ಅಂಜನಾದ್ರಿ ಪರ್ವತವೇ ಹನುಮನ ಜನ್ಮಸ್ಥಳ; ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರತಿಪಾದನೆ
ಕಿಷ್ಕಿಂದೆಯ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂದು ಗಂಗಾವತಿ ತಾಲೂಕಿನ ಶಾಸಕ ಪರಣ್ಣ ಮುನವಳ್ಳಿ, ಇತಿಹಾಸ ಸಂಶೋಧಕ ಶರಣ ಬಸಪ್ಪ ಕೋಲ್ಕರ್ ಹಾಗೂ ಕನ್ನಡ ಉಪನ್ಯಾಸಕ ಪವನ್ ಕುಮಾರ್ ಗುಂಡೂರು, ಇನ್ನೊಬ್ಬ ಧಾರ್ಮಿಕ ಮುಖಂಡ ಸಂತೋಷ್ ಕೆಲೋಜಿ ಪತ್ರಿಕಾಗೋಷ್ಠಿ ಕರೆದು ಸೂಕ್ತ ದಾಖಲೆಗಳನ್ನು ನೀಡಿ ಮಾತನಾಡಿದರು.
ಗಂಗಾವತಿ: ತಾಲೂಕಿನ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆನೆಗೊಂದಿಯ ಕಿಷ್ಕಿಂದೆಯ ಅಂಜನಾದ್ರಿ ಪರ್ವತವನ್ನು ಹನುಮನ ಜನ್ಮಸ್ಥಳವೆಂದು ಕೇಂದ್ರ ಸರ್ಕಾರ ಈಗಾಗಲೇ ಉಲ್ಲೇಖಿಸಿದೆ ಎಂದು ಗಂಗಾವತಿ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ತಮ್ಮ ಮನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆಂಧ್ರ ಪ್ರದೇಶದ ತಿರುಪತಿಯಲ್ಲಿ ಆಂಜನೇಯ ಹುಟ್ಟಿದ್ದಾನೆ ಎಂದು ಅಲ್ಲಿಯ ಟಿಟಿಡಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದು, ಕಿಷ್ಕಿಂದೆಯ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂದು ಗಂಗಾವತಿ ತಾಲೂಕಿನ ಶಾಸಕ ಪರಣ್ಣ ಮುನವಳ್ಳಿ, ಇತಿಹಾಸ ಸಂಶೋಧಕ ಶರಣ ಬಸಪ್ಪ ಕೋಲ್ಕರ್ ಹಾಗೂ ಕನ್ನಡ ಉಪನ್ಯಾಸಕ ಪವನ್ ಕುಮಾರ್ ಗುಂಡೂರು, ಇನ್ನೊಬ್ಬ ಧಾರ್ಮಿಕ ಮುಖಂಡ ಸಂತೋಷ್ ಕೆಲೋಜಿ ಪತ್ರಿಕಾಗೋಷ್ಠಿ ಕರೆದು ಸೂಕ್ತ ದಾಖಲೆಗಳನ್ನು ನೀಡಿ ಮಾತನಾಡಿದರು.
ಹನುಮಂತ ನಿಜವಾಗಿ ಹುಟ್ಟಿರುವುದು ಗಂಗಾವತಿ ಕಿಷ್ಕಿಂದೆಯ ನಾಡಿನಲ್ಲಿ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿ ಬಹಳ ಸ್ಪಷ್ಟವಾಗಿ ಉಲ್ಲೇಖವಿದೆ, ಆದರೆ ವಾಲ್ಮೀಕಿ ಬರೆದಾಗ ತ್ರೇತಾಯುಗ ಇದ್ದು, ನಂತರ ದ್ವಾಪರ ಯುಗ ಹುಟ್ಟಿ, ಅಲ್ಲಿಂದ ಕಥೆ ಪುರಾಣಗಳು ಆರಂಭಗೊಂಡು ಈಗ ಕಲಿಯುಗ ಸೃಷ್ಟಿ ಆಗಿದೆ, ಸಾವಿರಾರು ವರ್ಷಗಳ ಇತಿಹಾಸದ ಪುಸ್ತಕದಲ್ಲಿ ಹನುಮ ಜನಿಸಿದ ನಾಡು ಪಂಪಾನದಿ, ಪಂಪಾ ಸರೋವರ, ಹತ್ತಿರ ಕಿಷ್ಕಿಂದೆ ಎಂದು ಬಹಳ ಸ್ಪಷ್ಟವಾಗಿ ಬರೆಯಲಾಗಿದೆ ಆದರೂ ಟಿಟಿಡಿ ಅವರು ಸುಖಾಸುಮ್ಮನೆ ಇತಿಹಾಸವನ್ನು ತಿರುಚಲು ಹೊರಟಿದೆ ಎಂದು ಖ್ಯಾತ ಸಂಶೋಧಕರಾದ ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ್ ಹೇಳಿದರು.
