Local Bodies Election Result: ಬಿಡದಿ ಪುರಸಭೆ ಜೆಡಿಎಸ್ ತೆಕ್ಕೆಗೆ, ನಾಯಕನಹಟ್ಟಿ ಪ.ಪಂ.ನಲ್ಲಿ ಬಿ.ಶ್ರೀರಾಮುಲುಗೆ ಭಾರಿ ಮುಖಭಂಗ

ಕೊಪ್ಪಳದ ಭಾಗ್ಯನಗರ 1 ಹಾಗೂ 11 ವಾರ್ಡಿನ ಫಲಿತಾಂಶ ಹೊರ ಬಂದಿದ್ದು, ಎರಡಲ್ಲಿಯೂ ಕಾಂಗ್ರೆಸ್ ಜಯಗಳಿಸಿದೆ. ಭಾಗ್ಯನಗರ ಪಟ್ಟಣ ಪಂಚಾಯತ್ ಯಲ್ಲಿ ಕಾಂಗ್ರೆಸ್ ಈಗ ನಾಲ್ಕು ಸ್ಥಾನದಲ್ಲಿ ಗೆಲುವು ಕಂಡಿದೆ.

Local Bodies Election Result: ಬಿಡದಿ ಪುರಸಭೆ ಜೆಡಿಎಸ್ ತೆಕ್ಕೆಗೆ, ನಾಯಕನಹಟ್ಟಿ ಪ.ಪಂ.ನಲ್ಲಿ ಬಿ.ಶ್ರೀರಾಮುಲುಗೆ ಭಾರಿ ಮುಖಭಂಗ
ಜೆಡಿಎಸ್
Follow us
TV9 Web
| Updated By: ಆಯೇಷಾ ಬಾನು

