ಮಳೆಗಾಲ ಆರಂಭವಾದರೂ ಬಾರದ ಮಳೆ; 60 ಸಾವಿರ ಗಿಡಗಳಿರೋ ಮಾನವ ನಿರ್ಮಿತ ಕಾಡಿಗೆ ಟ್ಯಾಂಕರ್ ಮೂಲಕ ನೀರು
ಅತ್ಯಂತ ವಿರಳಾತಿ ವಿರಳ ಅರಣ್ಯ ಪ್ರದೇಶವನ್ನು ಹೊಂದಿದ ಜಿಲ್ಲೆ ವಿಜಯಪುರ. ಶೇಕಡಾ 0.17 ರಷ್ಟು ಪ್ರದೇಶ ಅರಣ್ಯ ಜಿಲ್ಲೆಯಲ್ಲಿದೆ. ಹೀಗಾಗಿ ಮಳೆ ಇಲ್ಲಿ ಸರಿಯಾಗಿ ಆಗದೇ ಬರದ ನಾಡಾಗಿದೆ. ಬರದ ನಾಡನ್ನು ಹಸಿರು ನಾಡನ್ನಾಗಿ ಮಾಡಲು ಹಾಗೂ ಬರದ ಹಣೆಪಟ್ಟಿ ಕಿತ್ತು ಹಾಕಲು 2016 ರಲ್ಲಿ ಅಂದಿನ ನೀರಾವರಿ ಸಚಿವರು ಹಾಗೂ ಹಾಲಿ ಕೈಗಾರಿಕಾ ಸಚಿವರಾಗಿರೋ ಎಂ ಬಿ ಪಾಟೀಲ್ ಅವರು ಕೋಟಿ ವೃಕ್ಷ ಪ್ರತಿಷ್ಠಾನದ ಮೂಲಕ ಅರಣ್ಯೀಕರಣಕ್ಕೆ ಮುಂದಾಗಿದ್ದರು. ಸದ್ಯ ಬರಗಾಲ ಹಾಗೂ ಬೇಸಿಗೆ ಕಾರಣ ಮಾನವ ನಿರ್ಮಿತ ಅರಣ್ಯ ಹಾಳಾಗಬಾರದೆಂದು ಹಸಿರು ಉಳಿಸಿ ಬೆಳೆಸಲು ಟ್ಯಾಂಕರ್ ಮೂಲಕ ಎಲ್ಲ ಗಿಡಗಳಿಗೆ ನೀರು ಹಾಕಲಾಗುತ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ವಿಜಯಪುರ, ಮೇ.14: ಜಿಲ್ಲೆಯಲ್ಲಿ 9 ಕಾಡನ್ನು ಬೆಳೆಸಬೇಕು, ಹಸಿರು ನಿರ್ಮಾಣ ಮಾಡಬೇಕೆಂಬ ಸಂಕಲ್ಪ ತೊಟ್ಟು ಹಾಲಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್(MB Patil) ಅವರು 2016 ರಲ್ಲಿ ನೀರಾವರಿ ಸಚಿವರಾಗಿದ್ದಾಗ 1 ಕೋಟಿ ಸಸಿ ನೆಡುವ ಯೋಜನೆ ಹಾಕಿಕೊಂಡಿದ್ದರು. ಕೋಟಿ ವೃಕ್ಷ ಅಭಿಮಾನದ ಮೂಲಕ ಸರ್ಕಾರ, ಕೆಜಿಜೆಎನ್ಎಲ್ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಸಿಗಳನ್ನು ನೆಡಲು 2016 ಜೂನ್ 5 ಕ್ಕೆ ಆರಂಭಿಸಿದ್ದರು. 2017 ನವೆಂಬರ್ ನಲ್ಲಿ ವಿಜಯಪುರ(Vijayapura) ತಾಲೂಕಿನ ಕರಾಡದೊಡ್ಡಿ ಬಳಿಕ ಸರ್ಕಾರಿ ಭೂಪ್ರದೇಶದ 540 ಎಕರೆ ಪ್ರದೇಶದಲ್ಲಿ 60 ಸಾವಿರ ಸಸಿಗಳನ್ನು ನೆಡಲಾಗಿತ್ತು. ಈ ಪೈಕಿ 35 ವಿವಿಧ ಜಾತಿಯ ವಿವಿಧ ಸಸಿಗಳು ಹಾಗೂ ಕೆಲ ಹಣ್ಣು ಹಂಪಲು ನೀಡುವ ಸಸಿಗಗಳನ್ನು ಹಚ್ಚಲಾಗಿದ್ದು, ಇದಕ್ಕಾಗಿ ಎಲ್ಲರೂ ಸೇರಿ ಒಟ್ಟು 250 ಕೋಟಿ ಹಣವನ್ನು ಖರ್ಚು ಮಾಡಲಾಗಿತ್ತು.
