ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದಲ್ಲಿ ಕಮಾಲ್ ಮಾಡಿದ ಕಾಂಗ್ರೆಸ್; ನಗರಸಭೆ ಫಲಿತಾಂಶದಲ್ಲಿ ಬಿಜೆಪಿಗೆ ಮೂರೇ ಮೂರು!
Karnataka Urban Local Body Election Results: 19 ಪುರಸಭೆಗಳ ಫಲಿತಾಂಶ ಮುಕ್ತಾಯಗೊಂಡಿದ್ದು 19 ಪುರಸಭೆಗಳ ಪೈಕಿ 8ರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಬಿಜೆಪಿ 6, ಜೆಡಿಎಸ್ 1 ಹಾಘೂ 4 ಅತಂತ್ರ ಫಲಿತಾಂಶ ಬಂದಿದೆ. ರಾಜ್ಯದ 34 ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಕೂಡ ಪ್ರಕಟವಾಗಿದ್ದು 34 ಪಟ್ಟಣ ಪಂಚಾಯಿತಿಗಳ ಪೈಕಿ 16ರಲ್ಲಿ ಕಾಂಗ್ರೆಸ್ ಪಕ್ಷದ ಪಾಲಾಗಿದೆ.
ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಹಾಗಾದ್ರೆ ಬನ್ನಿ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಗೆದ್ದಿದ್ದು ಎಷ್ಟು? ಕಾಂಗ್ರೆಸ್ ಜೆಡಿಎಸ್ ಗೆದ್ದಿದ್ದು ಎಷ್ಟು? ಸಂಪೂರ್ಣ ವಿವರ ಇಲ್ಲಿದೆ.
ಡಿಸೆಂಬರ್ 27ರಂದು ಐದು ನಗರಸಭೆಗಳಿಗೆ ಚುನಾವಣೆ ನಡೆದಿದ್ದು, ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ-ಬೆಟಗೇರಿ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ಹಾಗೂ ವಿಜಯನರ ಜಿಲ್ಲೆಯ ಹೊಸಪೇಟೆ ನಗರಸಭೆಯ ಫಲಿತಾಂಶ ಪ್ರಕಟಗೊಂಡಿದೆ. ಮತ್ತೊಂದ್ಕಡೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ ಭವಿಷ್ಯ ತೀರ್ಮಾನವಾಗಿದೆ. ಒಟ್ಟು 1185 ವಾರ್ಡ್‌ಗಳಲ್ಲಿ ಒಟ್ಟು 4ಸಾವಿರದ 961 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಎಲ್ಲರಾ ಭವಿಷ್ಯ ಪ್ರಕಟಗೊಂಡಿದೆ.
19 ಪುರಸಭೆಗಳ ಫಲಿತಾಂಶ ಮುಕ್ತಾಯಗೊಂಡಿದ್ದು 19 ಪುರಸಭೆಗಳ ಪೈಕಿ 8ರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಬಿಜೆಪಿ 6, ಜೆಡಿಎಸ್ 1 ಹಾಘೂ 4 ಅತಂತ್ರ ಫಲಿತಾಂಶ ಬಂದಿದೆ. ರಾಜ್ಯದ 34 ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಕೂಡ ಪ್ರಕಟವಾಗಿದ್ದು 34 ಪಟ್ಟಣ ಪಂಚಾಯಿತಿಗಳ ಪೈಕಿ 16ರಲ್ಲಿ ಕಾಂಗ್ರೆಸ್ ಪಕ್ಷದ ಪಾಲಾಗಿದೆ. 6 ಬಿಜೆಪಿ, 16 ಪಕ್ಷೇತರರ ತೆಕ್ಕೆಗೆ ಜಾರಿದೆ. ಒಂದು ಪ.ಪಂಚಾಯಿತಿಯಲ್ಲೂ JDS ಅಧಿಕಾರ ಹಿಡಿದಿಲ್ಲ. ಪ.ಪಂ.ಯ 577 ವಾರ್ಡ್ ಪೈಕಿ 236ರಲ್ಲಿ ಕಾಂಗ್ರೆಸ್‌ಗೆ ಜಯಗಳಿಸಿದೆ. 194 ವಾರ್ಡ್‌ನಲ್ಲಿ ಬಿಜೆಪಿ, 135 ವಾರ್ಡ್‌ನಲ್ಲಿ ಪಕ್ಷೇತರರು ಹಾಗೂ ಕೇವಲ 12 ವಾರ್ಡ್ಗಳಲ್ಲಿ ಮಾತ್ರ ಜೆಡಿಎಸ್ ಗೆಲುವು ಸಾಧಿಸಿದೆ.
