Karnataka Rains: ವಿಜಯಪುರ, ಚಿಕ್ಕಮಗಳೂರು, ಹುಬ್ಬಳ್ಳಿ ಸೇರಿ ಕರ್ನಾಟಕದ ಹಲವೆಡೆ ಮಳೆ
ನಿರೀಕ್ಷೆಯಂತೆಯೇ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಶನಿವಾರವೂ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಚಿಕ್ಕಮಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಮಧ್ಯಾಹ್ನದ ವೇಳೆಗೇ ಮಳೆ ಸುರಿಯಲು ಆರಂಭವಾಗಿದ್ದು, ಇನ್ನು ಕೆಲವೆಡೆ ರಾತ್ರಿ ಮಳೆಯಾಗುವ ಮುನ್ಸೂಚನೆ ಇದೆ. ರಾಜ್ಯದ ಎಲ್ಲೆಲ್ಲಿ ಮಳೆಯಾಯಿತು? ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಮೇ 11: ಕಳೆದ ಕೆಲವು ದಿನಗಳಿಂದ ಕರ್ನಾಟಕದ ವಿವಿಧೆಡೆ (Karnataka Rains) ಮಳೆಯಾಗುತ್ತಿದ್ದು, ಶನಿವಾರವೂ ಮುಂದುವರಿದಿದೆ. ಮಧ್ಯಾಹ್ನದ ವೇಳೆಗೆ ವಿಜಯಪುರ, ಚಿಕ್ಕಮಗಳೂರು, ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳೂ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಇನ್ನೂ ಮೂರ್ನಾಲ್ಕು ದಿನ ರಾಜ್ಯದಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ವಿಜಯಪುರ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನ ಭಾರಿ ಮಳೆ ಸುರಿಯಿತು. ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪೆರೆಯಿತು. ಕೆಲವು ಪ್ರದೇಶಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಹೀಗಾಗಿ ಇದೀಗ ಮುಂಗಾರು ಹಂಗಾಮಿಗೆ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಅದೃಷ್ಟವಶಾತ್, ಈವರೆಗೆ ಮಳೆಯಿಂದ ಯಾವುದೇ ಹಾನಿಯಾದ ವರದಿಯಾಗಿಲ್ಲ.
ಚಿಕ್ಕಮಗಳೂರಿನಲ್ಲಿ ಕೂಡ ಬಿರುಗಾಳಿ ಸಮೇತ ಧಾರಾಕಾರ ಮಳೆ ಆರಂಭವಾಗಿದೆ. ಜಿಲ್ಲೆಯ ಜಯಪುರ, ಎನ್ಆರ್ ಪುರ ಹಾಗೂ ಮೂಡಿಗೆರೆಯಲ್ಲಿ ಮಳೆಯಾಗಿದೆ.
ಮತ್ತೊಂದೆಡೆ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೂಡ ಭಾರಿ ಮಳೆ ಸುರಿದಿದೆ. ಕಳೆದ 20 ನಿಮಿಷದಿಂದ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಂಪೆರೆದ ಮಳೆ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಧ್ಯಾಹ್ನ ಭಾರಿ ಮಳೆ ಸುರಿಯಿತು. ಗಾಳಿ, ಗುಡುಗು ಸಹಿತ ಸುಮಾರು ಅರ್ಧಗಂಟೆಗಳ ಮಳೆಯಾಯಿತು.
ಈ ಮಧ್ಯೆ, ಬೆಂಗಳೂರಿನಲ್ಲಿ ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ವರುಣಾರ್ಭಟ, ಭೀತಿ ಸೃಷ್ಟಿಸಿದ ಗಾಳಿ ಮಳೆ
ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಸುರಿದಿದ್ದ ಭಾರಿ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ಬೆಂಗಳೂರಿನ ಆರ್.ಆರ್.ನಗರ, ಜ್ಞಾನಭಾರತಿ, ಸುಂಕದಕಟ್ಟೆ, ಏರ್ಪೋರ್ಟ್ ರಸ್ತೆ ಸೇರಿ ಹಲವೆಡೆ ಭಾರಿ ಪ್ರಮಾಣದ ಮಳೆಯಾಗಿತ್ತು. ಕೆಂಗೇರಿಯಲ್ಲಿ 89 ಮಿ.ಮೀ., ಪೀಣ್ಯ ಕೈಗಾರಿಕಾ ಪ್ರದೇಶ 62 ಮಿ.ಮೀ, ನಾಯಂಡನಹಳ್ಳಿ 61.5 ಮಿ.ಮೀ., ಹೆಮ್ಮಿಗೆಪುರ 61 ಮಿ.ಮೀ, ಆರ್.ಆರ್.ನಗರ 60 ಮಿ.ಮೀ, ಮಾರುತಿ ಮಂದಿರ 51.50 ಮಿ.ಮೀ, ವಿದ್ಯಾಪೀಠ 50 ಮಿ.ಮೀ, ಉತ್ತರಹಳ್ಳಿ 42 ಮಿ.ಮೀ, ಹಂಪಿನಗರ 39 ಮಿ.ಮೀ, ಯಲಹಂಕ 38.50 ಮಿ.ಮೀ, ಜಕ್ಕೂರು 38 ಮಿ.ಮೀ, ಕೊಟ್ಟಿಗೆಪಾಳ್ಯ 33 ಮಿ.ಮೀ, ಕೊಡಿಗೇಹಳ್ಳಿ 28.50 ಮಿ.ಮೀ, ನಂದಿನಿ ಲೇಔಟ್ನಲ್ಲಿ 28 ಮಿ.ಮೀ. ಮಳೆಯಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Sat, 11 May 24