ಹಾಸನದಲ್ಲಿ 5 ಲಕ್ಷ ಸಾಲಕ್ಕೆ 19 ಲಕ್ಷ ರೂ. ಬಡ್ಡಿ, ಬಡ ಕುಟುಂಬದ ಕಣ್ಣೀರು: ರಾಜ್ಯದಲ್ಲಿ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಮಾಹಿತಿ
ಮೈಕ್ರೋ ಫೈನಾನ್ಸ್ ಜನರ ಜೀವ ಹಿಂಡುತ್ತಿದ್ದು, ಮರಣ ಶಾಸನ ಬರೆಯುತ್ತಿವೆ. ಕರ್ನಾಟಕದಲ್ಲಿ ಸಾಲ ಕೊಟ್ಟವರ ಕಾಟಕ್ಕೆ ಐವರು ಬಲಿಯಾಗಿದ್ದಾರೆ. ಇನ್ನೂ ಹಲವರು ಊರು, ಮನೆಯನ್ನೇ ತೊರೆದಿದ್ದಾರೆ. ಹಾಸನ ಜಿಲ್ಲೆಯಲ್ಲೂ ಬಡ್ಡಿ ದಂಧೆಗೆ ಸಿಲುಕಿ ಬಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ವಿವರಗಳಿಗೆ ಮುಂದೆ ಓದಿ.

ಬೆಂಗಳೂರು, ಜನವರಿ 25: ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಮೀಟರ್ ಬಡ್ಡಿ ದಂಧೆಗೆ ಸಿಲುಕಿ ಬಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. 5 ಲಕ್ಷ ರೂಪಾಯಿ ಸಾಲಕ್ಕೆ 19 ಲಕ್ಷ ರೂ. ಬಡ್ಡಿ, 40 ಸಾವಿರ ರೂ. ಸಾಲಕ್ಕೆ 4 ಲಕ್ಷ ರೂ. ಬಡ್ಡಿ ಅಂದರೆ, 10 ಪಟ್ಟು ಬಡ್ಡಿ ಕಟ್ಟಿದರೂ ಮೀಟರ್ ಬಡ್ಡಿ ದಂಧೆಕೋರರ ಧನದಾಹ ಕಡಿಮೆಯಾಗಿಲ್ಲ. ಪಡೆದಿದ್ದ ಸಾಲಕ್ಕೆ ಬಡ್ಡಿ ಕಟ್ಟಲೂ ಆಗದೆ ವೃದ್ಧೆಯರು ಕಣ್ಣೀರಿಟ್ಟಿದ್ದಾರೆ. ವಿಡಿಯೋ ಮೂಲಕ ಅಸಹಾಯಕತೆ ತೋಡಿಕೊಂಡಿದ್ದಾರೆ.
ಗದಗ-ಬೆಟಗೇರಿಯಲ್ಲಿ ಯುವಕನಿಗೆ ಮಾರಣಾಂತಿಕ ಹಲ್ಲೆ
ಗದಗ-ಬೆಟಗೇರಿ ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಸಾಲ ಪಡೆದಿದ್ದ ದಶರಥ್ ಎಂಬಾತನನ್ನು ಕೊಠಡಿಯಲ್ಲಿ ಕೂಡಿಹಾಕಿ, ಅರೆಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರೌಡಿಶೀಟರ್ ಡಿಸ್ಕವರಿ ಮಂಜು, ಮಂಜುನಾಥ ಹಂಸನೂರು, ಮಹೇಶ್ ಹಂಸನೂರು, ಹನುಮಂತ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.
ಮಂಡ್ಯ: ಮೀಟರ್ ಬಡ್ಡಿ ದಂಧೆಕೋರರ ಕಾಟಕ್ಕೆ ಯುವಕ ಆತ್ಮಹತ್ಯೆ
ಮಂಡ್ಯ ಜಿಲ್ಲೆ ವಳಗೆರೆ ಮೆಣಸ ಗ್ರಾಮದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಕಾಟಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಖಾಸಗಿ ವ್ಯಕ್ತಿಗಳಿಂದ 30 ಲಕ್ಷ ರೂಪಾಯಿ ಸಾಲ ಮಾಡಿ, ಲಕ್ಷ ಲಕ್ಷ ರೂ. ಬಡ್ಡಿ ಕಟ್ಟಿದ್ದ. ಆದರೂ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿತ್ತು. ಮೈಕ್ರೋ ಫೈನಾನ್ಸ್ನಲ್ಲೂ ಸಾಲ ಪಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಲೋಹಿತ್ ನೇಣಿಗೆ ಕೊರಳೊಡ್ಡಿದ್ದಾನೆ.
ಬೆಳಗಾವಿಯಲ್ಲಿ ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ
ಬೆಳಗಾವಿಯಲ್ಲೂ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿಮೀರಿದೆ. ಮಾಂಗಲ್ಯ ಮಾರಿಯಾದರೂ ಹಣ ತುಂಬುವಂತೆ ಮಹಿಳೆಯರಿಗೆ ಟಾರ್ಚರ್ ನೀಡಲಾಗಿದೆ. ಖಾನಾಪುರದ ತೊಲಗಿಯಲ್ಲಿ ಘಟನೆ ನಡೆದಿದ್ದು, ಬೆಳಗಾವಿ ಡಿಸಿ ಕಚೇರಿ ಮುಂದೆ ತಾಳಿ ತೋರಿಸಿ 50ಕ್ಕೂ ಹೆಚ್ಚು ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆ ಯತ್ನಿಸಿದ್ದಾರೆ. ಹೊಳೆಪ್ಪ ದಡ್ಡಿ ಎಂಬಾತ ಸಬ್ಸಿಡಿ ಹೆಸರಿನಲ್ಲಿ ಮಹಿಳೆಯರಿಗೆ ಸಾಲ ಕೊಡಿಸಿ ಮೋಸ ಮಾಡಿದ್ದಾನೆ.
