TV9 Reality Check: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೇ, ನೀವಾದರೂ ಅಸ್ತಿತ್ವದಲ್ಲಿದ್ದೀರಾ?

Department of Women and Child Development: ಸಂಖ್ಯೆ ಅಸ್ತಿತ್ವದಲ್ಲಿಲ್ಲ, ವೆಬ್​ಸೈಟ್​ ಅಪ್​ಡೇಟ್​ ಆಗಿಲ್ಲ, ಸಮಸ್ಯೆ ಕೇಳೋಕೆ, ಸರಿಮಾಡಿ ಅಂತ ಹೇಳೋಕೆ ಸರ್ಕಾರದಲ್ಲಿ ಯಾರೂ ಇದ್ದಂಗಿಲ್ಲ.

TV9 Reality Check: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೇ, ನೀವಾದರೂ ಅಸ್ತಿತ್ವದಲ್ಲಿದ್ದೀರಾ?
ಪ್ರಾತಿನಿಧಿಕ ಚಿತ್ರ
Follow us
Skanda
| Updated By: Team Veegam

Updated on:Jan 04, 2022 | 8:27 PM

ಮಹಿಳೆಯರು ಮತ್ತು ಮಕ್ಕಳ ಸುರಕ್ಷೆ ಹಾಗೂ ಅಭಿವೃದ್ಧಿಗಾಗಿ ಸರ್ಕಾರ ಒಂದು ಇಲಾಖೆಯನ್ನೇ ಮೀಸಲಿಟ್ಟು, ಅನುದಾನ ಕೊಟ್ಟು ಪೋಷಿಸುತ್ತದೆ. ಸಮಾಜದಲ್ಲಿ ಅಬಲೆಯರು/ಮಕ್ಕಳು ತೊಂದರೆಗೊಳದಾಗ, ಸಂಕಷ್ಟದ ಪರಿಸ್ಥಿತಿ ಎದುರಿಸುವಾಗ ಅವರ ಕೈ ಹಿಡಿದು ಮೇಲೆತ್ತಬೇಕು ಎಂಬಲ್ಲಿಂದ ಹಿಡಿದು, ಅಂತಹ ಪರಿಸ್ಥಿತಿ ಎದುರಾಗದಂತೆ ಯಾವೆಲ್ಲಾ ಯೋಜನೆಗಳನ್ನು ರೂಪಿಸಬೇಕು? ಅವರ ಕ್ಷೇಮಾಭಿವೃದ್ಧಿಗೆ ಯಾವೆಲ್ಲಾ ಕಾರ್ಯಕ್ರಮ ಮಾಡಬೇಕು ಎಂದು ಘನವಾಗಿ ಚಿಂತಿಸಬೇಕಾದ್ದು ಈ ಇಲಾಖೆಯ ಕರ್ತವ್ಯ. ಜೊತೆಗೆ, ತಾನು ರೂಪಿಸುವ ಯೋಜನೆಗಳನ್ನು, ಅದರ ರೂಪುರೇಷೆ, ಮಾಹಿತಿಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತೆ ಮಾಡಬೇಕಾದ್ದು ಕೂಡ ಇದೇ ಇಲಾಖೆಯ ಜವಾಬ್ದಾರಿ.

