ಸ್ವಾಮೀಜಿ ಮೂಲಕ ಪೋಷಕರ ಮೇಲೆ ಒತ್ತಡ: ಯುವತಿ ಪರ ವಕೀಲ ಸೂರ್ಯ ಮುಕುಂದರಾಜ್
ಸಂತ್ರಸ್ತೆಯ ಪರ ಹೋರಾಡುತ್ತಿರುವ ವಕೀಲ ಸೂರ್ಯ ಮುಕುಂದ್ರಾಜ್ ಸಂತ್ರಸ್ತೆಯ ಸಮುದಾಯದ ಸ್ವಾಮೀಜಿ ವಿರುದ್ಧ ಮಾತನಾಡಿ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆಯ ಪರವಾಗಿ ಹೋರಾಡುತ್ತಿರುವ ಅನೇಕ ವಕೀರಲ್ಲಿ ಒಬ್ಬರಾದ ಸೂರ್ಯ ಮುಕುಂದ್ರಾಜ್ ಈಗ ಹೊಸ ಬಾಂಬ್ ಒಂದನ್ನ ಸಿಡಿಸಿದ್ದಾರೆ. ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಸಂತ್ರಸ್ತೆಯ ತಂದೆ ಮನೆಗೆ ಹೋಗಿ ಆಮೇಲೆ ಮಾಧ್ಯಮಕ್ಕೆ ನೀಡಿದ ಹೇಳಿಕೆ ಬಗ್ಗೆ ಮುಕುಂದ್ರಾಜ್ ಪ್ರತಿಕ್ರಿಯಿಸಿದ್ದಾರೆ. ‘ನಮ್ಮ ಪೋಷಕರ ಮೇಲೆ ಸಮಾಜ ಸ್ವಾಮಿಜಿಯೊಬ್ಬರು ಕೂಡ ಒತ್ತಡ ಹೇರುತ್ತಿದ್ದು, ನಮ್ಮ ನಿವಾಸಕ್ಕೆ ಕಳುಹಿಸಿ ಪೋಷಕರ ಮನಪರಿವರ್ತನೆ ಮಾಡಲಾಗುತ್ತಿದೆ’ ಎಂದು ತಮ್ಮ ಕಕ್ಷಿದಾರರಾದ ಸಂತ್ರಸ್ತ ಯುವತಿಯ ಪರವಾಗಿ ವಕೀಲ ಸೂರ್ಯ ಮುಕುಂದರ್ರಾಜ್ ಹೇಳಿದ್ದಾರೆ. ಆದರೆ ಸಂತ್ರಸ್ತೆ ಈ ರೀತಿ ಹೇಳಿದ್ದಾಳೆ ಎನ್ನಲು ಅವರು ಯಾವುದೇ ಸಾಕ್ಷ್ಯ ನೀಡಲಿಲ್ಲ.
ಹೈಕೋರ್ಟ್ಗೆ ಬುಧವಾರ (ಮಾರ್ಚ್ 31) ಅರ್ಜಿ ಹಾಕಿಕೊಂಡಿರುವ ಸಂತ್ರಸ್ತೆಯ ತಂದೆ, ‘ಇನ್ನೊಬ್ಬರ ಒತ್ತಡಕ್ಕೆ ಮಣಿದು ಸೆಕ್ಷನ್ 164ರ ಅಡಿ ನನ್ನ ಮಗಳು ಹೇಳಿಕೆ ನೀಡಿದ್ದಾಳೆ. ಆದ್ದರಿಂದ ಅದನ್ನು ತಿರಸ್ಕರಿಸಬೇಕು ಎಂದು ಹೇಳಿದ್ದರು. ಈ ಹೇಳಿಕೆಗೆ ವಕೀಲ ಮುಕುಂದರಾಜ್ ಪ್ರತಿಕ್ರಿಯಿಸಿದ್ದಾರೆ.
