
ಬೆಂಗಳೂರು, ಜೂನ್ 8: ಕರ್ನಾಟಕ ವಿಧಾನಪರಿಷತ್‌ನ 7 ಸ್ಥಾನಗಳಿಗೆ ನಡೆಯುವ ಚುನಾವಣೆ (Karnataka MLC Election) ತೀವ್ರ ಕುತೂಹಲ ಕೆರಳಿಸಿದೆ. ಜೆಡಿಎಸ್ (JDS) ಮತ್ತು ಬಿಜೆಪಿ (BJP) ಮೈತ್ರಿಕೂಟವು ಅಚ್ಚರಿಯ ನಡೆ ಪ್ರದರ್ಶಿಸಿದ್ದು, ಮೂರನೇ ಅಭ್ಯರ್ಥಿ ಗೋವಿಂದರಾಜು ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ನ 5ನೇ ಅಭ್ಯರ್ಥಿಯ ಅವಿರೋಧ ಆಯ್ಕೆಯ ಲೆಕ್ಕಾಚಾರಕ್ಕೆ ಭಾರಿ ತಿರುಗೇಟು ನೀಡಿದೆ. ಈ ಬೆಳವಣಿಗೆಯಿಂದಾಗಿ, 7 ಸ್ಥಾನಗಳಿಗೆ ಈಗ 8 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಕಾಂಗ್ರೆಸ್ ತನ್ನ 5ನೇ ಅಭ್ಯರ್ಥಿಯು ಸುಲಭವಾಗಿ, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ನಿರೀಕ್ಷಿಸಿತ್ತು. ಆದರೆ, ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ನಡೆದ ವ್ಯಾಪಕ ಸಮಾಲೋಚನೆಯ ನಂತರ, ಎನ್‌ಡಿಎ ಮೈತ್ರಿಕೂಟದಿಂದ ಗೋವಿಂದರಾಜು ಅವರನ್ನು ಮೂರನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ಗೆಲುವಿಗೆ 28 ಶಾಸಕರ ಮತಗಳ ಅಗತ್ಯವಿದೆ. ಮೈತ್ರಿಕೂಟದ ಸಂಖ್ಯಾಬಲವನ್ನು ಪರಿಗಣಿಸಿದರೆ, ಜೆಡಿಎಸ್ ಪಕ್ಷದ 18 ಶಾಸಕರು ಮತ್ತು ಬಿಜೆಪಿಯ 62 ಶಾಸಕರ ಮತಗಳು ಲಭ್ಯವಿವೆ. ಇದರ ಜೊತೆಗೆ ಪಕ್ಷೇತರ ಶಾಸಕ ಜನಾರ್ದನ ರೆಡ್ಡಿ ಮತ್ತು ಉಚ್ಚಾಟಿತ ಶಾಸಕ ಯತ್ನಾಳ್ ಅವರ ಮತಗಳೂ ಸಹ ಲಭ್ಯವಾಗುವ ಸಾಧ್ಯತೆ ಇದೆ. ಈ ಲೆಕ್ಕಾಚಾರದಲ್ಲಿ, ಎನ್‌ಡಿಎ ಅಭ್ಯರ್ಥಿ ಗೋವಿಂದರಾಜು ಅವರ ಗೆಲುವಿಗೆ ಸುಮಾರು 4 ರಿಂದ 5 ಹೆಚ್ಚುವರಿ ಮತಗಳ ಕೊರತೆ ಎದುರಾಗಲಿದೆ.
ಈ ಕೊರತೆಯನ್ನು ನೀಗಿಸಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಕೆಲವು ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿದ್ದು, ಮುಂದಿನ ತಂತ್ರಗಾರಿಕೆಗಳನ್ನು ರೂಪಿಸಲಾಗುತ್ತಿದೆ. 4-5 ಹೆಚ್ಚುವರಿ ಮತಗಳನ್ನು ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಹೆಚ್ಡಿ ದೇವೇಗೌಡಗೆ ತಪ್ಪಿದ ಎನ್‌ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ
ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ತಮ್ಮ ಅಭ್ಯರ್ಥಿ ಸುಲಭವಾಗಿ ಗೆಲ್ಲುವುದಿಲ್ಲ ಎಂಬ ಅರಿವಿದ್ದರೂ, ಕಾಂಗ್ರೆಸ್‌ನ ಅವಿರೋಧ ಆಯ್ಕೆಗೆ ಬ್ರೇಕ್ ಹಾಕಿ, ಚುನಾವಣೆ ಕಣವನ್ನು ರಂಗೇರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್‌ನ ಒಂದಷ್ಟು ಶಾಸಕರನ್ನು ಸಂಪರ್ಕಿಸಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಈ ಮೂಲಕ ಕಾಂಗ್ರೆಸ್‌ನಲ್ಲಿ ಸದ್ಯದ ಮಟ್ಟಿಗೆ ಆತಂಕ ಶುರುವಾಗಿದೆ. ಈ ಅಚ್ಚರಿಯ ನಡೆ ಕರ್ನಾಟಕ ವಿಧಾನಪರಿಷತ್ ಚುನಾವಣೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Mon, 8 June 26