ಕಾರವಾರ ನೌಕಾನೆಲೆಗೆ ಹಾರಿಬಂದ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ
ಕಾರವಾದಲ್ಲಿ ಅದೊಂದು ವಲಸಿಗ ಸೀಗಲ್ ಹಕ್ಕಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕದಂಬ ನೌಕಾನೆಲೆ ಪ್ರದೇಶದಲ್ಲಿ ಮಂಗಳವಾರ ಕಾಣಿಸಿಕೊಂಡ ಸೀಗಲ್ ಹಕ್ಕಿ ಪೊಲೀಸರನ್ನು ದಂಗಾಗಿಸಿದೆ. ಸದ್ಯ ಪತ್ತೆಯಾದ ಈ ಸೀಗಲ್ ಹಕ್ಕಿ ಕುರಿತು ತನಿಖೆಗೆ ನೌಕಾದಳ ಪೊಲೀಸರು ಮುಂದಾಗಿದ್ದಾರೆ.

ಕಾರವಾರ, ಡಿಸೆಂಬರ್ 17: ಕಳೆದ ವರ್ಷ ಕಾರವಾರದ (Karwar) ಬಳಿ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿದ್ದ ರಣಹದ್ದು ಒಂದು ಕಂಡು ಬಂದಿತ್ತು. ಅದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಅಂತಹದೇ ಒಂದು ಘಟನೆ ಮರುಕಳಿಸಿದೆ. ಚೀನಾದ ಜಿಪಿಎಸ್ ಟ್ರ್ಯಾಕರ್ (China GPS tracker) ಹೊಂದಿರುವ ಸೀಗಲ್ ಪಕ್ಷಿ (ಕಡಲ ಹಕ್ಕಿ) ಒಂದು ಕದಂಬ ನೌಕಾನೆಲೆ ಪ್ರದೇಶದಲ್ಲಿ ಮಂಗಳವಾರ ಕಾಣಿಸಿಕೊಂಡಿದೆ. ಟ್ರ್ಯಾಕರ್ ಹೊಂದಿದ್ದ ಸೀಗಲ್ ಹಕ್ಕಿಯನ್ನು ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸದ್ಯ ಇದು ಜನರ ಆತಂಕಕ್ಕೆ ಕಾರಣವಾಗಿದೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ: ದಂಗಾದ ಪೊಲೀಸರು
ಕರ್ನಾಟಕದಲ್ಲಿ ಚಳಿ ಹೆಚ್ಚಿದೆ. ಆದರೆ ಇತ್ತ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಾತ್ರ ಬೆಚ್ಚಗಿನ ವಾತಾವರಣವಿದೆ. ಹೀಗಾಗಿ ಸೀಗಲ್ ಹಕ್ಕಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗೆ ಹಾರಿಬಂದ ವಲಸಿಗ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಕದಂಬ ನೌಕಾನೆಲೆ ಪ್ರದೇಶದಲ್ಲಿ ಕಾಣಿಸಿಕೊಂಡ ಈ ಸೀಗಲ್ ಹಕ್ಕಿ ಕಂಡು ಪೊಲೀಸರು ಕೂಡ ಆತಂಕಗೊಂಡಿದ್ದಾರೆ.
ಇದನ್ನೂ ಓದಿ: ಕಾರವಾರದಲ್ಲಿ ಆತಂಕ ಸೃಷ್ಠಿಸಿದ ಜಿಪಿಎಸ್ ಟ್ರಾನ್ಸ್ಮಿಟರ್ ಟ್ಯಾಗ್ ಹೊಂದಿದ ರಣಹದ್ದು
ಸದ್ಯ ಕಾರವಾರ ಪೊಲೀಸರು ಈ ಟ್ರ್ಯಾಕರ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಿಪಿಎಸ್ ಟ್ರ್ಯಾಕರ್ನಲ್ಲಿ ಚೀನಾದ ವಿಜ್ಞಾನ ಅಕಾಡೆಮಿಯ ಇಕೋ-ಎನ್ವಿರಾನ್ಮೆಂಟ್ ಸೈನ್ಸ್ ಎಂದು ಬರಹ ನಮೂದಿಸಲಾಗಿದೆ. ಸೀಗಲ್ ಹಕ್ಕಿಗಳ ಚಲನವಲನ, ಅವುಗಳ ಆಹಾರ ಪದ್ಧತಿ ಹಾಗೂ ವಲಸೆ ಸಮೀಕ್ಷೆಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಂಕೋಲಾದ ಕಡಲ ತೀರದಲ್ಲಿ ವಿದೇಶಿ ಹಕ್ಕಿಗಳ ಕಲರವ: ವಲಸೆ ಬಂದಿರೋ ಬಾನಾಡಿಗಳನ್ನೊಮ್ಮೆ ನೋಡಿ
ಸದ್ಯ ಸೀಗಲ್ ಹಕ್ಕಿ ಮರೈನ್ ಅರಣ್ಯ ವಿಭಾಗದ ಕಚೇರಿಗೆ ಶಿಫ್ಟ್ ಮಾಡಲಾಗಿದ್ದು, ಚೀನಾದ ಅಕಾಡೆಮಿಯನ್ನು ಅರಣ್ಯ ಅಧಿಕಾರಿಗಳು ಸಂಪರ್ಕಿಸುತ್ತಿದ್ದಾರೆ. ಸೀಗಲ್ ಹಕ್ಕಿ ಪತ್ತೆಯಾದ ಪ್ರದೇಶ ನೌಕಾನೆಲೆ ಸ್ಥಳವಿದ್ದು, ಈ ಕುರಿತು ನೌಕಾದಳ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



