ಕರ್ನಾಟಕದ ಹಲವೆಡೆ ಭಾರೀ ಮಳೆ; ಶಿವಮೊಗ್ಗದಲ್ಲಿ ಮರ ಬಿದ್ದು ಓರ್ವ ಸಾವು
ಬಿಸಿಲಿನ ಬೇಗೆಗೆ ಬೆಂದಿದ್ದ ಜನರಿಗೆ ವರುಣದೇವ ತಂಪೆರೆದಿದ್ದಾನೆ. ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೊರೆಬೈಲು ಗ್ರಾಮದ ಬಳಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಮರ ಬಿದ್ದು ಸಾವನ್ನಪ್ಪಿದರೆ, ದಾವಣಗೆರೆಯಲ್ಲಿ ಸಿಡಿಲಿಗೆ ಮೇಕೆಗಳು ಸಾವನ್ನಪ್ಪಿವೆ.
ಶಿವಮೊಗ್ಗ, ಏ.18: ರಾಜ್ಯಾದ್ಯಂತ ಹಲವೆಡೆ ಭರ್ಜರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಕೆಲವೆಡೆ ವರ್ಷದ ಮೊದಲ ಮಳೆಯಾಗಿದೆ. ಅದರಂತೆ ಶಿವಮೊಗ್ಗ(Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೊರೆಬೈಲು ಗ್ರಾಮದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಭಾರಿ ಗಾಳಿ, ಮಳೆಗೆ ಅಕೇಶಿಯಾ ಮರ ಬಿದ್ದು ಜಯಂತ್ ಭಟ್(64) ಎಂಬುವವರು ಸಾವನ್ನಪ್ಪಿದ್ದಾರೆ. ಕೋಣಂದೂರಿನಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಸಿಡಿಲಿಗೆ 25 ಮೇಕೆ ಸಾವು
ದಾವಣಗೆರೆ: ತಾಲ್ಲೂಕಿನ ಆನಗೋಡು ಸಮೀಪದ ಈಚಘಟ್ಟದಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆ, ಸಿಡಿಲಿಗೆ ಮೇಕೆಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಸಿಡಿಲು ಬಡಿದು 16 ಹೆಣ್ಣು ಮೇಕೆ, 9 ಗಂಡು ಸೇರಿ 25 ಮೇಕೆಗಳು ಸತ್ತಿದ್ದು, ಅಂದಾಜು ಐದು ಲಕ್ಷ ರೂ. ನಷ್ಟವಾಗಿದೆ. ಇನ್ನು ರೈತ ಮಹಿಳೆ ರೇವಣಿಭಾಯಿ ಪಾಪ್ಯಾನಾಯ್ಕ ಅವರಿಗೆ ಸೇರಿದ ಮೇಕೆಗಳು ಆಗಿದ್ದು, ಸ್ಥಳೀಯ ಶಾಸಕ ಕೆಎಸ್ ಬಸವಂತಪ್ಪ, ಕಂದಾಯ ಅಧಿಕಾರಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಪರಿಹಾರ ಕೊಡಿಸುವ ಭರವಸೆ ಕೊಟ್ಟಿದ್ದಾರೆ.
ಇದನ್ನೂ ಓದಿ:ವಿಜಯಪುರದಲ್ಲಿ ಭಾರೀ ಮಳೆ: ಸಿಡಿಲಿನ ಹೊಡೆತಕ್ಕೆ ನೆಲಕ್ಕುರುಳಿದ ಐತಿಹಾಸಿಕ ಮೆಹೆತರ್ ಮಹಲ್
ಜಿಲ್ಲೆಯ ಕೆಲ ಕಡೆ ಧಾರಾಕಾರ ಮಳೆ
ಬಾಗಲಕೋಟೆ: ಜಿಲ್ಲೆಯ ಹಲವೆಡೆ ಧಾರಾಕಾರ ವರುಣನ ಅಬ್ಬರ ಜೋರಾಗಿದ್ದು, ತೇರದಾಳ ಪಟ್ಟಣ, ಮುಧೋಳ ತಾಲೂಕಿನ ರನ್ನ ಬೆಳಗಲಿಯಲ್ಲಿ ಭರ್ಜರಿ ಮಳೆಯಾಗಿದೆ. ರನ್ನ ಬೆಳಗಲಿ ಗ್ರಾಮದಲ್ಲಿ ಒಂದು ತಾಸಿನಿಂದ ಸುರಿದ ಧಾರಾಕಾರ ಮಳೆಗೆ ರಸ್ತೆಯುದ್ದಕ್ಕೂ ಮಳೆ ನೀರು ಹರಿಯುತ್ತಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಬಳ್ಳಾರಿ, ವಿಜಯನಗರ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆ
ಅವಳಿ ಜಿಲ್ಲೆಗಳಾದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ. ಎರಡೂ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಮೇತ ಧಾರಾಕಾರ ಮಳೆಯಾಗಿದೆ. ಬಿಸಿಲಿನ ಧಗೆಗೆ ಬೆಂದಿದ್ದ ಜನರಿಗೆ ವರುಣ ತಂಪೇರಿದಿದ್ದಾನೆ. ವರುಣನ ಕೃಪೆಗೆ ಜನ ಪುಲ್ ಖುಷ್ ಆಗಿದ್ದಾರೆ. ಅದರಲ್ಲೂ ನಲಕ್ಕೆ ಬಿದ್ದ ಆಲಿಕಲ್ಲು ಆರಿಸಿಕೊಳ್ಳು ಜನ ಮುಗಿಬಿದ್ದಿದ್ದಾರೆ.