ರಾಜ್ಯದ 5 ನಗರಸಭೆಗಳ ಚುನಾವಣಾ ಫಲಿತಾಂಶ ಹೊರ ಬಿದಿದ್ದು 5 ನಗರಸಭೆಗಳ ಪೈಕಿ 3 ಬಿಜೆಪಿ ಪಾಲಾಗಿದೆ. ಹಾಗೂ 2 ನಗರಸಭೆ ಅತಂತ್ರವಾಗಿದೆ. ಗದಗ-ಬೆಟಗೇರಿ ನಗರಸಭೆ, ಚಿಕ್ಕಮಗಳೂರು ನಗರಸಭೆ ಬೆಂಗಳೂರಿನ ಹೆಬ್ಬಗೋಡಿ ನಗರಸಭೆ ಬಿಜೆಪಿ ಪಾಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ, ತುಮಕೂರು ಜಿಲ್ಲೆಯ ಶಿರಾ ನಗರಸಭೆ ಫಲಿತಾಂಶ ಅತಂತ್ರವಾಗಿದೆ. 5 ನಗರಸಭೆಗಳ 166 ವಾರ್ಡ್‌ಗಳ ಪೈಕಿ 67ರಲ್ಲಿ ಬಿಜೆಪಿ ಗೆಲುವು, ಕಾಂಗ್ರೆಸ್ 61, ಜೆಡಿಎಸ್ 12 ವಾರ್ಡ್‌ಗಳಲ್ಲಿ ಗೆದಿದ್ದು 26 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ.
19 ವಾರ್ಡ್ಗಳಲ್ಲಿ ಅವಿರೋಧ ಆಯ್ಕೆ ರಾಜ್ಯದ 8 ಪಟ್ಟಣ ಪಂಚಾಯಿತಿಗಳ 19 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯ 3 ವಾರ್ಡ್‌ನಲ್ಲಿ ಕ್ಯಾಂಡಿಡೇಟ್ ಅವಿರೋಧವಾಗಿ ಎಲೆಕ್ಟ್ ಆಗಿದ್ದಾರೆ. ಅಲ್ಲದೆ, ಅರಭಾವಿ ಪಟ್ಟಣ ಪಂಚಾಯಿತಿಯ 1 ವಾರ್ಡ್‌ನಲ್ಲಿ ಆಭ್ಯರ್ಥಿಯೊಬ್ಬ ಅವಿರೋಧ ಸೆಲೆಕ್ಟ್ ಆಗಿದ್ದು, ನಲತವಾಡ ಪಟ್ಟಣ ಪಂಚಾಯಿತಿಯ 2 ವಾರ್ಡ್‌ನಲ್ಲಿ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ಅಲ್ಲದೆ, ಕೊಪ್ಪಳದ ಭಾಗ್ಯನಗರ, ತಾವರೆಗೇರಾ 2, ಕಮತಗಿ, ಬೆಳಗಲಿ, ಜಾಲಿ ತಲಾ ಒಬ್ಬೊಬ್ಬ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಸಚಿವ ಶ್ರೀರಾಮುಲು ಕ್ಷೇತ್ರದಲ್ಲಿ BJP ಮುಖಭಂಗ ಸಾರಿಗೆ ಸಚಿವ ಶ್ರೀರಾಮುಲು ಪ್ರತಿನಿಧಿಸೋ ಮೊಳಕಾಲ್ಮೂರು ಕ್ಷೇತ್ರದ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಾಲಾಗಿದೆ. 16ವಾರ್ಡ್ಗಳ ಪೈಕಿ ಕಾಂಗ್ರೆಸ್ 11 ವಾರ್ಡ್ಗಳಲ್ಲಿ ಜಯ ದಾಖಲಿಸಿದ್ರೆ, ಬಿಜೆಪಿ ಕೇವಲ 2 ವಾರ್ಡ್ಗಳಲ್ಲಿ ಮಾತ್ರ ಗೆಲುವು ಕಂಡಿದೆ. ಇನ್ನುಳಿದಂತೆ ಜೆಡಿಎಸ್ ನೆಲ ಕಚ್ಚಿದ್ದು, 3ವಾರ್ಡ್ಗಳು ಪಕ್ಷೇತರರ ಪಾಲಾಗಿವೆ.
ವಿಟ್ಲಾದಲ್ಲಿ ಬಿಜೆಪಿ ಗೆಲುವಿನ ನಗೆ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲಾ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ ಜಯ ದಾಖಲಿಸಿದೆ. 18 ವಾರ್ಡ್ಗಳ ಪೈಕಿ 11 ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ಮಂದಹಾಸ ಬೀರಿದ್ದಾರೆ. ಕಾಂಗ್ರೆಸ್ ನಾಲ್ಕು ವಾರ್ಡ್ಗಳಲ್ಲಿ ಮಾತ್ರ ಜಯ ದಾಖಲಿಸಿದ್ದಾರೆ. ಇನ್ನುಳಿದಂತೆ ಜೆಡಿಎಸ್ ಅಭ್ಯರ್ಥಿಗಳು ಸೋತಿದ್ದು, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ದಡ ಮುಟ್ಟಿದ್ದಾರೆ.