60 ಸಾವಿರ ಗಿಡ ಮರಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ರಕ್ಷಣೆ
ಸದ್ಯ ಬರಡಾದ, ಏನು ಬೆಳೆಯದ ಕಲ್ಲು ಪದರುಗಳ ಭೂಮಿಯಲ್ಲಿ 35 ಬಗೆಯ ಸಸಿಗಳು ಬೆಳೆದು ಗಿಡ, ಮರಗಳಾಗಿವೆ. ಈ ರೀತಿ ಕಷ್ಟಪಟ್ಟು ಬೆಳೆದ ಗಿಡ-ಮರಗಳಿಗೆ ಬಿರು ಬೇಸಿಗೆ ಹಾಗೂ ಬರಗಾಲ ಮಾರಕವಾಗಿತ್ತು. ನೀರಿನ ಸಮಸ್ಯೆಯಿದ ಬಿಸಿಲಿಗೆ ಗಿಡಗಳು ಒಣಗಿ ಹೋಗಬಾರದೆಂದು ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರ ಸೂಚನೆ ಮೇರೆಗೆ ಕೆಬಿಜೆಎನ್ಎಲ್ನಿಂದ ಟ್ಯಾಂಕರ್ ಮೂಲಕ ನೀರು ಬಿಡಲಾಗುತ್ತಿದೆ. ನಿತ್ಯ 6 ಟ್ಯಾಂಕರ್ಗಳು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಇಲ್ಲಿ ನೆಟ್ಟಿರೋ ಗಿಡ ಮರಗಳಿಗೆ ನೀರು ಹಾಕುತ್ತಿವೆ. 540 ಎಕರೆ ಪ್ರದೇಶದಲ್ಲಿ ಬೆಳೆದಿರೋ 60,000 ಗಿಡ ಮರಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ರಕ್ಷಣೆ ಮಾಡಲಾಗುತ್ತಿದೆ.
ಮರ-ಗಿಡಗಳಿಗೆ ಕೆರೆಯ ಫಲವತ್ತಾದ ಮಣ್ಣು
ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಆಧಿಕವಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮಳೆ ಆರಂಭವಾಗಿದ್ದರೂ ಇಲ್ಲಿ ಅಲ್ಪ ಪ್ರಮಾಣದ ಮಳೆ ಯಾವುದಕ್ಕೂ ಸಾಕಾಗುತ್ತಿಲ್ಲ. ಮೊದಲೇ ಒಂದು ವರ್ಷದಿಂದ ಇರೋ ಬರಗಾಲ ಹಾಗೂ ನಂತರ ಬಿಸಿ ಬೇಸಿಗೆ ಕಾರಣದಿಂದ ಕರಾಡದೊಟ್ಟಿ ಪ್ರದೇಶದಲ್ಲಿ ಬೆಳೆದಿದ್ದ 60 ಸಾವಿರ ಗಿಡ ಮರಗಳಿಗೂ ಕಂಟಕ ಬಂದಿತ್ತು. ಹೀಗಾಗಿ ಪಕ್ಕದ ಭೂತನಾಳ ಕೆರೆಯ ನೀರನ್ನು ಟ್ಯಾಂಕರ್ ಮೂಲಕ ಉಣಿಸಲಾಗುತ್ತಿದೆ. ಕಳೆದ ಒಂದೂವರೆ ತಿಂಗಳುಗಳಿಂದ ನೀರುಣಿಸೋ ಕೆಲಸ ನಡೆಯುತ್ತಿದೆ. ಒಂದು ಟ್ಯಾಂಕರ್ ನೀರು ಐದರಿಂದ ಆರು ಗಿಡಗಳಿಗೆ ನೀರುಣಿಸುತ್ತದೆ. ಇಷ್ಟರ ಮಧ್ಯೆ ಇಲ್ಲಿರೋ ಮರಗಿಡಗಳನ್ನು ದಷ್ಟಪುಷ್ಟವಾಗಿ ಬೆಳೆಯಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘ ಖಾಲಿಯಾಗಿರುವ ಬೇಗಂ ತಾಲಾಬ್ ಕೆರೆಯ ಫಲವತ್ತಾದ ಮಣ್ಣನ್ನು ತಂದು ಹಾಕಿದ್ದಾರೆ.
ಸಾರ್ವಜನಿಕರಿಂದ ಮೆಚ್ಚುಗೆ
60 ಸಾವಿರ ಮರ-ಗಿಡಗಳಿಗೂ ಫಲವತ್ತಾದ ಮಣ್ಣು ಹಾಕಿ ಅವುಗಳಿಗೆ ನೀರು ಬಿಡೂ ಕಾರ್ಯ ಎಗ್ಗಿಲ್ಲದೇ ನಡೆದಿದೆ. ಈ ರೀತಿ ನೀರು ಬಿಟ್ಟ ಬಳಿಕ ಇಲ್ಲಿರೋ ಮರಗಿಡಗಳು ಹೊಸ ಚಿಗುರು ಬಿಟ್ಟಿವೆ. 2017 ರಿಂದ ಕಷ್ಟಪಟ್ಟು ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಬೆಳೆಸಿದ ಮಾನವ ನಿರ್ಮಿತ ಕಾಡನ್ನು ಬರಗಾಲದಲ್ಲಿ ಬೇಸಿಗೆ ಕಾಲದಲ್ಲಿ ಒಣಗಿ ಹೋಗದಂತೆ ಫಲವತ್ತಾದ ಮಣ್ಣು ಹಾಗೂ ಟ್ಯಾಂಕರ್ ನೀರು ಬಿಡೋ ಕೆಲಸ ಮಾತ್ರ ಸುಲಭದ ಕೆಲಸವಾಗಿಲ್ಲ. ಇಂತಹ ಕಠಿಣ ಕಾರ್ಯ ಮಾಡುತ್ತಿರೋದಕ್ಕೆ ಸಾರ್ವಜನಿಕರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