Karnataka Urban Local Body Election Results: ಸೊಸೆ ವಿರುದ್ಧ ಅತ್ತೆ ಗೆಲುವು, ಬಾಗಲಕೋಟೆಯಲ್ಲಿ ಗೆಲುವು ಹಂಚಿಕೊಂಡ ದಂಪತಿ
ಬಾಗಲಕೋಟೆಯಲ್ಲಿ ಪತಿ-ಪತ್ನಿ ಇಬ್ಬರೂ ಕಮಾಲ್ ಮಾಡಿದ್ದಾರೆ. ಕಮತಗಿ ಪಟ್ಟಣ ಪಂಚಾಯಿತಿ ಮತ ಎಣಿಕೆಯಲ್ಲಿ ಪತಿ ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ ಏಳರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪತಿ ದೇವಿ ಪ್ರಸಾದ್ ನಿಂಬಲಗುಂದಿ ಜಯ ಕಂಡಿದ್ದಾರೆ.

ದಾವಣಗೆರೆ: ಕುತೂಹಲ ಕೆರಳಿಸಿದ್ದ ಐದು ನಗರಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ ಭವಿಷ್ಯ ಇಂದು (ಡಿಸೆಂಬರ್ 30) ಪ್ರಕಟಗೊಂಡಿದೆ. ಇದರ ನಡುವೆ ಕೆಲವು ಕಡೆ ರಣರೋಚಕ ಪ್ರಸಂಗಗಳು ಸಹ ಸಂಭವಿಸಿವೆ. ದಾವಣಗೆರೆ ಚನ್ನಗಿರಿ ತಾಲೂಕಿನ ಕರೇಕಟ್ಟೆ ಗ್ರಾಮದ ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲಿ ಸೊಸೆ ವಿರುದ್ಧ ಅತ್ತೆ ಗೆದ್ದ ಪ್ರಸಂಗ ನಡೆದಿದೆ.
ಕೆರೆಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 14 ಸ್ಥಾನಗಳಿದ್ದವು. ಈ ಪೈಕಿ ಎರಡನೇ ವಾರ್ಡ್ನಲ್ಲಿ ಮಹಿಳೆಯೊಬ್ಬರು ತೀರಿಕೊಂಡಿದ್ದರು. ತೆರವಾದ ಸ್ಥಾನಕ್ಕೆ ಅತ್ತೆ ಪಾರ್ವತಮ್ಮ ಮತ್ತು ಸೊಸೆ ಲಕ್ಷ್ಮಮ್ಮ ಇಬ್ಬರೂ ಸ್ಪರ್ಧೆ ಮಾಡಿದ್ದು 91 ಮತಗಳ ಅಂತರದಿಂದ ಅತ್ತೆ ಪಾರ್ವತಮ್ಮ ಗೆಲುವು ಸಾಧಿಸಿದ್ದಾರೆ.
ಪತಿ, ಪತ್ನಿ ಗೆಲುವು ಬಾಗಲಕೋಟೆಯಲ್ಲಿ ಪತಿ-ಪತ್ನಿ ಇಬ್ಬರೂ ಕಮಾಲ್ ಮಾಡಿದ್ದಾರೆ. ಕಮತಗಿ ಪಟ್ಟಣ ಪಂಚಾಯಿತಿ ಮತ ಎಣಿಕೆಯಲ್ಲಿ ಪತಿ ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ ಏಳರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪತಿ ದೇವಿ ಪ್ರಸಾದ್ ನಿಂಬಲಗುಂದಿ ಜಯ ಕಂಡಿದ್ದಾರೆ. ಇನ್ನು ವಾರ್ಡ್ ನಂಬರ್ 15ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪತ್ನಿ ನೇತ್ರಾವತಿ ನಿಂಬಲಗುಂದಿ ಕೂಡ ಜಯ ಗಳಿಸಿದ್ದಾರೆ.
ಪೆಟ್ರೋಲ್ ಬಂಕ್ ಕಾರ್ಮಿಕನಿಗೆ ಗೆಲುವು ಯಾದಗಿರಿಯಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಯುವಕ ಗೆಲವು ಸಾಧಿಸಿ, ಪುರಸಭೆಗೆ ಪ್ರವೇಶ ಮಾಡಿದ್ದಾನೆ. ಕಕ್ಕೇರಾ ಮತದಾರರು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಪರಶುರಾಮನ ಕೈ ಹಿಡಿದಿದ್ದಾರೆ. ಕಕ್ಕೇರಾ ಪುರಸಭೆಯ ವಾರ್ಡ್ ನಂಬರ್ 6ರಿಂದ ಕಾಂಗ್ರೆಸ್ ಪಕ್ಷದಿಂದ ಪರಶುರಾಮ ಸ್ಪರ್ಧಿಸಿದ್ದ. ಇದೀಗ ಗೆಲುವು ಸಾಧಿಸಿದ್ದು, ಫುಲ್ ಖುಷ್ ಆಗಿದ್ದಾನೆ.
ಸಹೋದರಿಯರ ವಿಜಯಪತಾಕೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಸಹೋದರಿಯರು ವಿಜಯಪತಾಕೆ ಹಾರಿಸಿದ್ದಾರೆ. ನಗರಸಭೆಯ 33, 34ನೇ ವಾರ್ಡ್‌ಗಳಲ್ಲಿ ಸಹೋದರಿಯರಿಗೆ ಗೆಲುವು ಸಿಕ್ಕಿದೆ. 33 ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಕ್ಕ ಪರಗಂಟಿ ಲಕ್ಷ್ಮಿ, 34 ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಂಗಿ ಲತಾ ಸಂತೋಷ್ ಗೆಲುವು ಸಾಧಿಸಿದ್ದಾರೆ.
ಶಿರಸಿಯಲ್ಲಿ ಅಜ್ಜಿ ವಿರುದ್ಧ ಗೆದ್ದ ಮೊಮ್ಮಗಳು ಇನ್ನು ಶಿರಸಿ ತಾಲೂಕಿನ ಅಂಡಗಿ ಗ್ರಾಮ ಪಂಚಾಯಿತಿಯ ಕಿರವತ್ತಿ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಶಿವಕ್ಕ ಚಂದ್ರಪ್ಪ ಚೆನ್ನಯ್ಯ ವಿರುದ್ಧ 76 ಮತಗಳಿಂದ ಸಂಗೀತಾ ಗಣೇಶ ಚೆನ್ನಯ್ಯ ಗೆಲುವು ಸಾಧಿಸಿದ್ದಾರೆ. ಸೋತ ಶಿವಕ್ಕ ಗೆದ್ದ ಸಂಗೀತಾರಿಗೆ ಸಂಬಂಧದಲ್ಲಿ ಅಜ್ಜಿಯಾಗಬೇಕು. ಒಂದೇ ಕುಟುಂಬದಿಂದ ಅಜ್ಜಿ ಹಾಗೂ ಮೊಮ್ಮಗಳು ಚುನಾವಣೆಗೆ ನಿಂತಿದ್ದು ಇದೀಗ ಅಜ್ಜಿಯನ್ನು ಸೋಲಿಸಿ, ಮೊಮ್ಮಗಳು ಗೆದ್ದು ಬೀಗಿದ್ದಾರೆ.
ಇದನ್ನೂ ಓದಿ: ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದಲ್ಲಿ ಕಮಾಲ್ ಮಾಡಿದ ಕಾಂಗ್ರೆಸ್; ನಗರಸಭೆ ಫಲಿತಾಂಶದಲ್ಲಿ ಬಿಜೆಪಿಗೆ ಮೂರೇ ಮೂರು!