ತಿರುಪತಿಯಲ್ಲಿ ಹನುಮ ಚಲಿಸಿದ ಬಗ್ಗೆ ಟಿಟಿಡಿ ಅವರ ಹತ್ತಿರ ಯಾವುದೇ ಮೂಲ ದಾಖಲೆಗಳಿಲ್ಲ ಇತಿಹಾಸವನ್ನು ಮರೆ ಮಾಚಲು ಸುದ್ದಿಯನ್ನು ಹುಟ್ಟು ಹಾಕಿದ್ದಾರೆ, ಅಂಜನಾದ್ರಿ ಬೆಟ್ಟದ ಕೆಳಗೆ ಹನುಮನಹಳ್ಳಿ, ಅಂಜನಾದ್ರಿ, ಅಂಜನಹಳ್ಳಿ ಹೀಗೆ ಹನುಮನ ಹೆಸರುಗಳುಳ್ಳ ಹಳ್ಳಿಗಳು ಸಹ ರಾಮಾಯಣದಲ್ಲಿ ಉಲ್ಲೇಖಗೊಂಡಿದೆ, ವಾಲಿ-ಸುಗ್ರೀವ ರಾಜ್ಯಭಾರ ಮಾಡಿದ್ದು, ಶ್ರೀರಾಮ ಇಲ್ಲಿಗೆ ಬಂದಿದ್ದು, ಇಲ್ಲಿನ ಶಿಲಾಶಾಸನಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ಪವನ ಕುಮಾರ್ ಗುಂಡೂರು ಹೇಳಿದರು.
ಮುಖ್ಯಮಂತ್ರಿಗಳ ಗಮನಕ್ಕೂ ತರಲು ಚಿಂತನೆ ಸದ್ಯ ಟಿಟಿಡಿ ಹೊಸ ವಿವಾದ ಹುಟ್ಟು ಹಾಕಿದ್ದ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅಂಜನಾದ್ರಿ ವಿವಾದವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಜರಾಯಿ ಸಚಿವ ಕೋಟಾ ಪೂಜಾರಿ ಅವರ ಗಮನಕ್ಕೆ ತರಲು ಚಿಂತನೆ ನಡೆಸಿದ್ದಾರೆ. ಏಪ್ರಿಲ್ 16 ರಂದು ಆನೆಗೊಂದಿ ಅಭಿವೃದ್ದಿ ಕಾರ್ಯಕ್ರಮಕ್ಕೆ ಕೋಟಾ ಶ್ರೀನಿವಾಸ್ ಪೂಜಾರಿ ಚಾಲನೆ ನೀಡಬೇಕಾಗಿತ್ತು.ಇವರೊಂದಿಗೆ ನಾಲ್ವರು ಸಚಿವರು ಭೇಟಿ ನಿಡೋದು ನಿಗದಿಯಾಗಿತ್ತು.ಆದ್ರೆ ಕೋಟಾ ಶ್ರೀನಿವಾಸ್ ಪೂಜಾರಿಗೆ ಕೋವಿಡ್ ಸೋಂಕು ತಗುಲಿದ ಕಾರಣ ಕಾರ್ಯಕ್ರಮ ಮುಂದೂಡಲಾಗಿದೆ.ಇದೀಗ ಟಿಟಿಡಿ ವಿವಾದ ಉಂಟಾಗಿದೆ,ಹೀಗಾಗಿ ಕೋವಿಡ್ ಕಡಿಮೆಯಾದ ಬಳಿಕ ಕೋಟಾ ಶ್ರೀನಿವಾಸ್ ಪೂಜಾರಿ ಅಂಜನಾದ್ರಿಗೆ ಭೇಟಿ ನೀಡಲಿದ್ದಾರೆ.ಇದಲ್ಲದೆ ಮುಂದಿನ ಒಂದು ವಾರದೊಳಗೆ ಶಾಸಕ ಪರಣ್ಣ ಮುನವಳ್ಳಿ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರದ ಮಧ್ಯಸ್ಥಿಕೆಗೆ ಆಗ್ರಹ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕು. ಶ್ರೀರಾಮ್ ಸರ್ಕ್ಯೂಟ್ ಕಿಷ್ಕಿಂದೆ ಪ್ರದೇಶವೇ ಹನುಮನ ಜನ್ಮಸ್ಥಳ ಅಂಜನಾದ್ರಿ ಎಂದು ಉಲ್ಲೇಖ ಮಾಡಿದೆ..in the footsteps of shriram ಎಂಬ ಪುಸ್ತಕವನ್ನು ಕೇಂದ್ರ ಒಪ್ಪಿದೆ. ಡಾ ರಾಮ್ ಅವತಾರ ಶರ್ಮಾ ಬರೆದ ಪುಸ್ತಕವನ್ನು ಕೇಂದ್ರ ಸರ್ಕಾರವೂ ಒಪ್ಪಿದೆ. ಹೀಗಾಗಿ ಅಂಜನಾದ್ರಿ ಅಭಿವೃದ್ದಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ.