Karnataka Weekend Curfew: ವೀಕೆಂಡ್ ಕರ್ಫ್ಯೂನಲ್ಲಿ ಯಾವುದಕ್ಕೆಲ್ಲಾ ಅವಕಾಶ? ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ
ಕರ್ನಾಟಕ ವೀಕೆಂಡ್ ಕರ್ಫ್ಯೂ: ಮನೆಯಿಂದ ಜನರು ಹೊರಗೆ ಬರುವ ಪ್ರಮಾಣ ಕಡಿಮೆ ಆಗಬೇಕು ಎಂಬ ನೆಲೆಯಲ್ಲಿ ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ. ಆದರೆ, ಈ ಎಲ್ಲಾ ಕಾರ್ಯವ್ಯವಸ್ಥೆಯು ಕೊವಿಡ್-19 ನಿಯಮಾನುಸಾರ ನಡೆಯಬೇಕು ಎಂದು ತಿಳಿಸಲಾಗಿದೆ.
ಬೆಂಗಳೂರು: ಕರ್ನಾಟಕ ಸರ್ಕಾರ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಘೋಷಿಸಲಾಗಿದೆ. ಬೆಂಗಳೂರು ಹಾಗೂ ಇತರ 19 ಜಿಲ್ಲೆಗಳಲ್ಲಿ ಈ ನಿಯಮ ಇರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಅಗತ್ಯ ವಸ್ತು ಖರೀದಿಗೆ ಸಮಯಾವಕಾಶ ನೀಡಲಾಗಿದೆ.
ಜೂನ್ 21ರ ನಂತರ ಕರ್ನಾಟಕ ಸರ್ಕಾರ ಲಾಕ್ಡೌನ್ ನಿಯಮಾವಳಿಗಳಲ್ಲಿ ಹಲವು ಸಡಿಲಿಕೆಗಳನ್ನು ಮಾಡಿದೆ. ಆದರೂ ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಆಹಾರ ಸಾಮಾಗ್ರಿಗಳ ಅಂಗಡಿ, ದಿನಸಿ ಅಂಗಡಿ, ಹಣ್ಣು, ತರಕಾರಿ ಅಂಗಡಿಗಳು, ಮಾಂಸ, ಮೀನು ಮಾರಾಟ, ಹಾಲು ಹಾಗೂ ಇತರ ಡೈರಿ ಉತ್ಪನ್ನಗಳ ಮಾರುಕಟ್ಟೆಯು ವಾರಾಂತ್ಯದ ಕರ್ಫ್ಯೂ ಅವಧಿಯಲ್ಲೂ ತೆರೆದಿರುತ್ತದೆ. ಶನಿವಾರ ಹಾಗೂ ಭಾನುವಾರ ಕೂಡ ಇವು ತೆರೆದಿರುತ್ತವೆ. ಬೀದಿಬದಿ ವ್ಯಾಪಾರಿಗಳಿಗೂ ಬೆಳಗ್ಗೆ 6 ಗಂಟೆಯಿಂದ 2 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
ಮದ್ಯದ ಅಂಗಡಿಗಳಿಗೆ ಪಾರ್ಸೆಲ್ ನೀಡುವ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಅದೂ ಕೂಡ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮದ್ಯ ಪಾರ್ಸೆಲ್ ನೀಡುವ ಅವಕಾಶ ಇದೆ. ಅಲ್ಲದೆ, ಎಲ್ಲಾ ರೀತಿಯ ವಸ್ತುಗಳ ಹೋಮ್ ಡೆಲಿವರಿಗೆ ದಿನದ 24 ಗಂಟೆಗಳಲ್ಲೂ ಅವಕಾಶ ನೀಡಲಾಗಿದೆ.
ಮನೆಯಿಂದ ಜನರು ಹೊರಗೆ ಬರುವ ಪ್ರಮಾಣ ಕಡಿಮೆ ಆಗಬೇಕು ಎಂಬ ನೆಲೆಯಲ್ಲಿ ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ. ಆದರೆ, ಈ ಎಲ್ಲಾ ಕಾರ್ಯವ್ಯವಸ್ಥೆಯು ಕೊವಿಡ್-19 ನಿಯಮಾನುಸಾರ ನಡೆಯಬೇಕು ಎಂದು ತಿಳಿಸಲಾಗಿದೆ.
ಹೊಟೇಲ್ ಹಾಗೂ ರೆಸ್ಟೋರೆಂಟ್ಗಳು ಕೂಡ ವಾರಾಂತ್ಯದ ಕರ್ಫ್ಯೂ ವೇಳೆಯಲ್ಲಿ ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಪಾರ್ಸೆಲ್ ಹಾಗೂ ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ. ಹೊಟೇಲ್ನಲ್ಲಿ ಕುಳಿತು ಆಹಾರ ಸೇವಿಸಲು ಅವಕಾಶ ಇರುವುದಿಲ್ಲ.
ಇದೇ ವೇಳೆ, ಬಸ್, ರೈಲು ಹಾಗೂ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಸಾರ್ವಜನಿಕ ವಾಹನ ಅಥವಾ ಖಾಸಗಿ ವಾಹನದ ಮೂಲಕ ವಿಮಾನ, ರೈಲು ನಿಲ್ದಾಣಗಳಿಗೆ ಪ್ರಯಾಣಿಸಲು ಕೂಡ ಅವಕಾಶ ನೀಡಲಾಗಿದೆ. ಅದಕ್ಕಾಗಿ ಸೂಕ್ತ ದಾಖಲೆಗಳನ್ನು ತೋರಿಸಿ (ಪ್ರಯಾಣದ ಟಿಕೆಟ್ ಇತ್ಯಾದಿ) ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿದೆ.
ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ನಿಯಮಿತವಾಗಿ ಸಂಚಾರ ನಡೆಸಲಿದೆ ಎಂದು ತಿಳಿಸಿದ್ದಾರೆ. ಮೆಟ್ರೋ ರೈಲು ಸಂಚಾರ ಇರುವುದಿಲ್ಲ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂನಲ್ಲೂ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ; ಜನರ ಅನುಕೂಲಕ್ಕಾಗಿ ಕ್ರಮ
Namma Metro: ಕೋವಿಡ್ ವೀಕೆಂಡ್ ಕರ್ಫ್ಯೂ; ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲು ಸ್ಥಗಿತ
Published On - 6:37 pm, Fri, 25 June 21