ಅಧಿಕಾರದ ಚುಕ್ಕಾಣಿ ಹಿಡಿದ ‘ಕೈ’ ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣ ಪಂಚಾಯಿತಿಯ 19 ವಾರ್ಡ್ಗಳ ಪೈಕಿ ಕಾಂಗ್ರೆಸ್ 10 ವಾರ್ಡ್ಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ 9 ವಾರ್ಡ್ಗಳಲ್ಲಿ BJP ಅಭ್ಯರ್ಥಿಗಳು ಜಯ ದಾಖಲಿಸಿದ್ದಾರೆ. ಇನ್ನುಳಿದಂತೆ ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ಕಾಂಗ್ರೆಸ್, ಬಿಜೆಪಿ ಯುವ ಜಿಲ್ಲಾಧ್ಯಕ್ಷರಿಗೆ ಸೋಲು ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷರೇ ಪರಾಭವಗೊಂಡಿದ್ದಾರೆ. ಯುವ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಹಿರೇಮನಿ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಕರಿಸೋಮನಗೌಡರ ವಿರುದ್ಧ ಸೋತಿದ್ದಾರೆ. ಇನ್ನು ಮತ್ತೊಂದು ವಾರ್ಡ್‌ನಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಮಂದಾಳಿ ವಿರುದ್ಧ ಬಿಜೆಪಿ ಅಭ್ಯರ್ಥಿ ವಿನಾಯಕ ಮಾನವಿ ಗೆಲುವು ಸಾಧಿಸಿದ್ದಾರೆ.
ಪತಿ, ಪತ್ನಿ ಗೆಲುವು ಬಾಗಲಕೋಟೆಯಲ್ಲಿ ಪತಿ-ಪತ್ನಿ ಇಬ್ಬರೂ ಕಮಾಲ್ ಮಾಡಿದ್ದಾರೆ. ಕಮತಗಿ ಪಟ್ಟಣ ಪಂಚಾಯಿತಿ ಮತ ಎಣಿಕೆಯಲ್ಲಿ ಪತಿ ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ ಏಳರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪತಿ ದೇವಿ ಪ್ರಸಾದ್ ನಿಂಬಲಗುಂದಿ ಜಯ ಕಂಡಿದ್ದಾರೆ. ಇನ್ನು ವಾರ್ಡ್ ನಂಬರ್ 15ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪತ್ನಿ ನೇತ್ರಾವತಿ ನಿಂಬಲಗುಂದಿ ಕೂಡ ಜಯ ಗಳಿಸಿದ್ದಾರೆ.
ಪೆಟ್ರೋಲ್ ಬಂಕ್ ಕಾರ್ಮಿಕನಿಗೆ ಗೆಲುವು ಯಾದಗಿರಿಯಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಯುವಕ ಗೆಲವು ಸಾಧಿಸಿ, ಪುರಸಭೆಗೆ ಪ್ರವೇಶ ಮಾಡಿದ್ದಾನೆ. ಕಕ್ಕೇರಾ ಮತದಾರರು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಪರಶುರಾಮನ ಕೈ ಹಿಡಿದಿದ್ದಾರೆ. ಕಕ್ಕೇರಾ ಪುರಸಭೆಯ ವಾರ್ಡ್ ನಂಬರ್ 6ರಿಂದ ಕಾಂಗ್ರೆಸ್ ಪಕ್ಷದಿಂದ ಪರಶುರಾಮ ಸ್ಪರ್ಧಿಸಿದ್ದ. ಇದೀಗ ಗೆಲುವು ಸಾಧಿಸಿದ್ದು, ಫುಲ್ ಖುಷ್ ಆಗಿದ್ದಾನೆ.
ಸಹೋದರಿಯರ ವಿಜಯಪತಾಕೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಸಹೋದರಿಯರು ವಿಜಯಪತಾಕೆ ಹಾರಿಸಿದ್ದಾರೆ. ನಗರಸಭೆಯ 33, 34ನೇ ವಾರ್ಡ್‌ಗಳಲ್ಲಿ ಸಹೋದರಿಯರಿಗೆ ಗೆಲುವು ಸಿಕ್ಕಿದೆ. 33 ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಕ್ಕ ಪರಗಂಟಿ ಲಕ್ಷ್ಮಿ, 34 ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಂಗಿ ಲತಾ ಸಂತೋಷ್ ಗೆಲುವು ಸಾಧಿಸಿದ್ದಾರೆ.
Published On - 12:42 pm, Thu, 30 December 21