
ಬೆಂಗಳೂರು, ಆಗಸ್ಟ್ 20: ಬೆಂಗಳೂರಿನಲ್ಲಿ (Bangaluru) ಹೋಟೆಲ್, ರೆಸ್ಟೋರೆಂಟ್ಗಳ ಕಿಚನ್ ಜಾಲಾಡುತ್ತಿರುವ ಆಹಾರ ಇಲಾಖೆ ಅಧಿಕಾರಿಗಳು ಇಂದು ಮತ್ತೊಂದು ಬೇಟೆ ಆಡಿದ್ದಾರೆ. ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ 36 ರೈಲು ನಿಲ್ದಾಣಗಳು ಮತ್ತು 112 ಆಹಾರ ಮಳಿಗೆಗಳಲ್ಲಿ ವಿಶೇಷ ತಪಾಸಣೆ (Rail Food Safety) ಮಾಡಿದರು. ದಾಳಿ ವೇಳೆ ಹಲವು ಕಡೆ ಕಳಪೆ ಗುಣಮಟ್ಟ ಹಾಗೂ ಅನೈರ್ಮಲ್ಯ ಬಯಲಾಗಿದ್ದು, ನಿಯಮ ಉಲ್ಲಂಘಿಸಿದ ಆಹಾರ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದು, ರೈಲ್ವೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ಒಟ್ಟು 36 ಪ್ರಮುಖ ರೈಲು ನಿಲ್ದಾಣಗಳಲ್ಲಿರುವ 112 ಆಹಾರ ಸಂಸ್ಥೆಗಳು, ರೈಲ್ವೆ ಪ್ಯಾಂಟ್ರಿ, ಕ್ಯಾಂಟೀನ್ ಮತ್ತು ಹೋಟೆಲ್‌ಗಳನ್ನು ಅಧಿಕಾರಿಗಳ ತಂಡ ಏಕಕಾಲದಲ್ಲಿ ಜಾಲಾಡಿದೆ. ಆಹಾರದ ಗುಣಮಟ್ಟ, ಸುರಕ್ಷತೆ, ಸಂಗ್ರಹಣೆ, ಲೇಬಲಿಂಗ್ ಮತ್ತು ನೋಂದಣಿ ಪರವಾನಗಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ವೇಳೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗಿರುವುದು ಕಂಡುಬಂದಿದೆ.
ಆಹಾರ ಇಲಾಖೆ ಅಧಿಕಾರಿಗಳು ದಾಳಿ ವೇಳೆ ಬಯಲಾದ ವಿಚಾರ ಪ್ರಯಾಣಿಕರನ್ನು ಬೆಚ್ಚಿಬೀಳಿಸುವಂತಿದೆ. ಮೈಸೂರು ರೈಲು ನಿಲ್ದಾಣದ ಅಡುಗೆಮನೆಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಇಡ್ಲಿ ತಯಾರಿಸುತ್ತಿರುವುದು ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಆಹಾರಕ್ಕೆ ಯೋಗ್ಯವಲ್ಲದ ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಚಟ್ನಿ ಸಂಗ್ರಹಿಸಿಡುವುದು, ಸಮೋಸಾಗಳನ್ನು ರದ್ದಿ ಕಾರ್ಡ್‌ಬೋರ್ಡ್ ಬಾಕ್ಸ್‌ಗಳಲ್ಲಿ ಹಾಕುವುದು ಮತ್ತು ತಯಾರಿಸಿದ ತಿನಿಸುಗಳನ್ನು ನೇರವಾಗಿ ಹಳೆಯ ದಿನಪತ್ರಿಕೆಗಳ ಮೇಲೆ ಹರಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕಳಪೆ ನಂದಿನಿ ಪಶು ಆಹಾರದಿಂದ ಹಸುಗಳ ಸಾವಾಯ್ತಾ? ಕಳಪೆ ಗುಣಮಟ್ಟದ ಬಗ್ಗೆ ಗಂಭೀರ ಆರೋಪ
ಅಷ್ಟೇ ಅಲ್ಲದೆ ಜಿಲೇಬಿಯಲ್ಲಿ ಅಪಾಯಕಾರಿ ಹಳದಿ ಬಣ್ಣ, ಖೋವಾ ಪೇಡಾದಲ್ಲಿ ನಿಷೇಧಿತ ಗುಲಾಬಿ ಬಣ್ಣ ಬಳಸಿರುವುದು ಕಂಡುಬಂದಿದೆ. ಹಾವೇರಿ ನಿಲ್ದಾಣದಲ್ಲಿ ಅವಧಿ ಮೀರಿದ ನಂದಿನಿ ಮೊಸರು ಹಾಗೂ ದೋಡ್ಲಾ ಹಾಲಿನ ಪ್ಯಾಕೆಟ್‌ಗಳು ಸಿಕ್ಕಿದ್ದರೆ, ಬೆಂಗಳೂರಿನ ಕೆ.ಆರ್. ಪುರಂ ನಿಲ್ದಾಣದ ಮಳಿಗೆಗಳಲ್ಲಿ ಕೊಳೆತು ಶಿಲೀಂಧ್ರ (ಫಂಗಸ್) ಹಿಡಿದ ಈರುಳ್ಳಿ ಮತ್ತು ತರಕಾರಿಗಳನ್ನು ಅಡುಗೆಗೆ ಬಳಸುತ್ತಿರುವುದು ಪತ್ತೆಯಾಗಿದೆ.
ಸಾಮಾನ್ಯ ನಿಲ್ದಾಣಗಳ ಕ್ಯಾಂಟೀನ್‌ಗಳಲ್ಲಿ ಇಷ್ಟೆಲ್ಲಾ ಅವಾಂತರಗಳು ಕಂಡುಬಂದಿದ್ದು, ಇನ್ನು ಮಂಗಳೂರು–ಕೇರಳ ಮತ್ತು ಹುಬ್ಬಳ್ಳಿ–ಬೆಂಗಳೂರು ಮಾರ್ಗದ ವಂದೇ ಭಾರತ್ ರೈಲುಗಳಲ್ಲಿ ಆಹಾರ ಪೂರೈಕೆ, ಸ್ವಚ್ಛತೆ ಹಾಗೂ ನಿರ್ವಹಣೆ ಅತ್ಯುತ್ತಮ ಮಟ್ಟದಲ್ಲಿದ್ದು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಚಿಕನ್ ಫೆರಿ ಫೆರಿಯಲ್ಲಿ ಕೆಟ್ಟ ವಾಸನೆ: ದಾಳಿ ವೇಳೆ ಮಂಗಳೂರಿನ KFCಯಲ್ಲಿ ಹಳೇ ಮಾಂಸ ಪತ್ತೆ!
ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ಆಹಾರ ಮಳಿಗೆಗಳ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ. ಸಂಗ್ರಹಿಸಲಾದ ಶಂಕಿತ ಆಹಾರದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Thu, 20 August 26