ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಇಂದು ಎಲ್ಲೆಲ್ಲಿ ಶಾಲೆಗಳಿಗೆ ರಜೆ? ಇಲ್ಲಿದೆ ಪೂರ್ತಿ ವಿವರ

Karnataka Rains and School Holiday: ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಆರ್ಭಟ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಹಾಸನ ಹಾಗೂ ಬೆಳಗಾವಿ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಇಂದು ಎಲ್ಲೆಲ್ಲಿ ಶಾಲೆಗಳಿಗೆ ರಜೆ? ಇಲ್ಲಿದೆ ಪೂರ್ತಿ ವಿವರ
ಬೆಳಗಾವಿ ಮಳೆ ಮತ್ತು ದಾವಣಗೆರೆಯ ಯಲದೋಹಳ್ಳಿ ಶಾಲೆ (ಸಾಂದರ್ಭಿಕ ಚಿತ್ರ)
Image Credit source: tv9

Updated on: Jul 07, 2026 | 6:52 AM

ಮುಖ್ಯಾಂಶಗಳು

  • ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ
  • ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
  • ವಿದ್ಯಾರ್ಥಿಗಳ ಸುರಕ್ಷತೆಗೆ ಅಧಿಕಾರಿಗಳಿಂದ ಮುಂಜಾಗ್ರತಾ ಕ್ರಮ

ಬೆಂಗಳೂರು, ಜುಲೈ 7: ಕರ್ನಾಟಕ ಕರಾವಳಿ, ಮಲೆನಾಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಭಾರಿ ಗಾಳಿಗೆ ಹಲವೆಡೆ ಮರಗಳು ಬುಡಮೇಲಾಗಿ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಇತ್ತ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮುಂಗಾರು ಮಳೆಯ (Monsoon Rain ಈ ರೌದ್ರಾವತಾರದ ನಡುವೆ, ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಪ್ರಮುಖ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಚಿಕ್ಕಮಗಳೂರಿನ 6 ತಾಲೂಕುಗಳಲ್ಲಿ ರಜೆಯ ಘೋಷಣೆ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 6 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ ಮತ್ತು ಎನ್.ಆರ್.ಪುರ ತಾಲೂಕುಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶೃಂಗೇರಿ ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿರುವುದರಿಂದ ಶಾಲೆ ಹಾಗೂ ಕಾಲೇಜುಗಳೆರಡಕ್ಕೂ ರಜೆ ನೀಡಲಾಗಿದೆ. ಇನ್ನು ಕಳಸ ತಾಲೂಕಿನಲ್ಲಿ ಅಂಗನವಾಡಿ ಸೇರಿದಂತೆ 1 ರಿಂದ 7ನೇ ತರಗತಿಯವರೆಗಿನ ಪ್ರಾಥಮಿಕ ಶಾಲೆಗಳಿಗೆ ಮಾತ್ರ ರಜೆ ಇರಲಿದೆ. ಉಳಿದಂತೆ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯ ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು ಮತ್ತು ಆವತಿ ಹೋಬಳಿಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಲಾಗಿದೆ.

ಶಿವಮೊಗ್ಗದ 3 ತಾಲೂಕುಗಳ ಶಾಲಾ-ಕಾಲೇಜು ರಜೆ

ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮೂರು ಪ್ರಮುಖ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಮತ್ತು ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡದ 5 ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ

ಕರಾವಳಿ ಮತ್ತು ಮಲೆನಾಡು ಭಾಗವನ್ನು ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲೆಯ ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ ಮತ್ತು ಯಲ್ಲಾಪುರ ಸೇರಿದಂತೆ ಒಟ್ಟು ಐದು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.

ಹಾಸನ ಮತ್ತು ಬೆಳಗಾವಿಯಲ್ಲೂ ರಜೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಕಳೆದ 5 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸಕಲೇಶಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಸುಪ್ರಿತಾ ಆದೇಶಿಸಿದ್ದಾರೆ. ಮತ್ತೊಂದೆಡೆ, ಬೆಳಗಾವಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು, ಬೆಳಗಾವಿ ನಗರ ಮತ್ತು ಖಾನಾಪುರ ತಾಲೂಕಿನಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us