ಗದಗ-ಬೆಟಗೇರಿಯಲ್ಲಿ ಮಳೆರಾಯನ ಅವಾಂತರ
ಅವಳಿ ನಗರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಶಿರಹಟ್ಟಿಯಲ್ಲೂ ಮಳೆರಾಯ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಗಾಳಿ – ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದೆ. ನಡುರಸ್ತೆಯಲ್ಲಿ ಬಿದ್ದ ಮರದಿಂದ ಸಂಚಾರ ಬಂದ್ ಆಗಿದ್ದು, ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಸ್ತೆ ಮದ್ಯ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ:ದರ್ಶನ್ ಚುನಾವಣಾ ಪ್ರಚಾರ: ಮಳವಳ್ಳಿ ಭಾಗದಲ್ಲಿ ಜೋರು ಮಳೆ, ತೋಯಿಸಿಕೊಳ್ಳುತ್ತಾ ಭಾಷಣ ಕೇಳಿದ ಜನ!
ಸಾಧಾರಣ ಮಳೆ, ಭಾರೀ ಬಿರುಗಾಳಿಗೆ ಮನೆಯ ಮೇಲ್ಚಾವಣಿಗೆ ಹಾನಿ
ಚಾಮರಾಜನಗರ: ಹನೂರು ತಾಲೂಕಿನ ಅಜ್ಜೀಪುರ ಬಳಿಯ ಪಚ್ಚೆಗೌಡನದೊಡ್ಡಿ ಗ್ರಾಮದಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ಅಪಾರ ಬೆಳೆ ನಾಶವಾಗಿದೆ. ಜೊತೆಗೆ ದೊಮ್ಮನಗದ್ದೆ ಗ್ರಾಮದ ಶಿವರಾಜ್ ಎಂಬುವವರ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ. ಬೆಳೆ ನಾಶಕ್ಕೆ ಪರಿಹಾರ ಕಲ್ಪಿಸಿಕೊಡುವಂತೆ ರೈತರು ಆಗ್ರಹಿಸಿದ್ದಾರೆ.
ಮಂಡ್ಯ, ಮೈಸೂರು ಸೇರಿದಂತೆ ವರ್ಷದ ಮೊದಲ ಮಳೆ
ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ವರ್ಷದ ಮೊದಲ ಮಳೆ ಆಗಮನದಿಂದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಮೈಸೂರಿನಲ್ಲೂ ಕೆಲಕಾಲ ಮಳೆರಾಯ ತಂಪೆರೆದಿದ್ದು, ವರ್ಷದ ಮೊದಲ ಮಳೆ ಕಂಡು ಜನ ಸಂತಸಗೊಂಡರು.
ಹಾಸನ ಜಿಲ್ಲೆಯ ವಿವಿಧೆಡೆ ಮೊದಲ ಮಳೆ
ಹಾಸನ ಜಿಲ್ಲೆಯ ವಿವಿಧೆಡೆ ಮೊದಲ ಮಳೆಯಾಗಿದ್ದು, ಗಾಳಿ, ಗುಡುಗು-ಮಿಂಚು ಸಹಿತ ವಿವಿಧೆಡೆ ಮೊದಲ ಮಳೆಸಿಂಚನವಾಗಿದೆ. ಜಿಲ್ಲೆಯ ಬೇಲೂರು, ಆಲೂರು ಸೇರಿದಂತೆ ವಿವಿಧೆಡೆ ಭಾಗದಲ್ಲಿ ಸುರಿದ ಮಳೆಗೆ ರೈತರು ಹಾಗೂ ಸಾರ್ವಜನಿಕರ ಮುಖದಲ್ಲಿ ಮಂದಹಾಸ ಮೂಡಿದ್ದು, ಕಾದಿದ್ದ ಭೂಮಿಗೆ ವರುಣ ತಂಪು ಮಾಡಿದ್ದಾನೆ. ಜೊತೆಗೆ ಭಾರೀ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ.
ಕೊಡಗು,ವಿಜಯಪುರ, ಕೊಪ್ಪಳ ಜಿಲ್ಲೆಯಲ್ಲಿ ವರುಣನ ಅಬ್ಬರ
ವಿರಾಜಪೇಟೆ ತಾಲ್ಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ವಿರಾಜಪೇಟೆ, ತಿತಿಮತಿ ಗೋಣಿಕೊಪ್ಪಲು ಹೋಬಳಿ ವ್ಯಾಪ್ತಿಯಲ್ಲಿ ವರುಣ ಅಬ್ಬರಿಸಿದ್ದಾನೆ. ಇತ್ತ ವಿಜಯಪುರ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಗುಡುಗು ಸಿಡಿಲು ಸಹಿತ ಮಳೆ ಬಿದ್ದಿದೆ. ಬಬಲೇಶ್ವರ ನಾಕಾದಲ್ಲಿದ್ದ ಮರ ಉರುಳಿದ ಪರಿಣಾಮ ವಾಹನ ಸವಾರರ ಪರದಾಡುವಂತಾಗಿದೆ. ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಗಾಳಿ ಸಹಿತ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