ನನ್ನದು ಗರ್ವ ಅಲ್ಲ, ಕನ್ನಡಿಗನ ಸಹಜ ಸ್ವಾಭಿಮಾನ: ದೇವೇಗೌಡ ‘ಗರ್ವಭಂಗ’ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

| Updated By: Rakesh Nayak Manchi

Updated on: Mar 30, 2024 | 4:58 PM

ಐಟಿ ನೋಟಿಸ್ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ಹೊರಹಾಕಿದ್ದ ಸಿದ್ದರಾಮಯ್ಯ ಅವರು ಇದೀಗ ಮತ್ತೊಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಹೆಚ್​ಡಿ ದೇವೇಗೌಡ ವಿರುದ್ಧ ಕಿಡಿಕಾರಿದ್ದಾರೆ. ನನಗೆ ಗರ್ವ ಇಲ್ಲ, ಅಹಂಕಾರವೂ ಇಲ್ಲ. ಕನ್ನಡಿಗನ ಸಹಜ ಸ್ವಾಭಿಮಾನ ಇದು ಎಂದಿದ್ದಾರೆ.

ನನ್ನದು ಗರ್ವ ಅಲ್ಲ, ಕನ್ನಡಿಗನ ಸಹಜ ಸ್ವಾಭಿಮಾನ: ದೇವೇಗೌಡ ಗರ್ವಭಂಗ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
ನನ್ನದು ಗರ್ವ ಅಲ್ಲ, ಕನ್ನಡಿಗನ ಸಹಜ ಸ್ವಾಭಿಮಾನ: ದೇವೇಗೌಡ ಗರ್ವಭಂಗ ಮಾತಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
Follow us on

ಬೆಂಗಳೂರು, ಮಾ.30: ನನಗೆ ಗರ್ವ ಇಲ್ಲ, ಅಹಂಕಾರವೂ ಇಲ್ಲ. ಕನ್ನಡಿಗನ ಸಹಜ ಸ್ವಾಭಿಮಾನ ಇದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಹೆಚ್​ಡಿ ದೇವೇಗೌಡ (HD Deve Gowda) ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ನನ್ನ ಗರ್ವಭಂಗ ಮಾಡುತ್ತೇನೆಂದು ಶಪಥ ಮಾಡಿದ್ದಾರೆ. ನನಗೆ ಗರ್ವವೂ ಅಲ್ಲ, ಅಹಂಕಾರವೂ ಅಲ್ಲ. ನನ್ನದು ಕನ್ನಡಿಗರ ರಕ್ತದ ಕಣಕಣದಲ್ಲಿರುವ ಸ್ವಾಭಿಮಾನ ಎಂದರು.

ಕನ್ನಡ-ಕನ್ನಡಿಗ-ಕರ್ನಾಟಕದ ರಕ್ಷಣೆಗಾಗಿ ತಲೆ ಎತ್ತಿ, ಎದೆಯುಬ್ಬಿಸಿ ಪ್ರಶ್ನಿಸುವ ಮತ್ತು ಹೋರಾಟ ನಡೆಸುವ ಸ್ವಾಭಿಮಾನ ಎನ್ನುವುದನ್ನು ಅತ್ಯಂತ ವಿನಯಪೂರ್ವಕವಾಗಿ ಅವರ ಗಮನಕ್ಕೆ ತರಬಯಸುತ್ತೇನೆ. ವೈಯಕ್ತಿಕ ಇಲ್ಲವೆ ರಾಜಕೀಯ ಲಾಭಕ್ಕಾಗಿ ನಾನು ಯಾರ ಜೊತೆಯಲ್ಲಿಯೂ ರಾಜಿ ಮಾಡಿಕೊಳ್ಳಲಾರೆ. ಅಂತಹ ಪರಿಸ್ಥಿತಿ ಬಂದೊದಗಿದರೆ ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ ವಿನ: ಕರ್ನಾಟಕದ ಹಿತಾಸಕ್ತಿಯ ವಿರೋಧಿಗಳ ಜೊತೆಯಲ್ಲಿ ನಿಮ್ಮಂತೆ ಹೊಂದಾಣಿಕೆ ಮಾಡಿಕೊಳ್ಳಲಾರೆ ಎಂದಿದ್ದಾರೆ.

