AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಂಗ್ಯೂ, ಚಿಕುನ್ ಗುನ್ಯಾ ಹಾವಳಿ ಮಧ್ಯೆಯೇ ಮುಷ್ಕರದ ಎಚ್ಚರಿಕೆ ನೀಡಿದ ವೈದ್ಯರು

ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ ಸಾಂಕ್ರಾಮಿಕ ರೋಗಗಳು ಕೂಡ ಹೆಚ್ಚಾಗಿ ಹರಡಲಾರಂಭಿಸಿವೆ. ಡೆಂಗ್ಯೂ, ಚಿಕುನ್ ಗುನ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಮುಷ್ಕರದ ಎಚ್ಚರಿಕೆ ನೀಡಿದೆ. ಆ ಕುರಿತ ವಿವರ ಇಲ್ಲಿದೆ.

ಡೆಂಗ್ಯೂ, ಚಿಕುನ್ ಗುನ್ಯಾ ಹಾವಳಿ ಮಧ್ಯೆಯೇ ಮುಷ್ಕರದ ಎಚ್ಚರಿಕೆ ನೀಡಿದ ವೈದ್ಯರು
ಸಾಂದರ್ಭಿಕ ಚಿತ್ರImage Credit source: Getty Images
Ganapathi Sharma
|

Updated on: Jul 20, 2024 | 10:45 AM

Share

ಬೆಂಗಳೂರು, ಜುಲೈ 20: ಸ್ಟೈಫಂಡ್ ಹೆಚ್ಚಳ ಮಾಡಬೇಕೆಂಬ ಮನವಿಯನ್ನು ಪರಿಗಣಿಸದ ಕಾರಣ ಮುಷ್ಕರ ನಡೆಸುವುದಾಗಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘ (ಅಸೋಸಿಯೇಷನ್ ಆಫ್ ಕರ್ನಾಟಕ ರೆಸಿಡೆಂಟ್ ಡಾಕ್ಟರ್ಸ್) ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಡೆಂಗ್ಯೂ, ಚಿಕುನ್ ಗುನ್ಯಾದಂಥ ಸೋಂಕು ಪ್ರಕರಣಗಳ ಸಂಖ್ಯೆ ವಿಪರೀತ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲೇ ವೈದ್ಯರೂ ಮುಷ್ಕರ ಮಾಡಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.

ಸ್ಟೈಫಂಡ್ ಹೆಚ್ಚಳದ ಪ್ರಸ್ತಾಪದ ಬಗ್ಗೆ ರಾಜ್ಯ ಸರ್ಕಾರ ಸುದೀರ್ಘ ಕಾಲದಿಂದ ಮೌನವಹಿಸಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ವೇತನ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಶೀಘ್ರದಲ್ಲೇ ಪ್ರತಿಭಟನೆಯನ್ನು ಪ್ರಾರಂಭಿಸುವುದು ಅನಿವಾರ್ಯವಾಗಿದೆ ಎಂದು ವೈದ್ಯರ ಸಂಘದ ಪ್ರಕಟಣೆ ತಿಳಿಸಿದೆ.

ಬೇಡಿಕೆಯನ್ನು ಈಡೆರಿಸದೇ ಇರುವುದು ಸ್ಥಾನಿಕ ವೈದ್ಯರನ್ನು ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಒತ್ತಡಕ್ಕೆ ಸಿಲುಕಿಸಿದೆ. ಇದು ರೋಗಿಗಳ ಆರೈಕೆಯ ಮೇಲೆಯೂ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ವಿರಾಮವೇ ತೆಗೆದುಕೊಳ್ಳದೆ 24 ರಿಂದ 48 ಗಂಟೆಗಳ ಕಾಲ ಕೆಲಸ ಮಾಡಿದರೂ ಸ್ಟೈಫಂಡ್ ಅರ್ಹತೆಗಿಂತ ಕಡಿಮೆಯಾಗಿದೆ ಎಂದು ಸಂಘದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ನೆರೆಯ ರಾಜ್ಯಗಳು ಪ್ರತಿ ವರ್ಷ ಮತ್ತು ಕೆಲವು ರಾಜ್ಯಗಳು ಮೂರು ವರ್ಷಗಳಿಗೊಮ್ಮೆ ಸ್ಟೈಫಂಡ್ ಅನ್ನು ಹೆಚ್ಚಿಸುತ್ತವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಮಗೆ ಸಿಗುವ ಸ್ಟೈಫಂಡ್ ತುಂಬಾ ಕಡಿಮೆ. ಕರ್ನಾಟಕದಲ್ಲಿ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ವಿಧಿಸುವ ಶುಲ್ಕವೂ ಹೆಚ್ಚು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರವು 2020 ರಲ್ಲಿ ಸ್ಟೈಫಂಡ್ ಹೆಚ್ಚಿಸಿತ್ತು ಎಂದು ಸಂಘ ತಿಳಿಸಿದೆ.

ಯಾವಾಗಿನಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಘ ತಿಳಿಸಿಲ್ಲ. ಆದರೂ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಅನಾನುಕೂಲತೆಗಳನ್ನು ತಡೆಗಟ್ಟಲು ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಇದನ್ನೂ ಓದಿ: ಫೋನ್‌ ಪೇ ವಿರುದ್ಧ ಸಿಡಿದೆದ್ದ ಕನ್ನಡಿಗರು; ರಾಜ್ಯದಲ್ಲಿ #Boycott PhonePe ಅಭಿಯಾನ

ಪ್ರತಿಭಟನೆ ನಡೆಸಿದರೆ ಅದರಿಂದ ರೋಗಿಗಳಿಗೆ ಆಗುವ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಆದರೆ ನಮ್ಮ ಮನವಿಯನ್ನು ಆಡಳಿತದಲ್ಲಿರುವವರು ಕೇಳುವಂತೆ ಮಾಡಲು ಈ ಪ್ರತಿಭಟನೆ ಅಗತ್ಯ ಎಂದು ಭಾವಿಸುತ್ತೇವೆ. ಹೀಗೆ ಮಾಡಿದರಷ್ಟೇ ಅಧಿಕಾರಿಗಳಿಂದ ತಕ್ಷಣದ ಕ್ರಮವನ್ನು ನಿರೀಕ್ಷಿಸಬಹುದು ಎಂದು ಸಂಘ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