ಇದೀಗ ಟಿಟಿಡಿ ವಿವಾದ ಉಂಟು ಮಾಡಿದ್ದು ಕೇಂದ್ರ ಸರ್ಕಾರ ಒಪ್ಪಿದ್ದು,ಕೆಲ ಸಂಶೋಧಕರು,ಇತಿಹಾಸಕಾರರನ್ನು ನೇಮಸಿ ಇದಕ್ಕೊಂದು ಇತೀಶ್ರೀ ಹಾಡಬೇಕಿದೆ ಎಂದು ಸ್ಥಳೀಯ ಸಂಶೋಧಕರು ಆಗ್ರಹಿಸಿದರು. ಟಿಟಿಡಿ ವರಾಹ ಪುರಾಣ,ಬ್ರಹ್ಮ ಪುರಾಣ ಉಲ್ಲೇಖಿಸಿ ತಗಾದೆ ತಗೆದಿದೆ.ಆದ್ರೆ ನಮಗೆ ವಾಲ್ಮೀಕಿ ಬರೆದ ರಾಮಾಯಣ ಮುಖ್ಯ ಹೀಗಾಗಿ ಹನುಮ ಅಂಜನಾದ್ರಿ ಹುಟ್ಟಿದ ಸ್ಥಳ ಎಂದರು..
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ‘ಸಾವಿರಾರು ವರ್ಷಗಳ ಹಿಂದೆ ಬರೆದ ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣ ದಲ್ಲಿ ಹನುಮ ಜನಿಸಿದ ನಾಡು ಕಿಷ್ಕಿಂದ ಅಂಜನಾದ್ರಿ ಪರ್ವತ ಇದ್ದು, ಇದಕ್ಕೆ ಯಾರೂ ಆತಂಕಪಡುವ ಅಗತ್ಯವಿಲ್ಲ, ಯಾರು ಏನೇ ಹೇಳಿದರೂ ಹನುಮ ಇಲ್ಲೇ ಹುಟ್ಟಿದ್ದು ಎಂದು ಇತಿಹಾಸ, ರಾಮಾಯಣ, ಪುರಾಣ, ಜಾನಪದಗಳಲ್ಲಿ, ಸ್ಕಂದಪುರಾಣದಲ್ಲಿ, ಸಾರಿ ಸಾರಿ ಹೇಳುತ್ತದೆ. ಅಂಜನಾದ್ರಿ ಹನುಮ ಜನಿಸಿದ ನಾಡು ಎಂದು ಜಗತ್ತಿಗೆ ಗೊತ್ತಿದೆ,ನಾನು ಕೂಡಲೇ ಮುಖ್ಯಮಂತ್ರಿಗಳು,ಮುಜರಾಯಿ ಇಲಾಖೆ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು.
ಈ ಕುರಿತು ವಿವರಿಸಿದ ಹಿಂದೂ ಸಂಘಟನೆ ಮುಖಂಡ ಸಂತೋಷ್ ಕೆಲೋಜಿ, ‘ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹಾಗೂ ಜಗನ್ಮೋಹನ್ ರೆಡ್ಡಿ ಇದೀಗ ವಿವಾದ ಹುಟ್ಟು ಹಾಕಿದ್ದು ಸರಿ ಅಲ್ಲ. ಇವರು ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ನಮಗೆ ವಾಲ್ಮೀಕಿ ರಾಮಾಯಣ ಮುಖ್ಯ, ರಾಮಾಯಣದಲ್ಲಿ ಕಿಷ್ಕಿಂದೆ ಪ್ರದೇಶದಲ್ಲಿ ಹನುಮ ಹುಟ್ಟಿರೋ ಬಗ್ಗೆ ಖಚಿತ ದಾಖಲೆ ಇವೆ. ಟಿಟಿಡಿ ಸುಮ್ಮನೆ ವಿವಾದ ಮಾಡ್ತಿದೆ’ ಎಂದರು.
ಇದನ್ನೂ ಓದಿ: ಕೊಪ್ಪಳದ ಕಿಷ್ಕಿಂದೆಯೇ ಹನುಮ ಹುಟ್ಟಿದ ಸ್ಥಳ; ಇಲ್ಲಿವೆ ಖಚಿತ ದಾಖಲೆಗಳು
ಲಕ್ಷ ಲಕ್ಷ ಜನ ಧರಿಸುವ ಹನುಮ ಮಾಲೆಯ ರೋಚಕ ಇತಿಹಾಸ!
(Kishkinda Anjanadri hill is the Lord Hanuman Birth Place says Gangavati MLA Paranna Munavalli)