Updated on:Dec 30, 2021 | 10:54 AM

ಬೆಂಗಳೂರು: ಡಿಸೆಂಬರ್ 27ರಂದು ಐದು ನಗರಸಭೆಗಳಿಗೆ ಚುನಾವಣೆ ನಡೆದಿದ್ದು, ಇಂದೇ ಫಲಿತಾಂಶ ಹೊರಬೀಳಲಿದೆ. ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ-ಬೆಟಗೇರಿ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ಹಾಗೂ ವಿಜಯನರ ಜಿಲ್ಲೆಯ ಹೊಸಪೇಟೆ ನಗರಸಭೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಮತ್ತೊಂದ್ಕಡೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ ಭವಿಷ್ಯಕ್ಕೂ ಕೌಂಟ್ಡೌನ್ ಶುರುವಾಗಿದೆ. ಒಟ್ಟು 1185 ವಾರ್ಡ್‌ಗಳಲ್ಲಿ ಒಟ್ಟು 4ಸಾವಿರದ 961 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕೆಲವೇ ಹೊತ್ತಿನಲ್ಲಿ ಹಣೆಬರಹ ನಿರ್ಧಾರವಾಗಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದ್ದು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಕೊಪ್ಪಳದ ಭಾಗ್ಯನಗರ 1 ಹಾಗೂ 11 ವಾರ್ಡಿನ ಫಲಿತಾಂಶ ಹೊರ ಬಂದಿದ್ದು, ಎರಡಲ್ಲಿಯೂ ಕಾಂಗ್ರೆಸ್ ಜಯಗಳಿಸಿದೆ. ಭಾಗ್ಯನಗರ ಪಟ್ಟಣ ಪಂಚಾಯತ್ ಯಲ್ಲಿ ಕಾಂಗ್ರೆಸ್ ಈಗ ನಾಲ್ಕು ಸ್ಥಾನದಲ್ಲಿ ಗೆಲುವು ಕಂಡಿದೆ. ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನು ಯಾದಗಿರಿಯ ಕಕ್ಕೇರಾ 4 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಕುಕನೂರು ಪಟ್ಟಣ ಪಂಚಾಯತ್ನ ಸ್ವ ಕ್ಷೇತ್ರದಲ್ಲಿ ಸಚಿವ ಹಾಲಪ್ಪ ತೀವ್ರ ಮುಖಭಂಗ ವಾಗಿದ್ದು ಕಾಂಗ್ರೆಸ್ 10, ಬಿಜೆಪಿ 9 ರಲ್ಲಿ ಗೆಲುವು ಸಾಧಿಸಿದೆ. ಎಂ.ಕೆ ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಹದಿನಾಲ್ಕು ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಗೆಲುವಾಗಿದೆ. 14ವಾರ್ಡ್ ಗಳ ಪೈಕಿ ಮೂರು ಜನ ಅವಿರೋಧವಾಗಿ ಆಯ್ಕೆಯಾಗಿದ್ದರು. 11ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. 11ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಗೆಲುವು. ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ. ಸಾರಿಗೆ ಸಚಿವ ಬಿ.ಶ್ರೀರಾಮುಲುಗೆ ಭಾರಿ ಮುಖಭಂಗವಾಗಿದೆ. ನಾಯಕನಹಟ್ಟಿ ಪ.ಪಂ.ನ 16 ವಾರ್ಡ್ಗಳಲ್ಲಿ ಕಾಂಗ್ರೆಸ್ 9, 3 ವಾರ್ಡ್ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಗೆಲುವಾಗಿದ್ದು ಬಿಜೆಪಿ ಖಾತೆ ತೆರೆಯದೆ ಬಿ.ಶ್ರೀರಾಮುಲುಗೆ ಭಾರಿ ಮುಖಭಂಗವಾಗಿದೆ. ಬೆಳಗಾವಿ ಜಿಲ್ಲೆ ಯಕ್ಸಂಬಾ ಪ.ಪಂ ಕಾಂಗ್ರೆಸ್​ ತೆಕ್ಕೆಗೆ. 17ವಾರ್ಡ್ ಗಳ ಪೈಕಿ ಕಾಂಗ್ರೆಸ್ 10, ಬಿಜೆಪಿ 1ರಲ್ಲಿ ಗೆಲುವು ಸಾಧಿಸಿದ್ದು ಸಚಿವೆ ಶಶಿಕಲಾ ಜೊಲ್ಲೆ ಸ್ವಗ್ರಾಮದಲ್ಲೇ ಕಾಂಗ್ರೆಸ್​ಗೆ ಗೆಲುವು ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎರಡೂ ಪ.ಪಂ ಬಿಜೆಪಿ ಪಾಲಾಗಿದೆ. ವಿಟ್ಲ, ಕೋಟೆಕಾರು ಪಟ್ಟಣ ಪಂಚಾಯತ್ ಬಿಜೆಪಿ ಪಾಲು. ವಿಟ್ಲ 18ರಲ್ಲಿ 11 ಬಿಜೆಪಿ, 3 ಕಾಂಗ್ರೆಸ್​, 1 ಎಸ್​ಡಿಪಿಐ. ಕೋಟೆಕಾರು ಪಟ್ಟಣ ಪಂಚಾಯತ್​ನಲ್ಲಿ 17ರಲ್ಲಿ 11 ಬಿಜೆಪಿ, ಕಾಂಗ್ರೆಸ್​ 4, ಎಸ್​ಡಿಪಿಐ 1 ರಲ್ಲಿ ಜಯಗಳಿಸಿದೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರ ಬೆಳಗಾವಿ ಜಿಲ್ಲೆಯ ಅರಭಾವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಲೋಳಿ ಪಟ್ಟಣ ಪಂಚಾಯಿತಿ ಪಕ್ಷೇತರರ ಪಾಲಾಗಿದೆ. 16 ವಾರ್ಡ್ ಪೈಕಿ 11ರಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ. 5 ವಾರ್ಡ್‌ಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು.

