ನಾಳೆ ಕರ್ನಾಟಕದಾದ್ಯಂತ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್

| Updated By: ರಮೇಶ್ ಬಿ. ಜವಳಗೇರಾ

Updated on: Aug 16, 2024 | 6:22 PM

Karnataka Hospitals OPDd Bandh: ಶನಿವಾರ (ಆಗಸ್ಟ್ 17) ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಮುನ್ನ ಯೋಚಿಸಿ. ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಹೊರರೋಗಿ ವಿಭಾಗ (ಒಪಿಡಿ) ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ನಾಳೆ ಕರ್ನಾಟಕದಾದ್ಯಂತ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್ 16: ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಕರ್ನಾಟಕದಲ್ಲೂ ಸಹ ಸರ್ಕಾರಿ ಮತ್ತು ಖಾಸಗಿ ವೈದ್ಯರು ಸಹ ನಾಳೆ(ಶನಿವಾರ) ಪ್ರತಿಭಟನೆಗೆ ಮುಂದಾಗಿದ್ದಾರೆ. ಹೌದು..ಕರ್ನಾಟಕದಾದ್ಯಂತ ಶನಿವಾರ ಹೊರರೋಗಿ ಸೇವೆ ವಿಭಾಗ (ಒಪಿಡಿ) ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ವೈದ್ಯರು ಘೋಷಿಸಿದ್ದಾರೆ. ಹೀಗಾಗಿ ನಾಳೆ(ಆಗಸ್ಟ್ 17) ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಎಮರ್ಜನ್ಸಿ ಹೊರತುಪಡಿಸಿ ಓಪಿಡಿ ಸೇವೆ ಇರುವುದಿಲ್ಲ.

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ವೈದ್ಯರ ಮುಷ್ಕರದ ಕಾರಣ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಮುಖ್ಯ ಕಾರ್ಯದರ್ರಶಿ ಜತೆಗೂ ಮಾತನಾಡಿದ್ದೇನೆ. ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಚರ್ಚಿಸಲು ಹೇಳಿದ್ದೇನೆ. ತೊಂದರೆಯಾಗದಂತೆ ಪ್ರತಿಭಟನೆ ಮಾಡುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು. ಎಲ್ಲಾ ಅಸೋಸಿಯೇಷನ್ ಸಭೆ ಕರೆದು ಕ್ರಮದ ಬಗ್ಗೆ ಚರ್ಚಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮೈಸೂರಿನಲ್ಲಿ ವೈದ್ಯರಿಂದ ಪ್ರತಿಭಟನೆ

ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಸಂಭ್ರಮ ಮನೆ ಮಾಡಿದ್ದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಕೊಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಖಂಡಿಸಿ ಮೈಸೂರಿನ ಕೆಆರ್ ಆಸ್ಪತ್ರೆ ಮುಂಭಾಗ ಕೈಗೆ ಕಪ್ಪು ಪಟ್ಟಿ ಧರಿಸಿ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಕೆಆರ್ ಆಸ್ಪತ್ರೆ ಕಿರಿಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.

ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊಲ್ಕತ್ತಾ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಇದನ್ನೂ ಓದಿ: ಕೊಲ್ಕತ್ತಾ ವೈದ್ಯೆ ಕೊಲೆಗೂ ಮುನ್ನ ಸಾಮೂಹಿಕ ಅತ್ಯಾಚಾರ?; ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಅಂಶ ಬಯಲು

ಕಳೆದ ಶುಕ್ರವಾರ ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಾತ್ರಿ ಕರ್ತವ್ಯದಲ್ಲಿದ್ದ ಆ ವೈದ್ಯೆ ಸಹೋದ್ಯೋಗಿಗಳ ಜೊತೆ ಊಟ ಮುಗಿಸಿ, ವಿಶ್ರಾಂತಿಗೆಂದು ಸೆಮಿನಾರ್​ ಹಾಲ್​ಗೆ ಹೋಗಿದ್ದರು. ಏಕಾಂಗಿಯಾಗಿದ್ದ ಅವರ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ, ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Fri, 16 August 24