ದೇವೇಗೌಡರ ಜೊತೆ ರಾಜಕೀಯವಾಗಿ ನನಗೆ ಭಿನ್ನಾಭಿಪ್ರಾಯವಿದ್ದರೂ ನಮ್ಮ ನೆಲ, ಜಲ ಮತ್ತು ಭಾಷೆಯ ರಕ್ಷಣೆಯ ಬಗೆಗಿನ ಅವರ ನಿಲುವಿನ ಬಗ್ಗೆ ಗೌರವ ಇತ್ತು. ಆದರೆ ಕಳೆದ 10 ವರ್ಷಗಳ ಅಧಿಕಾರವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೆಜ್ಜೆಹೆಜ್ಜೆಗೂ ಕರ್ನಾಟಕದ ಹಿತಾಸಕ್ತಿಯ ವಿರುದ್ಧವೇ ಕೆಲಸ ಮಾಡಿದೆ. ನಾಡಧ್ವಜಕ್ಕೆ ವಿರೋಧ, ಹಿಂದಿ ಹೇರಿಕೆ, ಕಾವೇರಿ, ಕೃಷ್ಣ, ಮಹದಾಯಿ ಜಲವಿವಾದಗಳಲ್ಲಿ ಅನ್ಯಾಯ, ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗ ಯುವಜನರಿಗೆ ವಂಚನೆ, ಹೀಗೆ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ದ್ರೋಹ ಎಸಗುತ್ತಾ ಬಂದಿದೆ. ಹೀಗಿದ್ದರೂ ದೇಶದ ಎಲ್ಲ ಸಮಸ್ಯೆಗಳಿಗೆ ಮೋದಿ ಮತ್ತು ಶಾ ಬಳಿ ಪರಿಹಾರ ಇದೆ ಎಂದು ಹೇಳುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯಾದರೂ ನಿಮ್ಮನ್ನು ಚುಚ್ಚಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತೆರಿಗೆ ಭಯೋತ್ಪಾದನೆಯಿಂದ ಕಾಂಗ್ರೆಸ್ ಮಣಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಭ್ರಮೆ -ಸಿಎಂ ಸಿದ್ದರಾಮಯ್ಯ

ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯಕ್ಕೆ ಕ್ಷಮೆಯೇ ಇಲ್ಲ. ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರದ ಖಜಾನೆಗೆ ಸಂದಾಯವಾಗುವ ಕನ್ನಡಿಗರ 1 ರೂ.ಗೆ ಪ್ರತಿಯಾಗಿ ಕೇವಲ 13 ಪೈಸೆಯಷ್ಟು ಹಣ ಮಾತ್ರ ಕರ್ನಾಟಕಕ್ಕೆ ವಾಪಸು ಬರುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೂಡಾ ಕೇಂದ್ರ ಸರ್ಕಾರದ ಅನ್ಯಾಯವನ್ನು ಕೂಗಿ ಕೂಗಿ ಹೇಳುತ್ತಿವೆ. ಆದರೆ ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಮಾತ್ರ ನಮ್ಮ ನೆಲ-ಜಲ-ಭಾಷೆಯ ವಿರೋಧಿಗಳ ಜೊತೆಯಲ್ಲಿ ರಾಜಿ ಮಾಡಿಕೊಂಡು ಕನ್ನಡಿಗರಿಗೆ ದ್ರೋಹ ಎಸಗಿದೆ ಎಂದರು.

