಗುರಿ “ಕೋವಿಡ್ – 19 ಹೊಸ ಅಲೆಯ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಅನಿಶ್ಚಿತತೆ ತಂದೊಡ್ಡಿದರೂ ನಮ್ಮ ಆರ್ಥಿಕತೆಗಳು ಚೇತರಿಕೆಯ ಸೂಚನೆಗಳನ್ನು ತೋರುತ್ತಿವೆ. ನಮ್ಮ ದುರ್ಬಲ ವರ್ಗದ ಜನತೆ ಹಾಗೂ ಆರ್ಥಿಕತೆ ರಕ್ಷಣೆಗೆ ಹೇಗೆ ಸ್ಪಂದಿಸುತ್ತೇವೆ ಎಂಬುದನ್ನು ಎಲ್ಲ ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮೌಲ್ಯಮಾಪನ ಮಾಡಬೇಕು,” ಎಂದು ಅವರು ಹೇಳಿದ್ದಾರೆ. ಕೊರೊನಾ ಲಸಿಕೆ ಹಾಕುವ ಕಾರ್ಯ ವೇಗದಲ್ಲಿ ಸಾಗುತ್ತಿರುವುದರಿಂದ ಎರಡನೇ ಅಲೆಯು ಹೆಚ್ಚು ಸಮಯ ಕಾಡುವುದಿಲ್ಲ ಎಂದು ನಿರ್ಮಲಾ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಮುಂದಿನ ಕೆಲ ತಿಂಗಳಲ್ಲಿ 30 ಕೋಟಿ ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಭಾರತ ಸಾಧಿಸಲಿದೆ ಎಂದು ಐಎಂಎಫ್​ಸಿ ಸಭೆಯಲ್ಲಿ ಹೇಳಿದ್ದಾರೆ.

ಕಳೆದ ಐದು ದಿನಗಳಿಂದ ಸತತವಾಗಿ 1,00,000ಕ್ಕೂ ಹೆಚ್ಚು ಪ್ರಕರಣಗಳು ಭಾರತದಲ್ಲಿ ದಾಖಲಾಗುತ್ತಿವೆ. ಆ ಪೈಕಿ ಅರ್ಧದಷ್ಟು ಪ್ರಕರಣಗಳು ಮಹಾರಾಷ್ಟ್ರದಿಂದ ಬರುತ್ತಿವೆ. ಮಹಾರಾಷ್ಟ್ರ, ದೆಹಲಿ, ಛತ್ತೀಸ್​ಗಢ, ಕರ್ನಾಟಕ ಮತ್ತು ಪಂಜಾಬ್​ನಲ್ಲಿ ರಾತ್ರಿ ಕರ್ಫ್ಯೂ ಹಾಕಲಾಗಿದೆ. ಅಷ್ಟೇ ಅಲ್ಲ, ಭಾಗಶಃ ಲಾಕ್​ಡೌನ್​ಗಳು ಮತ್ತು ಕಾರ್ಯ ನಿರ್ವಹಣೆ ಅವಧಿಯಲ್ಲಿ ಕಡಿತ ಮಾಡಲಾಗಿದೆ. ಆರ್ಥಿಕ ತಜ್ಞರು ಅಭಿಪ್ರಾಯ ಪಡುವಂತೆ, ಸಂಪರ್ಕದ ಅಗತ್ಯ ಹೆಚ್ಚಿರುವ ಸೇವೆಗಳು ಈ ಎರಡನೇ ಅಲೆಯಲ್ಲಿ ದೊಡ್ಡ ಮಟ್ಟದಲ್ಲಿ ಬಾಧಿತವಾಗಲಿವೆ. ಮಾರ್ಚ್​ನಲ್ಲಿ ಉತ್ಪಾದನೆ ಮತ್ತು ಸೇವಾ ಪಿಎಂಐ ಕುಸಿತ ಆಗಿರುವುದು ಸೋಂಕಿತ ಪ್ರಕರಣಗಳು ಹೆಚ್ಚಳ ಆಗಿರುವುದರ ಆರಂಭಿಕ ಸೂಚನೆಗಳಾಗಿವೆ.

ಕೇಂದ್ರ ಸರ್ಕಾರದಿಂದ 5 ಹಂತದ ರಣತಂತ್ರ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆಗೆ ಕೇಂದ್ರ ಸರ್ಕಾರವು ಐದು ಹಂತದ ರಣತಂತ್ರ ರೂಪಿಸಿದೆ. ಯಾವ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾಗಿದೆಯೋ ಅಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಳ, ಪರಿಣಾಮಕಾರಿ ಐಸೊಲೇಷನ್ (ಪ್ರತ್ಯೇಕವಾಗಿ ಇರಿಸುವುದು), ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ, ಕೋವಿಡ್ ಸೂಕ್ತ ನಡವಳಿಕೆ ಮತ್ತು ನಿರ್ದಿಷ್ಟ ವರ್ಗಕ್ಕೆ ಲಸಿಕೆ ಹಾಕುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಂದಹಾಗೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ FY22 ಭಾರತದ ಬೆಳವಣಿಗೆ ಅಂದಾಜನ್ನು ಜನವರಿಯಲ್ಲಿ ಮಾಡಿದ್ದ ಶೇ 11.5ರಿಂದ ಶೇ 12.5ಕ್ಕೆ ಏರಿಕೆ ಮಾಡಲಾಗಿದೆ. ಒಂದು ವೇಳೆ ಕೊರೊನಾ ಎರಡನೇ ಅಲೆ ಗಂಭೀರವಾದಲ್ಲಿ ಆಗ ಈ ಅಂದಾಜು ಬದಲಾಗಬಹುದು ಎಂಬ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: Bloodbath in stock market | ಕೊರೊನಾ ಎರಡನೇ ಅಲೆ ಆತಂಕದಲ್ಲಿ ಷೇರುಪೇಟೆ ಹೂಡಿಕೆದಾರರ 6 ಲಕ್ಷ ಕೋಟಿ ರೂ. ಖಲಾಸ್

(Vulnerable people, the economy must be protected from corona second wave, said by union finance minister Nirmala Sitharaman in IMF and World Bank meeting.)

Published On - 1:37 pm, Mon, 12 April 21