
ಬೆಂಗಳೂರು, ಮೇ 15: ರಾಜ್ಯದಲ್ಲಿ (Karnataka) ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ (Voter List Revision) ಚುನಾವಣಾ ಆಯೋಗ ಈಗಾಗಲೇ ದಿನಾಂಕ ಘೋಷಿಸಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30ರಿಂದ ಜು.29ರವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಮಾಡಲಾಗುವುದು. ಮತದಾರರ ಪಟ್ಟಿಯಲ್ಲಿ ಸೇರಲು 18 ವರ್ಷ ಪೂರ್ಣವಾಗಿರಬೇಕು. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವುದಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ (anbukumar) ಮಾಹಿತಿ ನೀಡಿದರು.
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್, ಕರ್ನಾಟಕದಲ್ಲಿ ಮತದಾರರ ಮ್ಯಾಪಿಂಗ್ ಕೆಲಸವು ವೇಗವಾಗಿ ನಡೆಯುತ್ತಿದ್ದು, ಈಗಾಗಲೇ ಶೇಕಡಾ 86 ರಷ್ಟು ಪ್ರಗತಿ ಸಾಧಿಸಿದೆ ಎಂದರು. ಇನ್ನು ಜಿಲ್ಲಾವಾರು ಮತ್ತು ಕ್ಷೇತ್ರವಾರು ಪ್ರಗತಿಯನ್ನು ಹಂಚಿಕೊಂಡ ಅವರು, ಕೊಡಗು ಜಿಲ್ಲೆಯಲ್ಲಿ ಶೇ. 96 ರಷ್ಟು ಹಾಗೂ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಶೇ. 99 ರಷ್ಟು ಮ್ಯಾಪಿಂಗ್ ಕೆಲಸ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಮ್ಯಾಪಿಂಗ್ ಕೆಲಸದ ಪ್ರಗತಿಯನ್ನು ಪರಿಶೀಲಿಸಲು ಮತ್ತು ಮುಂದಿನ ಹಂತದ ಕುರಿತು ಚರ್ಚಿಸಲು ಇಂದು ಸಂಜೆ ಎಲ್ಲಾ ಜಿಲ್ಲಾಧಿಕಾರಿಗಳ (ಡಿಸಿ) ಜೊತೆ ಮಹತ್ವದ ವಿಡಿಯೋ ಕಾನ್ಫರೆನ್ಸ್ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆಯ ಮುಂದಿನ ಹಂತಗಳ ಕುರಿತು ಮಾತನಾಡಿದ ಅನ್ಬುಕುಮಾರ್, ಎಸ್ಐಆರ್ ಫಾರಂನಲ್ಲಿ ಗಣತಿ ನಮೂನೆಯೇ ಅತ್ಯಂತ ಮುಖ್ಯ. ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ 2 ಸೆಟ್ ಗಣತಿ ನಮೂನೆಗಳನ್ನು ತಲುಪಿಸಲಿದ್ದಾರೆ. ವಿಶೇಷವೆಂದರೆ, ಗಣತಿ ನಮೂನೆಯಲ್ಲಿರುವ ಪ್ರತಿ ಮತದಾರರಿಗೂ ಪ್ರತ್ಯೇಕ ಕ್ಯೂಆರ್ ಕೋಡ್ ಇರಲಿದೆ ಎಂದು ವಿವರಿಸಿದರು.
ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಯನ್ನು ಮನೆಗೆ ತಂದಾಗ ಸಾರ್ವಜನಿಕರು ಅದರಲ್ಲಿ 1 ಸೆಟ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಧಿಕಾರಿಗಳಿಗೆ ಮರಳಿ ನೀಡಬೇಕು. ಮತ್ತೊಂದು ಸೆಟ್ ಗಣತಿ ನಮೂನೆಯನ್ನು ಭವಿಷ್ಯದ ಸಾಕ್ಷಿಗಾಗಿ ಮತದಾರರೇ ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಇನ್ನು 2002ರ ಮತದಾರರ ಪಟ್ಟಿಯಲ್ಲಿ ಯಾರ ಹೆಸರು ದಾಖಲಾಗಿದೆಯೋ, ಅಂತಹವರ ಹೆಸರುಗಳನ್ನು ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Karnataka SIR: ಕರ್ನಾಟಕದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಎಂದಿನಿಂದ? ಹೇಗೆಲ್ಲಾ ನಡೆಯುತ್ತೆ? ಇಲ್ಲಿದೆ ವಿವರ
ರಾಜ್ಯದ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿ ಸಭೆ ನಡೆಸಲಾಗಿದೆ. ರಾಜಕೀಯ ಪಕ್ಷಗಳು ಬಿಎಲ್ಎಗಳನ್ನು ನೇಮಕ ಮಾಡಬಹುದು. ಮಾಧ್ಯಮಗಳಿಗೂ ಸಹ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ಗ್ರಾ.ಪಂ. ಮಟ್ಟದಲ್ಲಿ ವೋಟರ್ ಫೆಸಿಲಿಟೇಷನ್ ಸೆಂಟರ್ಗಳ ಓಪನ್ ಮಾಡಲಾಗುತ್ತದೆ. ಎಸ್ಐಆರ್ ಪ್ರಕ್ರಿಯೆಗೆ 25,284 ಬಿಎಲ್ಎಗಳ ನೇಮಕ ಮಾಡಲಾಗಿದೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.