
ಬೆಂಗಳೂರು, ಆಗಸ್ಟ್ 28: ಕರ್ನಾಟಕದ (Karnataka) ನಾಲ್ಕು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ (Shakti Scheme) ಸರ್ಕಾರದಿಂದ ಬರಬೇಕಿರುವ ಬಾಕಿ ಮೊತ್ತ 5,650.95 ಕೋಟಿ ರೂಪಾಯಿಗೆ ತಲುಪಿದೆ. ಒಂದೆಡೆ ಯೋಜನೆಯಡಿ ಉಚಿತ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಮತ್ತೊಂದೆಡೆ ಯೋಜನೆಯ ವೆಚ್ಚಕ್ಕೆ ಅನುಗುಣವಾಗಿ ಸರ್ಕಾರದಿಂದ ಬರಬೇಕಿರುವ ಹಣ ಬಿಡುಗಡೆಯಾಗದೆ ಸಾರಿಗೆ ನಿಗಮಗಳಿಗೆ ಆರ್ಥಿಕ ಒತ್ತಡ ಎದುರಾಗಿದೆ. 2023ರ ಜೂನ್ 11ರಂದು ಶಕ್ತಿ ಯೋಜನೆ ಆರಂಭವಾದ ಬಳಿಕ 2026ರ ಜುಲೈ 31ರವರೆಗೆ ನಾಲ್ಕು ಸಾರಿಗೆ ನಿಗಮಗಳು ಯೋಜನೆಯಡಿ ಒಟ್ಟು 20,955.96 ಕೋಟಿ ರೂ. ವೆಚ್ಚ ಮಾಡಿವೆ. ಆದರೆ ಸರ್ಕಾರ ಈವರೆಗೆ 15,305.01 ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನೂ 5,650.95 ಕೋಟಿ ರೂ. ಬಾಕಿ ಉಳಿದಿದೆ.
ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ವಿಧಾನ ಪರಿಷತ್ ಅಧಿವೇಶನದಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. ಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಸಾರಿಗೆ ಇಲಾಖೆ ಹಣಕಾಸು ಇಲಾಖೆಗೆ ಮನವಿ ಮಾಡಿತ್ತು. ಆದರೆ, ಈಗಾಗಲೇ ನಾಲ್ಕು ಸಾರಿಗೆ ನಿಗಮಗಳಿಗೆ ವಿವಿಧ ರೀತಿಯಲ್ಲಿ ಅನುದಾನ ನೀಡಲಾಗಿದ್ದು, ಶಕ್ತಿ ಯೋಜನೆಗೂ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದರಿಂದ ಹೆಚ್ಚುವರಿ ಹಣ ಬಿಡುಗಡೆಗೆ ಅವಕಾಶವಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2023-24ರಲ್ಲಿ ನಾಲ್ಕು ನಿಗಮಗಳಲ್ಲಿ 183.06 ಕೋಟಿ ಉಚಿತ ಪ್ರಯಾಣಗಳು ದಾಖಲಾಗಿದ್ದರೆ, 2024-25ರಲ್ಲಿ ಇದು 244.65 ಕೋಟಿಗೆ ಏರಿಕೆಯಾಗಿದೆ. 2025-26ರಲ್ಲಿ 275.70 ಕೋಟಿ ಪ್ರಯಾಣಗಳು ದಾಖಲಾಗಿವೆ.
2026-27ರ ಮೊದಲ ನಾಲ್ಕು ತಿಂಗಳಾದ ಜುಲೈವರೆಗೆ ಮತ್ತಷ್ಟು 93.75 ಕೋಟಿ ಉಚಿತ ಪ್ರಯಾಣಗಳು ದಾಖಲಾಗಿವೆ. ಯೋಜನೆ ಆರಂಭದಿಂದ ಜುಲೈ 2026ರವರೆಗೆ ಒಟ್ಟಾರೆ 797.16 ಕೋಟಿ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ.
ಶಕ್ತಿ ಯೋಜನೆಯ ಹೊರತಾಗಿಯೂ ಸಾರಿಗೆ ನಿಗಮಗಳಿಗೆ ವಿವಿಧ ಉದ್ದೇಶಗಳಿಗಾಗಿ ಸರ್ಕಾರ ಆರ್ಥಿಕ ನೆರವು ನೀಡಿದೆ. ವಿದ್ಯಾರ್ಥಿಗಳ ಬಸ್ ಪಾಸ್, ಸಾಲ ಮತ್ತು ಬಡ್ಡಿ ಮರುಪಾವತಿ, ಕಟ್ಟಡ ನಿರ್ಮಾಣ, ಹೊಸ ಬಸ್‌ಗಳ ಖರೀದಿ, ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF), ಮೋಟಾರು ವಾಹನ ತೆರಿಗೆ ವಿನಾಯಿತಿ ಸೇರಿದಂತೆ ವೇತನ, ಡೀಸೆಲ್, ಭವಿಷ್ಯ ನಿಧಿ ಹಾಗೂ ರಜೆ ನಗದೀಕರಣದ ಬಾಕಿ ಪಾವತಿಗಳಿಗೂ ನೆರವು ನೀಡಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ವಿವಿಧ ವಿಭಾಗಗಳಡಿ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 18,459.37 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದು ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ.
ಆದರೆ, ಶಕ್ತಿ ಯೋಜನೆಯಡಿ ಈಗಾಗಲೇ ಖರ್ಚಾಗಿರುವ 20,955.96 ಕೋಟಿ ರೂ.ಗೆ ಹೋಲಿಸಿದರೆ 5,650.95 ಕೋಟಿ ರೂ. ಬಾಕಿ ಉಳಿದಿರುವುದು ಸಾರಿಗೆ ನಿಗಮಗಳ ಹಣಕಾಸಿನ ಪರಿಸ್ಥಿತಿಯ ಮೇಲೆ ಗಮನ ಸೆಳೆದಿದೆ. ಉಚಿತ ಪ್ರಯಾಣದ ಸಂಖ್ಯೆ ಏರಿಕೆಯಾಗುತ್ತಿರುವ ಸಂದರ್ಭದಲ್ಲೇ ಬಾಕಿ ಮೊತ್ತದ ಪ್ರಶ್ನೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