SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ನೀಡಲು ಹೊರಟಿದ್ದ ಸರ್ಕಾರಕ್ಕೆ ತೀವ್ರ ಮುಖಭಂಗ: ಅಂಕ ನೀಡಲು ಹೈಕೋರ್ಟ್ ಆದೇಶ

SSLC Exam Grading Controversy: ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆಯಲ್ಲಿ ಅಂಕಗಳ ಬದಲಿಗೆ ಗ್ರೇಡ್ ನೀಡಲು ಮುಂದಾಗಿದ್ದ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆಯೊಡ್ಡಿದೆ. ಇದರಿಂದ ಸರ್ಕಾರಕ್ಕೆ ಭಾರಿ ಮುಖಭಂಗವಾದಂತಾಗಿದೆ. ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದಿರುವ ಕೋರ್ಟ್, ಅಂಕಗಳನ್ನು ಕಡ್ಡಾಯವಾಗಿ ಫಲಿತಾಂಶದಲ್ಲಿ ಪ್ರಕಟಿಸುವಂತೆ ನಿರ್ದೇಶನ ನೀಡಿದೆ.

SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ನೀಡಲು ಹೊರಟಿದ್ದ ಸರ್ಕಾರಕ್ಕೆ ತೀವ್ರ ಮುಖಭಂಗ: ಅಂಕ ನೀಡಲು ಹೈಕೋರ್ಟ್ ಆದೇಶ
SSLC ಪರೀಕ್ಷೆಯಲ್ಲಿ ಗ್ರೆಡಿಂಗ್ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ
Image Credit source: tv9

Updated on: Apr 16, 2026 | 7:56 AM

ಬೆಂಗಳೂರು, ಏಪ್ರಿಲ್ 16: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Exam) ತೃತೀಯ ಭಾಷೆಗಳಿಗೆ (ಮುಖ್ಯವಾಗಿ ಹಿಂದಿಯನ್ನು ಗಮನದಲ್ಲಿಟ್ಟುಕೊಂಡು) ಕೇವಲ ಗ್ರೇಡ್ (Grading System) ನೀಡಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. ಹಿಂದಿ (Hindi) ವಿಷಯದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಮತ್ತು ಅವುಗಳನ್ನು ಒಟ್ಟು ಫಲಿತಾಂಶದ ಅಂಕಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮಹತ್ವದ ನಿರ್ದೇಶನ ನೀಡಿದೆ. ಇದು, ಸರ್ಕಾರದ ನಿರ್ಧಾರದಿಂದ ಆತಂಕಕ್ಕೊಳಗಾಗಿದ್ದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ದೊಡ್ಡ ಸಮಾಧಾನ ತಂದುಕೊಟ್ಟಿದೆ.

ಹಿಂದಿ ವಿಷಯಕ್ಕೆ ಅಂಕಗಳ ಬದಲಿಗೆ ಕೇವಲ ಎ, ಬಿ, ಸಿ ಅಂತಹ ಗ್ರೇಡ್‌ಗಳನ್ನು ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್ ನಾಯ್ಕ್ ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಇಎಸ್ ಇಂದಿರೇಶ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಈ ಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಮಾರಕ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಶಿಕ್ಷಣ ಹಕ್ಕು ಮತ್ತು ಪರೀಕ್ಷಾ ನಿಯಮಾವಳಿಗಳ ಪ್ರಕಾರ ಪ್ರತಿ ವಿಷಯದ ಅಂಕಗಳು ಪಾರದರ್ಶಕವಾಗಿರಬೇಕು. ತೃತೀಯ ಭಾಷೆಯನ್ನು ಕೇವಲ ಗ್ರೇಡ್‌ಗೆ ಸೀಮಿತಗೊಳಿಸುವುದು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಪೀಠ ಎಚ್ಚರಿಸಿದೆ.

ತೃತೀಯ ಭಾಷೆ ಗ್ರೇಡಿಂಗ್ ವಿವಾದದ ಹಿನ್ನೆಲೆ

ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ತೃತೀಯ ಭಾಷೆ (ಹೆಚ್ಚಾಗಿ ಹಿಂದಿ, ಇತರ ಭಾಷೆಗಳು) ವಿಷಯಕ್ಕೆ ಸಂಬಂಧಿಸಿದಂತೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲು ಶಿಕ್ಷಣ ಇಲಾಖೆ ಆಸಕ್ತಿ ತೋರಿತ್ತು. ಇತ್ತೀಚೆಗೆ ಆ ಬಗ್ಗೆ ಅಧಿಕೃತ ಆದೇಶ ಘೋಷಣೆ ಮಾಡಿತ್ತು. ಪ್ರಥಮ ಮತ್ತು ದ್ವಿತೀಯ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ತೃತೀಯ ಭಾಷೆಗೆ ನೀಡದೆ, ಅದನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿತ್ತು. ಇದು ಹಿಂದಿ ಭಾಷಾ ಶಿಕ್ಷಕರ ಸಂಘ ಮತ್ತು ಪೋಷಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?

ಈ ವಿವಾದವು ಕೇವಲ ಅಂಕಗಳಿಗೆ ಸೀಮಿತವಾಗದೆ, ಭಾಷಾ ನೀತಿಯ ಸಂಘರ್ಷವಾಗಿಯೂ ಬದಲಾಗಿತ್ತು. ತೃತೀಯ ಭಾಷೆಗೆ ಅಂಕ ನೀಡದಿದ್ದರೆ ವಿದ್ಯಾರ್ಥಿಗಳು ಆ ವಿಷಯದ ಕಡೆಗೆ ಆಸಕ್ತಿ ಕಳೆದುಕೊಳ್ಳುತ್ತಾರೆ ಮತ್ತು ಇದು ಭವಿಷ್ಯದಲ್ಲಿ ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರಿಗೆ ಹಿನ್ನಡೆಯಾಗಬಹುದು ಎಂಬ ವಾದ ಕೇಳಿಬಂದಿತ್ತು. ಈಗ ಹೈಕೋರ್ಟ್ ನೀಡಿದ ಆದೇಶವು ಸರ್ಕಾರದ ಈ ವಿವಾದಾತ್ಮಕ ನಿರ್ಧಾರಕ್ಕೆ ಬ್ರೇಕ್ ಹಾಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us