ಈಗಂತೂ ಸರ್ಕಾರ ಜನರೊಡನೆ ಸುಲಭವಾಗಿ ಸಂಪರ್ಕ ಹೊಂದುವ ಸಲುವಾಗಿ ಆನ್​ಲೈನ್​ ಸೇವೆ ಹೊಂದಿವೆ. ಇಲಾಖೆಗಳ ಮುಖ್ಯ ಮಾಹಿತಿಗಳನ್ನೂ ಆಯಾ ವೆಬ್​ಸೈಟ್​ಗಳ ಮೂಲಕವೇ ಜನರಿಗೆ ಸಿಗುವಂತೆ ಮಾಡಿವೆ. ಏನೇ ತೊಂದರೆ ಎದುರಾದರೂ, ಗೊಂದಲ ಮೂಡಿದರೂ ಕೈ ಬೆರಳ ತುದಿಯಲ್ಲೇ ಸಿಗುವ ವೆಬ್​ಸೈಟ್​ಗೆ ಹೋಗಿ ಮಾಹಿತಿ ಪಡೆಯಬಹುದು ಎಂಬ ಧೈರ್ಯದಲ್ಲಿ ಜನರೂ ಇರುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಚಾರಕ್ಕೆ ಬಂದಾಗಲಂತೂ ಅದು ಸದಾ ಜನರಿಗೆ ಹತ್ತಿರವಾಗಿರಲೇಬೇಕು. ಆದರೆ, ವಾಸ್ತವದಲ್ಲಿ ಈ ಇಲಾಖೆಗಳು ಎಷ್ಟರ ಮಟ್ಟಿಗೆ ಸಮರ್ಪಕ ಆನ್​ಲೈನ್​ ಸೇವೆ ಒದಗಿಸುತ್ತಿವೆ? ತುರ್ತು ಸಂಪರ್ಕ ಸಂಖ್ಯೆ, ಅಧಿಕಾರಿಗಳ ಮಾಹಿತಿ ಇತ್ಯಾದಿ ವಿವರಗಳನ್ನು ನೀಡುವಲ್ಲಿ ಜನಸ್ನೇಹಿ ಆಗಿವೆಯೇ? ಎಂದು ಯೋಚಿಸಿದರೆ ಬೇಸರವಾಗುತ್ತದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ dwcd.kar.nic.in ವಿಳಾಸದಲ್ಲಿ ವೆಬ್​ಸೈಟ್​ ಹೊಂದಿದೆ. ಇಲಾಖೆ ಹೇಳುವ ಪ್ರಕಾರ ಇದರಲ್ಲಿ ಎಲ್ಲಾ ಮಾಹಿತಿಗಳೂ ಸಿಗಬೇಕು ಹಾಗೂ ತುರ್ತು ಸಂದರ್ಭದಲ್ಲಿ ಜನರು ಈ ವೆಬ್​ಸೈಟ್​ ಸಹಕಾರದೊಂದಿಗೆ ಇಲಾಖೆಯನ್ನು ಸಂಪರ್ಕಿಸಬಹುದು. ಈ ವೆಬ್​ಸೈಟ್​ನ ಮುಖಪುಟದ ಕೊನೆಯಲ್ಲಿ ನಮಗೆ ಕರೆ ಮಾಡಿ, ನಮಗೆ ಇಮೇಲ್ ಮಾಡಿ, ವಿವರವಾದ ಸಂಪರ್ಕ ಪಟ್ಟಿ ವೀಕ್ಷಿಸಿ ಎಂಬೆಲ್ಲಾ ತಲೆಬರಹದೊಂದಿಗೆ ಮಾಹಿತಿ ನೀಡಿರುವುದು ಕಾಣುತ್ತದೆ. ಅವರ ಪ್ರಕಾರ ನಾವು ತುರ್ತು ಪರಿಸ್ಥಿತಿಯಲ್ಲಿ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬಹುದು ಅಥವಾ ಹಾಗೆ ತಿಳಿದುಕೊಳ್ಳಬಹುದು.

ಹೀಗೆ ಹೇಳಲು ಕಾರಣವೆಂದರೆ, ಆ ವೆಬ್​ಸೈಟ್​ನಲ್ಲಿ ನೀಡಲಾಗಿರುವ ಕೆಲ ಮೆನುಗಳಿಗೆ ಹೋಗಿ ಕ್ಲಿಕ್​ ಮಾಡಿದರೆ ಅಲ್ಲಿ ನಿಮಗೆ ಏನೂ ಸಿಗುವುದಿಲ್ಲ. ಅಲ್ಲಿ ನೀಡಲಾದ 080-22355984 ಸಂಖ್ಯೆಗೆ ಕರೆ ಮಾಡಿದರೆ ಅದು ಅಸ್ತಿತ್ವದಲ್ಲೇ ಇಲ್ಲ. ಇನ್ನು ಮೇಲ್​ ಮಾಡಿದರಂತೂ ತಕ್ಷಣಕ್ಕೆ ಪ್ರತ್ಯುತ್ತರ ನಿರೀಕ್ಷಿಸುವುದು ಮೂರ್ಖತನವಾಗಿಬಿಡುತ್ತದೆ.

Department of Women and Child Development

ಈ ನಂಬರ್​ ಅಸ್ತಿತ್ವದಲ್ಲಿ ಇಲ್ಲ

ಹೊಸತು ನೋಟಿಫಿಕೇಷನ್​ನಲ್ಲಿ ಬರೀ ಹಳೆ ವಿಚಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂತಹ ಹದಗೆಟ್ಟ ವೆಬ್​ಸೈಟ್​ ಹೊಂದಿದೆ ಎಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅಪರಾಧ, ಹಿಂಸೆ, ಅನಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವಾಗ ಈ ಇಲಾಖೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಆದರೆ, ಇಲ್ಲಿ ಕಣ್ಕಟ್ಟಿಗೆ ವೆಬ್​ಸೈಟ್​ ಮಾಡಿಡಲಾಗಿದೆಯೇ ಹೊರತು, ಉಪಯೋಗಕ್ಕೆ ಬರುವಂತೆ ಅದನ್ನು ನಿರ್ವಹಿಸುವವರೇ ಗತಿ ಇಲ್ಲ. ಇನ್ನೊಂದೆಡೆ ಅದರಲ್ಲಿ ಹೊಸತು ಎಂದು ನೀಡಲಾಗಿರುವ ನೊಟಿಫೀಕೇಷನ್ ವಿಭಾಗವನ್ನು ತೆರೆದರೆ ಕಳೆದ ವರ್ಷದ ಒಂದೆರೆಡು ಮಾಹಿತಿಗಳು ಸಿಗುತ್ತವೆ!

