
ಬೆಂಗಳೂರು, (ಸೆಪ್ಟೆಂಬರ್ 28): ಪಾರದರ್ಶಕ ಹಾಗೂ ತಂತ್ರಜ್ಞಾನಾಧಾರಿತ ವ್ಯವಸ್ಥೆ ನಿರ್ಮಾಣದ ಅಗತ್ಯ ಹಿನ್ನಲೆಯಲ್ಲಿ ಸಮಗ್ರ ಪೊಲೀಸ್ ಸೇವೆಗಳ ಸುಧಾರಣೆಗೆ ಮೂರು ತಜ್ಞರ ಸಮಿತಿಗಳನ್ನು ರಚನೆ ಮಾಡಿ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಜನರಿಗೆ ಸಿಗುವ ಸಮಗ್ರ ಪೊಲೀಸ್ ಸೇವೆಗಳ ಸುಧಾರಣೆಗೆ ನಿವೃತ್ತ ಡಿಜಿ ಮತ್ತು ಐಜಿಪಿ ಆರ್.ಕೆ.ದತ್ತ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದರೆ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಂ ಎನ್ ರೆಡ್ಡಿ ನೇತೃತ್ವದಲ್ಲಿ ಪೋಲಿಸ್ ಇಲಾಖೆಯ ಸಮಗ್ರ ಆಧುನೀಕರಣಕ್ಕೂ ಸಮಿತಿ ರಚನೆ ಮಾಡಲಾಗಿದೆ. ಹಾಗೇ ಪೋಲಿಸ್ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಗೆ ನಿವೃತ್ತ ಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ಸಮಿತಿ ರಚಿಸಿ ಗೃಹ ಇಲಾಖೆ ಇಂದು (ಸೆ.28) ಆದೇಶ ಹೊರಡಿಸಿದ್ದು, ಅಧ್ಯಯನ ನಡೆಸಿ ಅಗತ್ಯ ಶಿಫಾರಸ್ಸುಗಳೊಂದಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ಪ್ರಸ್ತುತ ವ್ಯವಸ್ಥೆಯಲ್ಲಿರುವ ಕೊರತೆಗಳು ಹಾಗೂ ಅವುಗಳಿಗೆ ಅಗತ್ಯವಿರುವ ಸಾಂಸ್ಥಿಕ ಮತ್ತು ತಾಂತ್ರಿಕ ಪರಿಹಾರಗಳನ್ನು ಸಮಿತಿ ಪರಿಶೀಲಿಸಲಿದೆ. ಹಾಗಾದ್ರೆ, ಈ ಮೂರು ಸಮಿತಿಗೆ ಯಾರ್ಯಾರು ನೇತೃತ್ವದ, ಸಮಿತಿ ರಚನೆ ಉದ್ದೇಶವೇನು? ಎನ್ನುವುದು ಈ ಕೆಳಗಿನಂತಿದೆ.
ಸಮಿತಿ 1: ರಾಜ್ಯದಲ್ಲಿ ಜನರಿಗೆ ಸಿಗುವ ಸಮಗ್ರ ಪೊಲೀಸ್ ಸೇವೆಗಳ ಸುಧಾರಣೆಗೆ ನಿವೃತ್ತ ಡಿಜಿ ಮತ್ತು ಐಜಿಪಿ ಆರ್.ಕೆ.ದತ್ತ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಪೊಲೀಸ್ ಸೇವೆಗಳ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಿ, ಅವುಗಳನ್ನು ಇನ್ನಷ್ಟು ಪರಿಣಾಮಕಾರಿ, ತ್ವರಿತ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಸಮಗ್ರ ಪೊಲೀಸ್ ಸೇವೆಗಳ ಸುಧಾರಣಾ ಸಮಿತಿಯನ್ನು ರಚಿಸಲಾಗಿದೆ. ಎಫ್‌ಐಆರ್ ದಾಖಲಿಸುವುದು, ದೂರು ಸ್ವೀಕರಿಸುವುದು, ಪೊಲೀಸ್ ಠಾಣೆಗಳ ಕಾರ್ಯವೈಖರಿ, ತುರ್ತು ಸೇವೆಗಳು, ಕಳೆದುಹೋದ ವಸ್ತುಗಳ ವರದಿ, ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳು, ಅನುಮತಿಗಳು, ಪ್ರಮಾಣಪತ್ರಗಳು ಸೇರಿದಂತೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ವಿವಿಧ ಆನ್‌ಲೈನ್ ಹಾಗೂ ನೇರ ಸೇವೆಗಳು ಲಭ್ಯವಿವೆ. ಈ ಸೇವೆಗಳ ಗುಣಮಟ್ಟ, ಲಭ್ಯತೆ, ಸಮಯಬದ್ಧತೆ ಮತ್ತು ಜನರಿಗೆ ಆಗುತ್ತಿರುವ ಅನುಕೂಲವನ್ನು ಸಮಗ್ರವಾಗಿ ಪರಿಶೀಲಿಸಿ ಮತ್ತಷ್ಟು ಸುಧಾರಿಸುವ ಬಗ್ಗೆ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಮಿತಿ 2: ಕರ್ನಾಟಕ ಪೊಲೀಸ್ ಇಲಾಖೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ ಹಾಗೂ ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಇಲಾಖೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಂ ಎನ್ ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಆಧುನೀಕರಣ ಸಮಿತಿಯನ್ನು ರಚಿಸಲಾಗಿದೆ. ಅಪರಾಧಗಳ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳು, ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆ, ಸೈಬರ್ ಅಪರಾಧಗಳ ಹೆಚ್ಚಳ ಹಾಗೂ ಹೊಸ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮೂಲಸೌಕರ್ಯ, ಸಂವಹನ ವ್ಯವಸ್ಥೆ, ಸೈಬರ್ ಸಾಮರ್ಥ್ಯ, ತರಬೇತಿ, ಪೊಲೀಸ್ ವಸತಿ ಮತ್ತು ಸಿಬ್ಬಂದಿ ಕಲ್ಯಾಣ ಸೇರಿದಂತೆ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಪ್ರಸ್ತುತ ಮೂಲಸೌಕರ್ಯ ಮತ್ತು ಉಪಕರಣಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ತುರ್ತು ಅಗತ್ಯಗಳನ್ನು ಗುರುತಿಸಿ, ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಬಹುದಾದ ಆಧುನೀಕರಣ ಯೋಜನೆಯನ್ನು ರೂಪಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸಮಿತಿ 3: ಪೊಲೀಸ್ ಇಲಾಖೆಯ ಪ್ರಸ್ತುತ ಕಾರ್ಯಭಾರ, ಬದಲಾಗುತ್ತಿರುವ ಕರ್ತವ್ಯಗಳು ಹಾಗೂ ಭವಿಷ್ಯದಲ್ಲಿ ಎದುರಾಗಲಿರುವ ಅಗತ್ಯಗಳಿಗೆ ಅನುಗುಣವಾಗಿ ಇಲಾಖೆಯ ವೃಂದ ರಚನೆ, ಹುದ್ದೆಗಳ ವರ್ಗೀಕರಣ, ಹುದ್ದೆಗಳ ಸಂಖ್ಯೆ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಶಿಫಾರಸುಗಳನ್ನು ನೀಡಲು ನಿವೃತ್ತ ಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.ಪೊಲೀಸ್ ಇಲಾಖೆಯ ಕರ್ತವ್ಯಗಳ ಸ್ವರೂಪದಲ್ಲಿ ನಿರಂತರ ಬದಲಾವಣೆಗಳಾಗುತ್ತಿದ್ದು, ಹೊಸ ಸವಾಲುಗಳು ಮತ್ತು ಹೆಚ್ಚುತ್ತಿರುವ ಜವಾಬ್ದಾರಿಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವೃಂದ ರಚನೆ ಹಾಗೂ ಹುದ್ದೆಗಳ ಮಂಜೂರಾತಿ ಬಲವನ್ನು ಸಮಗ್ರವಾಗಿ ಪರಿಶೀಲಿಸುವುದರ ಜೊತೆಗೆ, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಇಲಾಖೆಯ ಮಾನವ ಸಂಪನ್ಮೂಲ ಯೋಜನೆಯನ್ನು ರೂಪಿಸುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.