ಯುವತಿ ಹೇಳಿಕೆ ನೀಡುವಾಗ ವಕೀಲರ ಹಾಜರಿಯನ್ನು ಪ್ರಶ್ನಿಸಿರುವ ಪೋಷಕರ ಆರೋಪಕ್ಕೆ ಸಂಬಂಧಿಸಿದಂತೆ, ಟಿವಿ9 ಜೊತೆ ಮಾತನಾಡಿರುವ ಸೂರ್ಯ ಮುಕುಂದ್ ರಾಜ್, ತಾಯಿತಂದೆಯೇ ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಸಂತ್ರಸ್ತೆಯ ಜೊತೆಗಿರಬೇಕಾಗಿತ್ತು. ಆದರೆ ಪೋಷಕರು ಇನ್ನೊಬ್ಬರ ಒತ್ತಡಕ್ಕೆ ಮಣಿದು ಸೆಕ್ಷನ್ 164 ಅಡಿ ಸಂತ್ರಸ್ತೆ ಹೇಳಿಕೆ ನೀಡದಂಥ ಸಂದರ್ಭ ಸೃಷ್ಠಿಸಲು ಯತ್ನಿಸುತ್ತಿದ್ದಾರೆ. ಅಲ್ಲದೇ ಸಂತ್ರಸ್ತೆಯೇ ತಮ್ಮ ಪೋಷಕರ ವರ್ತನೆಗೆ ಅಚ್ಚರಿ ವ್ಯಕ್ತಪಡಿಸಿದ್ದಾಳೆ ಎಂದು ಮುಕುಂದ್ರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಸಂತ್ರಸ್ತೆ ತಮ್ಮ ಪೋಷಕರು ಇದುವರೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದವರಲ್ಲ. ಅವರೇ ಈ ರೀತಿ ಹೇಳುತ್ತಾರೆ ಅಂದರೆ ನಂಬಲು ಸಾಧ್ಯವಿಲ್ಲ. ನಮ್ಮ ಭಾಗದ ಬಲಾಡ್ಯ ವ್ಯಕ್ತಿ, ಹಣವಂತರು ನನ್ನ ಪೋಷಕರ ಮೇಲೆ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ ಎಂದು ಅಳಲನ್ನ ತೋಡಿಕೊಂಡಿದ್ದಾರೆ ಎಂದು ತಮ್ಮ ಬಳಿ ಹೇಳಿರುವುದಾಗಿ ಸೂರ್ಯ ಮುಕುಂದ್ ರಾಜ್ ತಿಳಿಸಿದ್ದಾರೆ. ಇದಕ್ಕಿಂತ ಶಾಕಿಂಗ್ ಅಂದರೆ, ನಮ್ಮ ಪೋಷಕರ ಮೇಲೆ ಸಮಾಜ ಸ್ವಾಮಿಜಿಯೊಬ್ಬರು ಕೂಡ ಒತ್ತಡ ಹೇರುತ್ತಿದ್ದು, ನಮ್ಮ ನಿವಾಸಕ್ಕೆ ಕಳುಹಿಸಿ ಪೋಷಕರ ಮನಪರಿವರ್ತನೆ ಮಾಡಲಾಗುತ್ತಿದೆ ಎಂದು ಕೂಡ ಸಂತ್ರಸ್ತೆಯ ಪರವಾಗಿ ಮುಕುಂದ್ರಾಜ್ ಹೇಳಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.
ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ: ಮುಕುಂದ್ ರಾಜ್ ಈ ನಡುವೆ ನನಗೆ ಜೀವ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿದೆ. ನಮ್ಮ ಎಸ್ಟಿ ಸಮಾಜದ ಹುಡುಗ ಹುಡುಗಿ. ಮಧ್ಯದಲ್ಲಿ ನಿಮ್ಮದೇನು ಎಂದು ನೇರವಾಗಿಯೇ ಕೆಲವರು ಬೆದರಿಕೆ ಹಾಕಿದ್ದಾರೆ. ಆದರೆ ನಾನು ಇದನ್ನು ಇಷ್ಟು ದಿನ ಯಾರ ಮುಂದೆಯೂ ಹೇಳಿರಲಿಲ್ಲ. ಹಾಗಂತ ನನಗೆ ಬೆದರಿಕೆ ಇದೆ ಅಂದ ಮಾತ್ರಕ್ಕೆ ನಾನು ಈ ಗೊಡ್ಡು ಬೆದರಿಕೆ ಹೆದರುವವನು ಅಲ್ಲ ಎಂದು ಟಿವಿ9ಗೆ ಸಂತ್ರಸ್ತೆ ಪರ ವಕೀಲ ಸೂರ್ಯ ಮುಕುಂದ್ರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಸಿಡಿ ಸಂತ್ರಸ್ತೆಯ ಬಟ್ಟೆ ತೆಗೆದುಕೊಂಡ ಎಸ್ಐಟಿ; ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ
(CD lady advocate makes serious allegation against Valmiki community swamiji)
Published On - 9:37 pm, Thu, 1 April 21