ಇನ್ನು ಮತ್ತೊಂದೆಡೆ ಉಡುಪಿ ಜಿಲ್ಲೆ ಕಾಪು ಪುರಸಭೆ ಬಿಜೆಪಿ ಪಾಲಾಗಿದೆ. 23 ವಾರ್ಡ್ ಪೈಕಿ ಬಿಜೆಪಿ 12, ಕಾಂಗ್ರೆಸ್ 7, ಎಸ್ಡಿಪಿಐ 3, ಜೆಡಿಎಸ್ 1 ವಾರ್ಡ್ನಲ್ಲಿ ಗೆಲುವು ಸಾಧಿಸಿದೆ. ಹಾಗೂ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪುರಸಭೆ ಬಿಜೆಪಿ ಪಾಲಾಗಿದೆ. 23 ವಾರ್ಡ್‌ಗಳ ಪೈಕಿ 15ವಾರ್ಡ್‌ಗಳಲ್ಲಿ ಜಯ ಸಾಧಿಸಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಕಾಂಗ್ರೆಸ್ 7, ಬಿಜೆಪಿ 15, ಪಕ್ಷೇತರ 1 ಸ್ಥಾನ ಪಡೆದಿದ್ದಾರೆ. ಕಕ್ಕೇರಾ ಪುರಸಭೆಯಲ್ಲಿ‌ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಶಾಸಕ ರಾಜುಗೌಡಗೆ ಬಾರಿ ಮುಖಭಂಗವಾಗಿದೆ. ಮಾಜಿ‌ ಕಾಂಗ್ರೆಸ್ ನ ಶಾಸಕ ರಾಜಾ ವೆಂಕಟಪ್ಪ ನಾಯಕಗೆ ಬಾರಿ ಗೆಲವು ಸಿಕ್ಕಿದೆ. ಕಂಪ್ಲಿ ಶಾಸಕ ಜೆಎನ್ ಗಣೇಶ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಜಿದ್ದಾ ಜಿದ್ದಿಗೆ ಕಾರಣವಾಗಿದ್ದ ಹೊಸಪೇಟೆ ಜಿಲ್ಲೆ ಕುರುಗೋಡು ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. 23 ವಾರ್ಡ್​ಗಳ ಪೈಕಿ ಕಾಂಗ್ರೆಸ್-15, ಬಿಜೆಪಿ-07,ಪಕ್ಷೇತರರು- 01 ಸ್ಥಾನ ಗಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಸರಿದಿದೆ. ಮಾಜಿ ಡಿಸಿಎಂ ಸವದಿ, ಶಾಸಕ ಕುಮಟಳ್ಳಿಗೆ ಮುಖಭಂಗವಾಗಿದೆ. 27 ವಾರ್ಡ್ ಪೈಕಿ 15ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದು, ಬಿಜೆಪಿ 9, ಮೂವರು ಪಕ್ಷೇತರ ಅಭ್ಯರ್ಥಿಗಳ ಗೆಲುವಾಗಿದೆ.

ರಾಜ್ಯದ 5 ನಗರಸಭೆಗಳ ಪೈಕಿ 3 ನಗರಸಭೆ ಫಲಿತಾಂಶ ಹೊರ ಬಿದ್ದಿದೆ. ಹೊಸಪೇಟೆ, ಶಿರಾ ನಗರಸಭೆ ಸೇರಿ 2ರಲ್ಲಿ ಅತಂತ್ರ ಫಲಿತಾಂಶ, ಬೆಂಗಳೂರಿನ ಹೆಬ್ಬಗೋಡಿ ನಗರಸಭೆ ಬಿಜೆಪಿ ಪಾಲಾಗಿದೆ. ನಗರಸಭೆಯ ಒಟ್ಟು 167 ವಾರ್ಡ್‌ಗಳ ಪೈಕಿ 56ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 55, ಜೆಡಿಎಸ್ 11, ಪಕ್ಷೇತರರು 26ರಲ್ಲಿ ಗೆಲುವು.

