ನಟ ದರ್ಶನ್​ ಪರ ಬ್ಯಾಟ್​ ಬೀಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

BC Patil: ನಟ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ಅವರ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿದ್ದಾರೆ. ದರ್ಶನ್ ಅವರು ಒಳ್ಳೆಯ ವ್ಯಕ್ತಿಯಾಗಿದ್ದು ಅವರ ತೇಜೋವಧೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಅವರು ದೂರಿದ್ಧಾರೆ.

ನಟ ದರ್ಶನ್​ ಪರ ಬ್ಯಾಟ್​ ಬೀಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು: ಬಹಳ ಕಷ್ಟದಿಂದ ಬೆಳೆದು ಈ ಮಟ್ಟಕ್ಕೆ ತಲುಪಿರುವ ದರ್ಶನ್ ಅವರ ತೇಜೋವಧೆಗೆ ಹಲವರು ಪ್ರಯತ್ನಪಡುತ್ತಿದ್ದಾರೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಬರನ್ನು ಚಿತ್ರರಂಗದಲ್ಲಿ ಪ್ರೋತ್ಸಾಹಿಸುವ ದರ್ಶನ್ ಅವರ ಕಾರ್ಯವೈಖರಿ ಶ್ಲಾಘನೀಯ. ಅವರು ಬಹಳ ಒಳ್ಳೆಯ ವ್ಯಕ್ತಿ ಎಂದು ಹೇಳಿದರು. ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ದರ್ಶನ್ ಅವರನ್ನು ಕೈಬಿಡಲಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಇಲಾಖೆ ತನಿಖೆ ನಡೆಸಲಿದೆ. ಅವರು ಯಾರ ಒತ್ತಾಯಕ್ಕೂ ಮಣಿಯದೇ ಸ್ವತಂತ್ರ ತನಿಖೆ ನಡೆಸುತ್ತಾರೆ. ದರ್ಶನ್ ಹೇಳಿಕೆಗಳು ಆ ಸಂದರ್ಭದ ಒತ್ತಡದಿಂದ ಬಂದಿರುತ್ತವಷ್ಟೇ. ಯಾರನ್ನೋ ಗಮನದಲ್ಲಿಟ್ಟುಕೊಂಡು ಅವರು ಹೇಳಿರುವುದಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ನಟ ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಇಂದ್ರಜಿತ್ ನನ್ನನ್ನು ಸದ್ಯಕ್ಕೆ ಭೇಟಿಯಾಗಿಲ್ಲ :ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಈ ನಡುವೆ ಇಂದ್ರಜಿತ್ ಲಂಕೇಶ್ ಜೊತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಫೋಟೊ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಯಾಕೆ ಈ ಫೊಟೊ ವೈರಲ್ ಮಾಡುತ್ತಿದ್ದಾರೆ ಗೊತ್ತಿಲ್ಲ. ಪ್ರತೀ ದಿನ ನನ್ನನ್ನು ನೂರಾರು ಜನ ಭೇಟಿ ಮಾಡುತ್ತಾರೆ. ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ನನ್ನನ್ನು ಇಂದ್ರಜಿತ್ ಭೇಟಿ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

ನಿನ್ನೆಯಿಂದ ಇಂದ್ರಜಿತ್ ಲಂಕೇಶ್ ಅವರ ವಿಚಾರಗಳು ಮಾಧ್ಯಮಗಳಲ್ಲಿ ಪ್ರಸ್ತಾಪಿತವಾಗುತ್ತಿವೆ. ಆದರೆ ಅದಕ್ಕೂ ನನಗೂ ಸಂಬಂಧವೇ ಇಲ್ಲ. ಈಗ ವೈರಲ್ ಆಗಿರುವ ಚಿತ್ರವೂ ಹಳೆಯದು. ಅವರು ನನ್ನನ್ನು ಹಲವಾರು ಬಾರಿ ಭೇಟಿ ಮಾಡಿ ಸಂದರ್ಶನ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆದರೆ ಇತ್ತೀಚೆಗೆ ಭೇಟಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ದರ್ಶನ್​ ಹಲ್ಲೆ ಪ್ರಕರಣ: ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿ ಗಂಗಾಧರ್​ ಹೇಳಿಕೆ ಪಡೆದ ಪೊಲೀಸರು

ಇದನ್ನೂ ಓದಿ: ದರ್ಶನ್​ ಪ್ರೆಸ್​ ಮೀಟ್​ ನಂತರ ಹಲ್ಲೆ ಸಂಬಂಧ ಫೋಟೋ, ವಿಡಿಯೋ ಸಾಕ್ಷ್ಯದೊಂದಿಗೆ ಇಂದ್ರಜಿತ್​ ಲಂಕೇಶ್ ಕೌಂಟರ್​ ಸುದ್ದಿಗೋಷ್ಠಿ ಸಾಧ್ಯತೆ

(Karnataka State Agriculture Minister B C Patil stands with Actor Darshan)