ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ, ಬೆಂಗಳೂರಿಗೆ ರೆಸ್ಟ್
Karnataka Rain: ಬಿಸಿಲಿಗೆ ಕಂಗೆಟ್ಟಿದ್ದ ರಾಜ್ಯದ ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಉಡುಪಿಯಲ್ಲಿ ಸಿಡಿಲಿಗೆ ಓರ್ವ ಬಲಿಯಾಗಿದ್ದಾರೆ. ಇನ್ನು ಮೇ.18 ರವರೆಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಮುಂದಿನ 5 ತಿಂಗಳು ಕಾಲ ಬೆಂಗಳೂರಿನಲ್ಲಿ ಗುಡುಗು ಸಹಿತ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಳೆದ ಕೆಲದಿನಗಳಿಂದ ಸಂಜೆಯಾಗುತ್ತಿದ್ದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ(Rain)ಯ ಆರ್ಭಟ ಜೋರಾಗಿತ್ತು. ಇಂದು ಬೆಂಗಳೂರಿಗೆ ವರುಣ ರೆಸ್ಟ್ ಕೊಟ್ಟಿದ್ದು, ರಾಜ್ಯದ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆಯಾಗಿದೆ. ಬಿಸಿಲಿಗೆ ಬಸವಳಿದಿದ್ದ ಜನರು ಮಳೆಗೆ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಮುಂದಿನ ವಾರ ಪೂರ್ತಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಎಲ್ಲೆಲ್ಲಿ ಮಳೆ
ಉಡುಪಿಯಲ್ಲಿ ಭರ್ಜರಿ ಮಳೆ; ಸಿಡಿಲಿಗೆ ಓರ್ವ ಬಲಿ
ಕರಾವಳಿ ಜಿಲ್ಲೆ ಉಡುಪಿಯಲ್ಲಿ ಇಂದು ಧಾರಕಾರ ಮಳೆ ಬಂದಿದ್ದು, ನಗರ ಸೇರಿದಂತೆ ಮಣಿಪಾಲ, ಮಲ್ಪೆ, ಸಂತೆಕಟ್ಟೆ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣದೇವ ತಂಪೆರೆದಿದ್ದಾನೆ. ಕಳೆದ ಮೂರು ತಿಂಗಳಿನಿಂದ ಬಿಸಿಲಿನಿಂದ ಹೈರಾಣಾಗಿದ್ದ ಜನತೆ, ಇಂದು ಮಳೆರಾಯನ ಆಗಮನದಿಂದ ಸಂತಸಗೊಂಡಿದ್ದಾರೆ. ಇತ್ತ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಸಿಡಿಲು ಬಡಿದು ಸುರೇಶ್ ಶೆಟ್ಟಿ(38) ಎಂಬುವವರು ಕೊನೆಯುಸಿರೆಳೆದಿದ್ದಾರೆ. ಸಂಜೆ ಮಳೆ ಬರುತ್ತಿದ್ದಾಗ ಮನೆ ಬಳಿ ನಿಂತಿದ್ದಾಗ ದುರ್ಘಟನೆ ನಡೆದಿದ್ದು, ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ; ಪ್ರವಾಸಿಗರು ಕಂಗಾಲು
ಉತ್ತರ ಕನ್ನಡದ ಹಲವೆಡೆ ಮಳೆ
ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮಳೆರಾಯ ತಂಪೆರೆದಿದ್ದಾನೆ. ಜಿಲ್ಲೆಯ ಸಿದ್ದಾಪುರ, ಶಿರಸಿ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು, ಗುಡುಗು ಸಹಿತ ಅಬ್ಬರದ ಮಳೆಗೆ ಭೂಮಿ ತಂಪಾಗಿದೆ. ಮಳೆಗಾಗಿ ಕಾದುಕೂತಿದ್ದ ರೈತರಿಗೆ ವರುಣ ಸಂತಸ ತಂದಿದ್ದಾನೆ. ಇತ್ತ ಕಾರವಾರ,ಯಲ್ಲಾಪುರ, ಮುಂಡಗೋಡು ಭಾಗಗಳಲ್ಲಿ ಬಿಸಿಲಿನ ತಾಪ ಮುಂದುವರೆದಿದ್ದು, ಈ ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ. ಜೊತೆಗೆ ಹವಾಮಾನ ಇಲಾಖೆಯಿಂದ ಇನ್ನೂ ಮೂರು ದಿನ ಜಿಲ್ಲೆಯ ವಿವಿಧೆಡೆ ಮಳೆ ಆಗುವ ಮುನ್ಸೂಚನೆ ನೀಡಿದೆ.
ಶಿರಸಿ ಪಟ್ಟಣದಲ್ಲಿ ಧರೆಗುರುಳಿದ ಮರಗಳು, ವಿದ್ಯುತ್ ಕಂಬ
ಇತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ಧಾರಾಕಾರ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದಿದೆ. ಇದರಿಂದ ಶಿರಸಿ ಪಟ್ಟಣದ ಸಹ್ಯಾದ್ರಿ ಕಾಲೋನಿಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಜೊತೆಗೆ 10ಕ್ಕೂ ಹೆಚ್ಚು ಕಂಬ ಉರುಳಿಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದು, ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ:ಬಿರುಬೇಸಿಗೆ, ಅಕಾಲಿಕ ಮಳೆಗೆ ಆಲೂ ಬೆಳೆ ತತ್ತರ; ಬೆಳೆ ಏರಿಕೆಯ ನಿರೀಕ್ಷೆಯಲ್ಲಿ ವರ್ತಕರು
ಎಂದಿನಂತೆ ಇಂದು ಚಿಕ್ಕಮಗಳೂರಿನಲ್ಲೂ ಬಿರುಗಾಳಿ ಸಹಿತ ಮಳೆ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿಯೂ ಬಿರುಗಾಳಿ ಸಹಿತ ಮಳೆಯಾಗಿದೆ. ಕಳೆದ ಒಂದು ಗಂಟೆಯಿಂದ ಗಾಳಿ ಜೊತೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆ ಶೃಂಗೇರಿ ಶಾರದಾ ಮಠದ ಮುಂಭಾಗದಲ್ಲಿದ್ದ ನಾಮಫಲಕ ಹಾರಿಹೋಗಿದೆ. ಇತ್ತ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಪ್ರವಾಸಿಗರು ಕೂಡ ಆತಂಕಗೊಂಡಿದ್ದಾರೆ.
ಶಿವಮೊಗ್ಗದಲ್ಲಿ ಧಾರಾಕಾರ ಮಳೆ
ಶಿವಮೊಗ್ಗ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಗುಡುಗು ಸಹಿತ ಭರ್ಜರಿ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮಳೆಯು ಕಣ್ಣು ಮುಚ್ಚಾಲೆ ಆಟವಾಡುತ್ತಿತ್ತು. ಇಂದು ಕೊನೆಗೂ ನಗರದಲ್ಲಿ ಮಳೆ ಬಿದ್ದಿದೆ. ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇತ್ತ ಮಳೆಯಿಂದ ಶಿವಮೊಗ್ಗ ನಗರದ ಜನರಲ್ಲಿ ಸಂತಸ ಮನೆಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 pm, Tue, 14 May 24