ರಾಜ್ಯದ 19 ಪುರಸಭೆಯ 441 ವಾರ್ಡ್‌ಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಈವರೆಗೆ ಕಾಂಗ್ರೆಸ್ 194, ಬಿಜೆಪಿ 166, ಜೆಡಿಎಸ್ 20ರಲ್ಲಿ ಗೆಲುವು ಹಾಗೂ ಪಕ್ಷೇತರ ಅಭ್ಯರ್ಥಿಗಳು 44 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ರಾಮನಗರ ತಾಲೂಕಿನ ಬಿಡದಿ ಪುರಸಭೆ ಜೆಡಿಎಸ್ ತೆಕ್ಕೆಗೆ ಬಿಡದಿಯಲ್ಲಿ ಜೆಡಿಎಸ್ ಗೆಲುವಿನ ನಾಗಲೋಟ ಮುಂದುವರಿಸಿದೆ. 23 ವಾರ್ಡ್ ಗಳ ಪೈಕಿ 14 ವಾರ್ಡ್‌ಗಳಲ್ಲಿ ಜೆಡಿಎಸ್‌ಗೆ ಗೆಲುವು ಸಿಕ್ಕಿದೆ. 9 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು. ಬಿಡದಿ ಪುರಸಭೆಯಲ್ಲಿ ಖಾತೆ ತೆರೆಯುವಲ್ಲಿ ಬಿಜೆಪಿ ವಿಫಲವಾಗಿದೆ.

ಆಲಮಮೇಲ ಪ.ಪಂ. ಚುನಾವಣಾ ಫಲಿತಾಂಶ ಅತಂತ್ರ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಅತಂತ್ರವಾಗಿದೆ.ಒಟ್ಟು 19 ಸ್ಥಾನಗಳಿದ್ದು ಬಿಜೆಪಿ 9, ಕಾಂಗ್ರೆಸ್ 7, ಇತರೆ 3 ವಾರ್ಡ್‌ನಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಶಾಸಕ ಆನಂದ ಮಾಮನಿ ಪ್ರತಿನಿಧಿಸುವ ಕ್ಷೇತ್ರ ಮುನವಳ್ಳಿ ಪುರಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಒಟ್ಟು ವಾರ್ಡ್ – 23 ಪೈಕಿ ಕಾಂಗ್ರೆಸ್- 10, ಬಿಜೆಪಿ- 10, ಜೆಡಿಎಸ್ – 1, ಪಕ್ಷೇತರ- 2 ಸ್ಥಾನ ಬಂದಿದೆ. ಉತ್ತರಕನ್ನಡ ಜಿಲ್ಲೆ ಭಟ್ಕಳ ಪ.ಪಂ ಫಲಿತಾಂಶ ಕೂಡ ಅತಂತ್ರವಾಗಿದೆ. ಕಾಂಗ್ರೆಸ್ 4, ಬಿಜೆಪಿ 3, ಪಕ್ಷೇತರರು 5ರಲ್ಲಿ ಗೆಲುವು ಸಾಧಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಮಾಲ್ ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ. ಬಂಕಾಪುರ ಪುರಸಭೆ ಒಟ್ಟು ಸ್ಥಾನಗಳು 23. ಈ ಪೈಕಿ ಕಾಂಗ್ರೆಸ್ -14, ಬಿಜೆಪಿ -7, ಪಕ್ಷೇತರ -2 ಸ್ಥಾನ ಪಡೆದಿದೆ. ಹಾಗೂ ಗುತ್ತಲ ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್ ‌-11, ಬಿಜೆಪಿ -6, ಪಕ್ಷೇತರ -1 ಸ್ಥಾನ ಲಭಿಸಿದೆ.

ಎಂಎಲ್ಸಿ ಚುನಾವಣೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಇದು ಅಗ್ನಿಪರೀಕ್ಷೆಯಾಗಿದೆ. ನಗರ ಸಂಸ್ಥೆಗಳಾದ್ದರಿಂದ ಬಿಜೆಪಿಯ ಶಕ್ತಿ ಪರೀಕ್ಷೆಯೂ ಆಗಿದೆ. 5 ನಗರಸಭೆ, 19 ಪುರಸಭೆ ಮತ್ತು 34 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 58 ನಗರ ಸಂಸ್ಥೆಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 75ರಷ್ಟು ಮತದಾನವಾಗಿತ್ತು. ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಶೇ. 70ಕ್ಕಿಂತ ಹೆಚ್ಚು ಮತದಾನವಾಗಿದ್ದು ವರದಿಯಾಗಿದೆ.

ಇದನ್ನೂ ಓದಿ: 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟ, ಯಾರಿಗೆ ಬೀಳುತ್ತೆ ವಿಜಯ ಮಾಲೆ?

Published On - 9:22 am, Thu, 30 December 21