ಸನ್ಮಾನ್ಯ ದೇವೇಗೌಡರೇ, ಎಪ್ಪತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು ಕನ್ನಡಿಗರ ಪ್ರೀತಿ-ಅಭಿಮಾನವನ್ನು ಉಂಡು ಬೆಳೆದ ನೀವು, ನಾವು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿಯೇ ಚುನಾವಣೆ ನಡೆಸುತ್ತೇವೆ ಎಂಬ ಶರಣಾಗತಿಯ ಹೇಳಿಕೆಯನ್ನು ನೀಡುವಾಗ ಕನಿಷ್ಠ ನಿಮ್ಮ ಆತ್ಮಾಭಿಮಾನವೂ ಕುಟುಕಲಿಲ್ಲವೇ? ಕನ್ನಡ-ಕರ್ನಾಟಕ ವಿರೋಧಿ ನಾಯಕನಿಗೆ ಈ ರೀತಿ ಶರಣಾಗುವುದು ಸಮಸ್ತ ಕನ್ನಡಿಗರಿಗೆ ಮಾಡುವ ದ್ರೋಹ ಎಂದು ನಿಮಗೆ ಅನಿಸಲಿಲ್ಲವೇ? ನಿಮ್ಮೊಳಗಿನ ರಾಜಕೀಯ ನಾಯಕ ಅಷ್ಟೊಂದು ದುರ್ಬಲ ಅಸಹಾಯಕನಾಗಿ ಹೋದನೇ? ಎಂದು ಪ್ರಶ್ನಿಸಿದರು.

ತಮ್ಮ ರಾಜಕೀಯ ಜೀವನದುದ್ದಕ್ಕೂ ಪ್ರಾದೇಶಿಕ ಆಶೋತ್ತರಗಳನ್ನು ಪ್ರತಿಪಾದಿಸಿಕೊಂಡು ಕೇಂದ್ರದ ಅಧಿಪತ್ಯವನ್ನು ಪ್ರಶ್ನಿಸುತ್ತಾ ಬಂದ ದೇವೇಗೌಡರು ಈ ಇಳಿವಯಸ್ಸಿನಲ್ಲಿ ಈ ರೀತಿಯ ರಾಜಕೀಯ ರಾಜಿ ಮಾಡಿಕೊಳ್ಳುವಂತೆ ಮಾಡಿದ ಶಕ್ತಿ ಮತ್ತು ವ್ಯಕ್ತಿ ಯಾರೇ ಇರಬಹುದು. ಆದರೆ ದೇವೇಗೌಡರು, ಕೇವಲ ರಾಜಕೀಯ ಲಾಭಕ್ಕಾಗಿ ಮೈತ್ರಿ ಮಾಡಿಕೊಂಡು ಸಮಸ್ತ ಆರುವರೆ ಕೋಟಿ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದ್ದಾರೆ. ಈ ದ್ರೋಹಕ್ಕಾಗಿ ದೇವೇಗೌಡರು ಮತ್ತು ಅವರ ಪಕ್ಷ ಭಾರಿ ಬೆಲೆ ತೆರಲಿರುವುದು ಖಚಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹೆಚ್​ಡಿ ದೇವೇಗೌಡ ಹೇಳಿದ್ದೇನು?

ಶುಕ್ರವಾರ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ್ದ ಹೆಚ್​ಡಿ ದೇವೇಗೌಡ, ದುರ್ಬಲ ಪ್ರಧಾನಿ, ಪ್ರಬಲ ಮುಖ್ಯಮಂತ್ರಿ ಎಂದು ಹೇಳುವ ಸಿದ್ದರಾಮಯ್ಯ ಅವರ ಗರ್ವ ಇದೇ ಲೋಕಸಭಾ ಚುನಾವಣೆಯಲ್ಲಿ ಭಂಗವಾಗಬೇಕು ಎಂದು ಹೇಳಿದ್ದರು. ಜಗತ್ತು ಮೆಚ್ಚಿದ ಪ್ರಧಾನಿ ಮೋದಿ ಅವರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಮೈಸೂರು-ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಮೈತ್ರ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಮಾಡಬೇಕು ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