ಇತ್ತ ರಾಯಬಾಗದ ಖೇಮಲಾಪುರ ಗ್ರಾಮದಲ್ಲಿ ಮನೆಗೆ ಬಂದು ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. 1 ತಿಂಗಳು ಹಣ ಪಾವತಿ ತಡವಾಗಿದ್ದಕ್ಕೆ ಮನೆಗೆ ಬಂದು ಠಿಕಾಣಿ ಹೂಡಿದ್ದಾರೆ. ರೂಪಾ, ಮಾಲಾ, ರೇಖಾ ಎಂಬುವವರಿಗೆ ಕಿರುಕುಳ ನೀಡಲಾಗಿದೆ. ಮಗನ ಚಿಕಿತ್ಸೆಗೆಂದು ರೇಖಾ ಎಂಬುವರು ವಿವಿಧ ಫೈನಾನ್ಸ್ಗಳಲ್ಲಿ ಒಟ್ಟು 4 ಲಕ್ಷ ಸಾಲ ಮಾಡಿದ್ರು. ಇದೀಗ ಸಾಲ ಕಟ್ಟಲಾಗದೇ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ಟಾರ್ಚರ್: ರೈತ ಕುಟುಂಬ ನಾಪತ್ತೆ
ವಿಜಯನಗರ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಟಾರ್ಚರ್ಗೆ ರೈತ ಕುಟುಂಬ ನಾಪತ್ತೆಯಾಗಿದೆ. ಮನೆ ನಿರ್ಮಾಣಕ್ಕೆ ರೈತ ರವಿ ಎಂಬುವರು ಸಾಲ ಮಾಡಿದ್ದರು. ಸಾಲ ಮರುಪಾವತಿಸುವಂತೆ ದಾವಣಗೆರೆಯ ALATUM CREDE HOME FINANCE ಸಂಸ್ಥೆ ನಿರಂತರ ಕಿರುಕುಳ ನೀಡಿದೆಯಂತೆ. ಅಲ್ಲದೇ, ಮನೆಗೆ ಫೈನಾನ್ಸ್ ಸಿಬ್ಬಂದಿ ನೋಟಿಸ್ ಅಂಟಿಸಿದ್ದಾರೆ. ಇದ್ರಿಂದ ಬೇಸತ್ತ ಕುಟುಂಬ ಮನೆಗೆ ಬೀಗ ಹಾಕಿ ನಾಪತ್ತೆ ಆಗಿದೆ. ಹರಪನಹಳ್ಳಿ ತೆಲಗಿ ಬಳಿಯ ಶಿವಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಹಾವೇರಿಯಲ್ಲೂ ಮೈಕ್ರೋಫೈನಾನ್ಸ್ ಕಾಟಕ್ಕೆ ಬಂಕಾಪುರ ಗ್ರಾಮದ ನಾಗಪ್ಪ ಗುಂಜಾಳ ನೇಣಿಗೆ ಶರಣಾಗಿದ್ದಾರೆ. ಕಿರಾಣಿ ಅಂಗಡಿ ನಡೆಸಲು ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್ಗಳಲ್ಲಿ ನಾಗಪ್ಪ 15 ಲಕ್ಷ ರೂಪಾಯಿ ಸಾಲ ಮಾಡಿದ್ದರು. ನಿತ್ಯ ಅಂಗಡಿ ಮುಂದೆ ಬಂದು ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದ್ದು, ಪತ್ನಿ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ಕಿರುಕುಳ: ಊರು ಬಿಟ್ಟ ಜನ, ಮಹಿಳೆಯರ ಕಣ್ಣೀರು, ಮೂವರು ಬಲಿ
ವಿಜಯಪುರದಲ್ಲಿ ಕೂಡ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಜೋರಾಗಿದೆ. ಪೊರಕೆ ತಯಾರಿಸಿ ಮಾರಾಟ ಮಾಡುವ ಕೊಂಚಿಕೊರವರ ಓಣಿ ಮಹಿಳೆಯರಿಗೆ ಟಾರ್ಚರ್ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪೊರಕೆ ಮಾರಾಟವಾಗದೆ ಯಲ್ಲವ್ವ, ಸತ್ಯವ್ಯ ಎಂಬುವರು, 2 ತಿಂಗಳಿಂದ ಕಂತು ಕಟ್ಟಿರಲಿಲ್ಲ. ಹೀಗಾಗಿ, ಕಂತು ಕಟ್ಟದಿದ್ರೆ ಆಧಾರ್ ರದ್ದು ಮಾಡಿಸ್ತೇವೆ. ಬ್ಯಾಂಕ್ಗಳಲ್ಲಿ ಸಾಲ ಸಿಗದಂತೆ ಮಾಡ್ತೇವೆಂದು ಕಿರುಕುಳ ನೀಡ್ತಿದ್ದು, ಮನೆಯಿಂದ ಆಚೆ ಬರಲೂ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ.
ಮತ್ತೊಂದೆಡೆ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ರೆಗ್ಯುಲೇಷನ್ ಆಫ್ ಮನಿ ಲೆಂಡಿಂಗ್ ಬಿಲ್ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.
ಮಾಹಿತಿ: ಟಿವಿ9 ಜಿಲ್ಲಾ ವರದಿಗಾರರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