ಅದೃಷ್ಟವಶಾತ್​, ನಮ್ಮ ಮುಖ್ಯಸ್ಥರನ್ನು ಭೇಟಿ ಮಾಡಿ ಎಂಬ ವಿಭಾಗದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಅಪರ ಮುಖ್ಯ ಕಾರ್ಯದರ್ಶಿ ಡಾ.ಎನ್​.ನಾಗಾಂಬಿಕಾ ದೇವಿ ಮತ್ತು ಆಯುಕ್ತ ಪೆದ್ದಪ್ಪಯ್ಯ ಅವರ ಫೋಟೋ, ಹೆಸರು ಹಾಕಿರುವುದರಿಂದ ಈ ಇಲಾಖೆಯನ್ನು ಸಂಪರ್ಕಿಸಲು ಸಾಧ್ಯ ಎಂಬ ಭಾವನೆ ಮೂಡುತ್ತದೆ. ಅಂತಹ ತುರ್ತು ಪರಿಸ್ಥಿತಿ ಏನಾದರೂ ಇತ್ತೆಂದರೆ ನೀವು ಸಚಿವರ ಸಂಖ್ಯೆಗೆ ಕರೆ ಮಾಡಿ, ಅವರ ಸಹಾಯಕರು ಯಾರಾದರೂ ಕರೆ ಸ್ವೀಕರಿಸುವ ತನಕ ಕಾದು, ನಂತರ ಅವರು ನೀಡುವ ಬೇರಾವುದೋ ಸಂಖ್ಯೆಗೆ ಕರೆ ಮಾಡಬೇಕು. ಮಾತೆತ್ತಿದರೆ ಜನಸ್ನೇಹಿ, ಜನಪರ ಸರ್ಕಾರ ಎನ್ನುವವರು ತಮ್ಮ ಬಿಡುವಿಲ್ಲದ ರಾಜಕೀಯ ಜಂಜಾಟ ಮತ್ತು ದೊಂಬರಾಟದ ಮಧ್ಯೆ ಪುರುಸೊತ್ತು ಮಾಡಿಕೊಂಡು ಇತ್ತ ಗಮನಹರಿಸಬೇಕು.

Department of Women and Child Development

ಇಲಾಖೆಗೆ ಸಂಬಂಧಿಸಿದ ಪ್ರಮುಖರು

ಇಲಾಖೆಯವರ ಸಮಜಾಯಿಷಿ ಏನು? ಈ ಸಮಸ್ಯೆ ಬಗ್ಗೆ ವಿಚಾರಿಸಲು ಟಿವಿ9 ಕನ್ನಡ ಡಿಜಿಟಲ್​ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದಾಗ, ಯಥಾಪ್ರಕಾರ ಸಮಜಾಯಿಷಿ ನೀಡಿದರು. BSNL ಸ್ಥಿರ ದೂರವಾಣಿ ಸರಿಯಿಲ್ಲ, ವೆಬ್​ಸೈಟ್​ನಲ್ಲಿ ತಾಂತ್ರಿಕ ಸಮಸ್ಯೆ ಇರುವ ಕಾರಣ ಹೊಸದೊಂದು ವೆಬ್​ಸೈಟ್​ ಅಭಿವೃದ್ಧಿಪಡಿಸಲಾಗುತ್ತಿದೆ. ಅದು ಆರಂಭವಾದ ಮೇಲೆ ಈ ಸಮಸ್ಯೆಗಳು ಇರುವುದಿಲ್ಲ ಎಂದು ಹೇಳಿದರು.

ಹೊಸ ವೆಬ್​ಸೈಟ್​ ಯಾವಾಗ ಲೋಕಾರ್ಪಣೆ ಆಗಲಿದೆ ಎಂಬ ವಿಚಾರಕ್ಕೆ ಮಾತ್ರ ಉತ್ತರವಾಗಲೀ, ಭರವಸೆಯನ್ನಾಗಲೀ ನೀಡದಿರುವುದು ನೋಡಿದರೆ ಅದು ತಕ್ಷಣಕ್ಕೆ ಕೈಗೂಡುವ ಕಾರ್ಯದಂತೆ ಕಂಡುಬರುತ್ತಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯುಕ್ತ ಪೆದ್ದಪ್ಪಯ್ಯ ಹಾಗೂ ಹಲೀಮಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

                                                                                   ಈ ಯಾವ ಮಾಹಿತಿಯೂ ಡೌನ್​ಲೋಡ್ ಆಗಲ್ಲ

ಇದನ್ನೂ ಓದಿ: ಗರ್ಭಿಣಿಯರ ಅನ್ನಕ್ಕೆ ಕನ್ನ ಹಾಕಿದ್ರೂ ಮಹಿಳಾ ಮತ್ತು ಮಕ್ಕಳ ಇಲಾಖೆ ಡೋಂಟ್ ಕೇರ್ ಅಂತಿದೆ!

ಇದನ್ನೂ ಓದಿ: ಅಪ್ರಾಪ್ತೆಯ ಮದುವೆಗೆ ಬ್ರೇಕ್ ಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು

Published On - 8:05 pm, Wed, 17 February 21