
ಬೆಂಗಳೂರು, ಆಗಸ್ಟ್ 24: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಇಂದು ಮೊದಲ ಕರಡು ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ (V. Anbukumar) ಎಸ್ಐಆರ್-2026 ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 5 ಕೋಟಿ 54 ಲಕ್ಷ 32 ಸಾವಿರದ 314 ಮತದಾರರಿದ್ದರು. ಇದರಲ್ಲಿ ಎಸ್ಐಆರ್ ನಂತರ 4 ಕೋಟಿ 46 ಲಕ್ಷ 80 ಸಾವಿರದ 151 ಮತದಾರರು ಉಳಿದಿದ್ದಾರೆ. ಒಟ್ಟು 4 ಕೋಟಿ 46 ಲಕ್ಷ 35 ಸಾವಿರದ 975 ಮಂದಿಯ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಶೇಕಡಾ 80.52ರಷ್ಟು ಡಿಜಿಟಲೀಕರಣವಾಗಿದೆ. ಕರಡು ಪಟ್ಟಿಯಲ್ಲಿ 2 ಕೋಟಿ 22 ಲಕ್ಷದ 1 ಸಾವಿರದ 727 ಪುರುಷ ಮತದಾರರು, 2 ಕೋಟಿ 24 ಲಕ್ಷದ 75 ಸಾವಿರದ 553 ಮಹಿಳಾ ಮತದಾರರು ಹಾಗೂ 2,871 ತೃತೀಯ ಲಿಂಗಿ ಮತದಾರರು ಇದ್ದಾರೆ.
ಎನ್ಯುಮರೇಷನ್ ಫಾರ್ಮ್ ಸಲ್ಲಿಸದ 1 ಕೋಟಿ 7 ಲಕ್ಷ 96 ಸಾವಿರದ 339 ಮತದಾರರನ್ನು ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆ. ಅವರಲ್ಲಿ 65 ಲಕ್ಷ 45 ಸಾವಿರದ 679 ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 16 ಲಕ್ಷ 39 ಸಾವಿರದ 864 ಜನರು ಮೃತಪಟ್ಟಿದ್ದಾರೆ. 15 ಲಕ್ಷ 17 ಸಾವಿರದ 42 ಮಂದಿ ಗೈರಾದವರು, 7 ಲಕ್ಷ 9 ಸಾವಿರದ 870 ಜನರು ಒಂದಕ್ಕಿಂತ ಹೆಚ್ಚು ಕಡೆ ಮತ ಹೊಂದಿದ್ದ ಡ್ಯೂಪ್ಲಿಕೇಟ್ ಮತದಾರರು ಹಾಗೂ 3 ಲಕ್ಷ 83 ಸಾವಿರದ 884 ಮಂದಿ ಇತರೆ ವಿಭಾಗದವರು ಸೇರಿದ್ದಾರೆ.
ಜೂನ್ 6ರಿಂದ ಆಗಸ್ಟ್ 23ರವರೆಗೆ ಒಟ್ಟು 14 ಲಕ್ಷ 67 ಸಾವಿರದ 929 ಮಂದಿ ವಿವಿಧ ಫಾರ್ಮ್‌ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಫಾರ್ಮ್ ನಂಬರ್ 6- 4,73,354, ಫಾರ್ಮ್ ನಂಬರ್ 6A – 3,880, ಫಾರ್ಮ್ ನಂಬರ್ 7 – 67,307 ಮತ್ತು 9,23,388 ಜನರು ಫಾರ್ಮ್ ನಂಬರ್ 8 ಪಡೆದುಕೊಂಡಿದ್ದಾರೆ.
ಇನ್ನು ಇಂದಿನಿಂದ ಅಂದರೆ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಒಂದು ತಿಂಗಳ ಕಾಲ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತದಾರರು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದು. ಭೌತಿಕವಾಗಿ ERO/AERO ಮೂಲಕ ಅಥವಾ ಆನ್‌ಲೈನ್‌ನಲ್ಲಿ Voters ECI ಪೋರ್ಟಲ್ ಮತ್ತು ECINET ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಆಕ್ಷೇಪಣೆಗಳ ಪಟ್ಟಿ CEO ಕರ್ನಾಟಕ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ಪರಿಶೀಲಿಸಿ ಸಂಬಂಧಪಟ್ಟ ಇಆರ್ಓಗೆ ಆಕ್ಷೇಪಣೆ ಸಲ್ಲಿಸಬಹುದು. ಈ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ವಾರಕ್ಕೊಮ್ಮೆ ನೀಡಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:26 pm, Mon, 24 August 26