Karnataka Coronavirus Update: ರಾಜ್ಯದಲ್ಲಿಂದು 4,234 ಹೊಸ ಕೊರೊನಾ ಪ್ರಕರಣ ಪತ್ತೆ; 18 ಜನರು ಮೃತ

ಬೆಂಗಳೂರು ಮಹಾನಗರದಲ್ಲಿ ಇಂದು ಒಂದೇ ದಿನ 2,906 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಬೆಂಗಳೂರು ಒಂದರಲ್ಲೇ ಕೊರೊನಾ ಸೋಂಕಿಗೆ 11 ಜನರು ಮೃತಪಟ್ಟಿದ್ದಾರೆ.

Karnataka Coronavirus Update: ರಾಜ್ಯದಲ್ಲಿಂದು 4,234  ಹೊಸ ಕೊರೊನಾ ಪ್ರಕರಣ ಪತ್ತೆ; 18 ಜನರು ಮೃತ
ಆರೋಗ್ಯ ಸಚಿವ ಡಾ.ಸುಧಾಕರ್ ಕರ್ನಾಟಕದಲ್ಲಿ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
Follow us
guruganesh bhat
|

Updated on: Apr 01, 2021 | 7:50 PM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಗುರುವಾರ ಒಂದೇ ದಿನ (ಏಪ್ರಿಲ್ 1) 4,234 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 10,01,238ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಒಂದೇ ದಿನ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 18 ಜನರು ಮೃತಪಟ್ಟಿದ್ದಾರೆ. ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆಯು 12,585 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 9,57,769 ಜನ ಗುಣಮುಖರಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಹಿಂತಿರುಗಿದ್ದಾರೆ.

30,865 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಂಗಳೂರು ಮಹಾನಗರದಲ್ಲಿ ಇಂದು ಒಂದೇ ದಿನ 2,906 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಬೆಂಗಳೂರು ಒಂದರಲ್ಲೇ ಕೊರೊನಾ ಸೋಂಕಿಗೆ 11 ಜನರು ಮೃತಪಟ್ಟಿದ್ದಾರೆ. ನಗರದಲ್ಲಿ ಕೊರೊನಾದಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 4,630ಕ್ಕೆ ಏರಿಕೆಯಾಗಿದೆ.

ಇಂದಿನಿಂದ ವಿಸ್ತರಣೆಯಾಗಿದೆ ಲಸಿಕೆ ಅಭಿಯಾನ

ಕೊರೊನಾ ಲಸಿಕೆ ವಿತರಣೆಯ ವೇಗ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸ ನಿರ್ಧಾರ ಕೈಗೊಂಡಿದೆ. ಏಪ್ರಿಲ್ ತಿಂಗಳಲ್ಲಿ ಸರ್ಕಾರಿ ರಜಾ ದಿನಗಳಲ್ಲಿಯೂ ಕೊರೊನಾ ಲಸಿಕೆ ವಿತರಣೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸರ್ಕಾರಿ ಮತ್ತು ಖಾಸಗಿ‌ ಎರಡೂ ಬಗೆಯ ಲಸಿಕಾ ಕೇಂದ್ರಗಳಲ್ಲಿ ಕೊರೊನಾ ಲಸಿಕೆಯನ್ನು ಏಪ್ರಿಲ್ ತಿಂಗಳ ಸರ್ಕಾರಿ ರಜಾ ದಿನಗಳಲ್ಲಿಯೂ ವಿತರಣೆ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ದೇಶದಲ್ಲಿ ಇಂದಿನಿಂದ (ಏಪ್ರಿಲ್ 1 ) 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಶುರುವಾಗಿದೆ. ಲಸಿಕೆ ಪಡೆಯಬಯಸುವವರು ಕೊವಿನ್ ಪೋರ್ಟಲ್​ನಲ್ಲಿ ತಮ್ಮ ಹೆಸರು ರಿಜಿಸ್ಟರ್ ಮಾಡಿಕೊಳ್ಳಬೇಕಿದ್ದು, 45 ವರ್ಷಕ್ಕಿಂತ ಮೇಲ್ಪಟ ಎಲ್ಲರೂ ಲಸಿಕೆ ಪಡೆಯಬಹುದಾಗಿದೆ.

ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಹೊಸ ಸುದ್ದಿ

ಸರ್ಕಾರಿ ನೌಕರರಿಗೆ ಕೊರೊನಾ ಸೋಂಕು ತಗುಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ವೆಚ್ಚ ಮರುಪಾವತಿ ಮಾಡಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ಕೊರೊನಾ ಸೋಂಕು ಚಿಕಿತ್ಸೆಯ ಮರುಪಾವತಿ ಕ್ಲೇಮ್​ಗಳಿಗೆ ಸರ್ಕಾರದಿಂದ ಪ್ಯಾಕೇಜ್​ ನಿಗದಿ ಮಾಡಲಾಗಿದೆ. ಜನರಲ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆದರೆ ದಿನಕ್ಕೆ ₹10,000, HDU ವಾರ್ಡ್​ನಲ್ಲಿ ಚಿಕಿತ್ಸೆ ಪಡೆದರೆ ದಿನಕ್ಕೆ ₹ 12,000, ವೆಂಟಿಲೇಟರ್​ ರಹಿತ ಐಸೋಲೇಷನ್​ ICUನಲ್ಲಿ ಚಿಕಿತ್ಸೆ ಪಡೆದರೆ ₹ 15,00ಪಾವತಿ ಮಾಡಲಾಗುತ್ತದೆ. ಒಂದುವೇಳೆ ವೆಂಟಿಲೇಟರ್​ ಸಹಿತ ಐಸೋಲೇಷನ್​ ICUನಲ್ಲಿ ಚಿಕಿತ್ಸೆ ಪಡೆದರೆ​ ₹ 25,000 ಮರು ಪಾವತಿ ಮಾಡಲಾಗುವುದಾಗಿ ಸರ್ಕಾರ ಘೋಷಿಸಿದೆ.

ಪಿಪಿಇ ಕಿಟ್, ಇತರೆ ಕನ್ಸೂಮೇಬಲ್​ ಐಟಂ ಒಳಗೊಂಡಂತೆ ಮರುಪಾವತಿ ಕ್ಲೇಮ್​ಗಳಿಗೆ ಸರ್ಕಾರದಿಂದ ಪ್ಯಾಕೇಜ್​ ದರ ನಿಗದಿ ಮಾಡಲಾಗಿದೆ. ಆಸ್ಪತ್ರೆಯ ಚಿಕಿತ್ಸೆ ದರ ಪ್ಯಾಕೇಜ್​ ದರಕ್ಕಿಂತ ಕಡಿಮೆ ಇದ್ದರೆ ರಾಜ್ಯ ಸರ್ಕಾರ ಕಡಿಮೆ ಮೊತ್ತ ಮರುಪಾವತಿಸಲಿದೆ. ಆದರೆ ಕೊರೊನಾ ಸೋಂಕಿನಿಂದ ಗುಣಮುಖರಾಗಲು ಪಡೆಯುವ ಚಿಕಿತ್ಸೆಗೆ ವೈದ್ಯಕೀಯ ಮುಂಗಡ ಪಾವತಿಸಲು ಅವಕಾಶವಿಲ್ಲ ಎಂದು ಸರ್ಕಾರದ ಈ ಆದೇಶ ತಿಳಿಸಿದೆ.

ರೋಗ ಇಲ್ಲದಿದ್ದರೂ ಲಸಿಕೆ ಪಡೆಯಲು ಅವಕಾಶ ಭಾರತದಲ್ಲಿ ಈಗ ಕೊರೊನಾದ ಎರಡನೇ ಅಲೆಯ ಅಬ್ಬರ ಶುರುವಾಗಿದೆ. ಕೊರೊನಾದ ಹೊಡೆತದಿಂದ ತಪ್ಪಿಸಿಕೊಳ್ಳಲು ಕೊರೊನಾ ಲಸಿಕೆಯೇ ರಾಮಬಾಣ. ಆದರೆ, ಲಸಿಕೆ ಲಭ್ಯವಿದ್ದರೂ, ಜನರು ಲಸಿಕೆ ಪಡೆಯಲು ಸ್ವಪ್ರೇರಣೆಯಿಂದ ಮುಂದೆ ಬರುತ್ತಿಲ್ಲ. ಇದುವರೆಗೂ ದೇಶದಲ್ಲಿ 45 ವರ್ಷ ಮೇಲ್ಪಟ್ಟ ಬೇರೆ ಬೇರೆ ರೋಗದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿತ್ತು. ಜೊತೆಗೆ ಮೊದಲನೇ ಹಂತದಲ್ಲಿ ದೇಶದಲ್ಲಿ ಜನವರಿ 16 ರಿಂದ, ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಬಳಿಕ ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟವರು, ರೋಗದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಆದರೂ ಕೂಡ ದೇಶದಲ್ಲಿ ಮಾರ್ಚ್ 30ರ ಸಂಜೆ 7 ಗಂಟೆಯವರೆಗೂ 6.24 ಕೋಟಿ ಜನರು ಮಾತ್ರ ಕೊರೊನಾ ಲಸಿಕೆ ಪಡೆದಿದ್ದಾರೆ.

ಇದನ್ನೂ ಓದಿ:ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆದ ಸರ್ಕಾರಿ ಉದ್ಯೋಗಿಗಳಿಗೆ ವೆಚ್ಚ ಮರುಪಾವತಿ; ಕರ್ನಾಟಕ ಸರ್ಕಾರ ಆದೇಶ

TV9 Digital Live| ಕೊವಿಡ್​ ನಿಯಂತ್ರಣ ಮಾಡಲು ಸರ್ಕಾರ ತಂದ ಹೊಸ ಮಾರ್ಗಸೂಚಿ ಸಹಕಾರಿಯಾಗಬಹುದೇ?