ಎಚ್.ಡಿ ರೇವಣ್ಣಗೆ ಮತ್ತೆ ಬಿಗ್‌ಶಾಕ್.. ಇನ್ನಷ್ಟು ದಿನ ಜೈಲುವಾಸ ಮುಂದುವರಿಕೆ!
ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಸಂಕಷ್ಟ ಮುಂದುವರಿದಿದೆ. ಸುದೀರ್ಘ ಅವಧಿ ವಾದ ಆಲಿಸಿದ ನ್ಯಾಯಾಲಯ ಎಸ್ಐಟಿ ಮತ್ತಷ್ಟು ವಾದಕ್ಕೆ ಮಾಡಿದ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪುರಸ್ಕರಿಸಿದ್ದು, ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದೆ.
ಬೆಂಗಳೂರು, (ಮೇ 09): ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ (HD Revanna) ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮತ್ತೆ ಮುಂದೂಡಿದೆ. ಇಂದು (ಮೇ.09) ರೇವಣ್ಣ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದ್ದು, ಈ ವೇಳೆ ಸುಮಾರು ಒಂದುವರೆ ಗಂಟೆವರೆಗೆ ಪರ-ವಿರೋಧ ವಾದ ನಡೆಯಿತು. ಸುದೀರ್ಘ ಅವಧಿ ವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ಎಸ್ಐಟಿ ಮತ್ತಷ್ಟು ವಾದಕ್ಕೆ ಮಾಡಿದ ಮನವಿಯನ್ನು ಪುರಸ್ಕರಿಸಿದ್ದು, ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರ ಬೆಳಗ್ಗೆ 11:30ಕ್ಕೆ ಮುಂದೂಡಿಕೆ ಮಾಡಿದೆ.
ಎಸ್ಐಟಿ ಬಂಧನದ ಬಳಿಕ ಎಚ್.ಡಿ ರೇವಣ್ಣ ಅವರು ಜಾಮೀನಿಗಾಗಿ ಜನಪ್ರತಿನಿಧಿಗಳ ಕೋರ್ಟ್ ಮೊರೆ ಹೋಗಿದ್ದರು. ಇಂದು ಜಾಮೀನಿನ ಅರ್ಜಿ ವಿಚಾರಣೆ ಮುಂದುವರಿದಿದ್ದು, ರೇವಣ್ಣ ಪರ ಸೀನಿಯರ್ ಕೌನ್ಸಿಲ್ ಸಿ.ವಿ ನಾಗೇಶ್ ಹಾಜರಿದ್ದರು. ಎಸ್ಐಟಿ ಪರ SPP ಜಯ್ನಾ ಕೋಠಾರಿ ಅವರು ವಾದ ಮಂಡಿಸಿದರು.
ಬೆಂಗಳೂರು ಜನಪ್ರತಿನಿಧಿ ಕೋರ್ಟ್ ನ್ಯಾಯಾಧೀಶರ ಮುಂದೆ ಎಸ್ಐಟಿ ಮತ್ತಷ್ಟು ವಾದಕ್ಕೆ ಮನವಿ ಮಾಡಿದೆ. ಹೀಗಾಗಿ ಹೆಚ್ಚಿನ ವಾದ ಮಂಡಿಸಲು ಸೋಮವಾರಕ್ಕೆ ಅವಕಾಶ ನೀಡಲಾಗಿದೆ. ಎಚ್.ಡಿ ರೇವಣ್ಣ ಅವರು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಆಗಿರುವುದರಿಂದ ಅಲ್ಲಿಯವರೆಗೂ ಜೈಲುವಾಸ ಅನುಭವಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