‘ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು?’ ಸಿಎಂ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಜಿ ಪರಮೇಶ್ವರ್ ಮಾರ್ಮಿಕ ವಿಡಿಯೋ ವೈರಲ್

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ಹಿರಿಯ ದಲಿತ ನಾಯಕ ಡಾ. ಜಿ. ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಬೇಸತ್ತಿರುವ ಅಭಿಮಾನಿಗಳು, ‘ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ನನಗೂ 3 ಬಾರಿ ಸಿಎಂ ಸ್ಥಾನ ತಪ್ಪಿತು’ ಎಂದು ಪರಮೇಶ್ವರ್‌ ಮಾತನಾಡಿದ್ದ ಹಳೇ ವಿಡಿಯೋವನ್ನು ವೈರಲ್ ಮಾಡಿ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

‘ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು?’ ಸಿಎಂ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಜಿ ಪರಮೇಶ್ವರ್ ಮಾರ್ಮಿಕ ವಿಡಿಯೋ ವೈರಲ್
ಡಾ ಜಿ ಪರಮೇಶ್ವರ್ ಹಳೆಯ ವಿಡಿಯೋ ವೈರಲ್
Image Credit source: tv9

Updated on: Jun 02, 2026 | 9:07 AM

ತುಮಕೂರು, ಜೂನ್ 2: ರಾಜ್ಯ ರಾಜಕಾರಣದಲ್ಲಿ ತೀವ್ರ ಬದಲಾವಣೆಗಳಾಗುತ್ತಿದ್ದು, ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆ ಬಳಿಕ ಡಿ.ಕೆ. ಶಿವಕುಮಾರ್ (DK Shivakumar) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ್ (G Parameshwara) ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿರುವುದಕ್ಕೆ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿದೆ. ಇತ್ತೀಚೆಗಷ್ಟೇ ಪರಮೇಶ್ವರ್ ಅವರನ್ನು ಮಹಾಭಾರತದ ‘ಕರ್ಣ’ನಿಗೆ ಹೋಲಿಸಿ ವಿಡಿಯೋ ಮಾಡಿದ್ದ ಅಭಿಮಾನಿಗಳು, ಈಗ ಅವರ ಹಳೆಯ ಮಾರ್ಮಿಕ ಭಾಷಣದ ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಡಾ. ಜಿ. ಪರಮೇಶ್ವರ್ ಫ್ಯಾನ್ಸ್ ಎಂಬ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಿರಿಯ ನಾಯಕನ ಅಳಲಿನ ವಿಡಿಯೋ ಅಪ್‌ಲೋಡ್.
  • ‘ಮಲ್ಲಿಕಾರ್ಜುನ ಖರ್ಗೆ ಒಂದು ಕಾಲು ಎತ್ತಿ ಇಟ್ಟಿದ್ದರೆ ಸಿಎಂ ಆಗುತ್ತಿದ್ದರು’ ಎಂದಿದ್ದ ಪರಮೇಶ್ವರ್
  • ಡಿಕೆಶಿ ನೂತನ ಸಂಪುಟ ರಚನೆಯ ಕಸರತ್ತಿನ ನಡುವೆಯೇ ದಲಿತ ನಾಯಕನ ಹಳೇ ವಿಡಿಯೋ ವೈರಲ್.

ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಡಾ. ಜಿ. ಪರಮೇಶ್ವರ್ ಅವರು ಸಮುದಾಯದ ಹೋರಾಟ ಹಾಗೂ ರಾಜಕೀಯ ಅನ್ಯಾಯದ ಕುರಿತು ಅತ್ಯಂತ ಬೇಸರದಿಂದ ಮಾತನಾಡಿದ್ದಾರೆ. ‘ತುಳಿತಾರೆ, ತುಳಿಸಿಕೊಳ್ಳಬೇಕು. ಆದರೆ ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ನಮ್ಮ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಕಾಲು ಎತ್ತಿ ಇಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು ರೀ. ಆದರೆ ಅವರು ತಪ್ಪಿಸಿಕೊಂಡರು. ಇನ್ನು ನನಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿ ಹೋಯಿತು. ಅಪ್ಪಾ! ಹಂಗೂ ಹಿಂಗೂ ಹೆಂಗೋ ಮಾಡಿಕೊಂಡು, ಕೊನೆಗೆ ಬೇಡ ಬೇಡ ಅಂದರೂ ನನ್ನನ್ನು ಉಪಮುಖ್ಯಮಂತ್ರಿ ಮಾಡಿದರು. ಆದರೆ ಇಂತಹ ಸ್ಥಿತಿಯನ್ನು ಎದುರಿಸಲು ಹೋರಾಟ ಎನ್ನುವುದು ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಬರಬೇಕು’ ಎಂದು ಪರಮೇಶ್ವರ್ ಭಾಷಣ ಮಾಡುತ್ತಿರುವುದು ವಿಡಿಯೋದಲ್ಲಿವೆ.

ವೈರಲ್ ವಿಡಿಯೋ ಇಲ್ಲಿ ನೋಡಿ

ರಾಜಕೀಯ ವಲಯದಲ್ಲಿ ಭಾರಿ ಸಂಚಲನ

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಿರುವ ಈ ನಿರ್ಣಾಯಕ ಸಂದರ್ಭದಲ್ಲೇ, ಪರಮೇಶ್ವರ್ ಅವರ ಅಭಿಮಾನಿಗಳ ಅಧಿಕೃತ ಖಾತೆಯಿಂದ ಈ ವಿಡಿಯೋ ಹೊರಬಿದ್ದಿರುವುದು ತೀವ್ರ ಕುತೂಹಲ ಮೂಡಿಸಿದೆ. ಸದ್ಯ ದೆಹಲಿಯಲ್ಲಿ ಸಚಿವ ಸಂಪುಟದ ಬಿರುಸಿನ ಚರ್ಚೆಗಳು ನಡೆಯುತ್ತಿದ್ದು, ಸಿದ್ದರಾಮಯ್ಯ ಅವರು ತಮ್ಮ ಬಣದ ಪರಮೇಶ್ವರ್ ಅವರಿಗೆ ಮತ್ತೊಮ್ಮೆ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಪದೇ ಪದೇ ಹಿರಿಯ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪುತ್ತಿರುವುದರ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us