ಗುಡ್ ನ್ಯೂಸ್: ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಇಳಿಕೆ ಸಾಧ್ಯತೆ
Nandini products price cut: ಜಿಎಸ್ಟಿ ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಆಟೊಮೊಬೈಲ್ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಕಡಿಮೆ ಮಾಡುತ್ತಿವೆ. ಅಲ್ಲದೇ ಎನ್ಡಿಡಿಬಿ (ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್) ಅಂಗಸಂಸ್ಥೆ ಹಾಗೂ ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾದ ಮದರ್ ಡೈರಿಯ (Mother Dairy) ಹಾಲು ಹಾಗೂ ವಿವಿಧ ಉತ್ಪನ್ನಗಳ ಬೆಲೆಯನ್ನು ಇಳಿಸಲಾಗಿದೆ. ಇತ್ತ ಕರ್ನಾಟಕದ ಸ್ಟಾರ್ ಬ್ರ್ಯಾಂಡ್ ಕೆಎಂಎಫ್ ಸಹ ತನ್ನ ನಂದಿನಿ ಹಾಲಿನ ಕೆಲ ಉತ್ಪನ್ನಗಳ ದರ ಇಳಿಕೆಗೆ ಮುಂದಾಗಿದೆ.

ಬೆಂಗಳೂರು,(ಸೆಪ್ಟೆಂಬರ್ 18): ಮೊನ್ನೆ ಅಷ್ಟೇ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ, ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು (GST) ಶೇ 12ರಿಂದ 5ಕ್ಕೆ ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಸೆಪ್ಟೆಂಬರ್ 22ರಿಂದ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ನಂದಿನಿಯ (Nandini) ವಿವಿಧ ಉತ್ಪನ್ನಗಳ ಬೆಳೆ ಇಳಿಕೆ ಮಾಡಲು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (KMF) ಮುಂದಾಗಿದೆ. ಮೊಸರಿಗೆ ದ ಲೀಟರ್ ಗೆ ಬರೋಬ್ಬರಿ 4 ರೂಪಾಯಿವರೆಗೆ ಕಡಿಮೆಯಾಗುವ ಸಾಧ್ಯತೆಗಳಿವೆ.
ಈ ನಂದಿನ ಉತ್ಪನ್ನಗಳ ದರ ಇಳಿಕೆ ಕುರಿತು ನಾಡಿದ್ದು ಅಂದರೆ ಸೆಪ್ಟೆಂಬರ್ 20ರಂದು ಕೆಎಂಎಫ್ ನ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದ್ದು, ಬೆಲೆ ಇಳಿಕೆ ಬಗ್ಗೆ ಕೈಗೊಳ್ಳಲಿದೆ. ಒಂದು ವೇಳೆ ಸಭೆಯಲ್ಲಿ ದರ ಇಳಿಕೆ ಬಗ್ಗೆ ನಿರ್ಧಾರ ಕೈಗೊಂಡರೆ, ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ಪರಿಸ್ಕೃತ ದರ ಜಾರಿಯಾಗುವ ಸಾಧ್ಯತೆಗಳು ಇವೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಭಾರೀ ಅನುಕೂಲವಾಗಲಿದೆ.
ಇದನ್ನೂ ಓದಿ: ಜಿಎಸ್ಟಿ ಕಡಿತದ ಎಫೆಕ್ಟ್; ಮದರ್ ಡೈರಿ ಹಾಲು ಬೆಲೆ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ
2025, ಏಪ್ರಿಲ್ 1ರಂದು ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್ ದರ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆ ಮಾಡಿತ್ತು. ಜೊತೆಗೆ ಮೊಸರಿನ ದರವೂ ಸಹ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿತ್ತು. ಇದೀಗ ಇದೇ ನಾಲ್ಕು ರೂಪಾಯಿಯನ್ನು ಕಡಿತ ಮಾಡಲು ಕೆಎಂಎಫ್ ಮುಂದಾಗಿದೆ.
2017ರಲ್ಲಿ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ ವಿಧಿಸಲಾಗಿತ್ತು. ನಂತರ 2022ರಲ್ಲಿ ಜಿಎಸ್ ಟಿಯನ್ನು ಶೇ 12ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದ ನಂದಿನಿ ಸೇರಿದಂತೆ ಎಲ್ಲಾ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಇದು ಬಡ ಜನರಿಗೆ ಬಾರೀ ಹೊರೆಯಾಗಿತ್ತು. ಇದನ್ನು ಅರಿತ ಕೇಂದ್ರ, ಇದೀಗ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ ಟಿಯನ್ನು ಇಳಿಕೆ ಮಾಡಿದೆ. ಈಗ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಜನಸಾಮಾನ್ಯರಿಗೆ ಸ್ವಲ್ಪಮಟ್ಟಿಗೆ ಹೊರೆ ಕಡಿಮೆಯಾಗಿದೆ.
ಇನ್ನು ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾದ ಮದರ್ ಡೈರಿಯ (Mother Dairy) ಹಾಲು ಹಾಗೂ ವಿವಿಧ ಉತ್ಪನ್ನಗಳ ಬೆಲೆಯನ್ನು ಇಳಿಸಲಾಗಿದೆ. ಜಿಎಸ್ಟಿ (GST) ಕಡಿತದ ಹಿನ್ನೆಲೆಯಲ್ಲಿ ಸಂಸ್ಥೆಯು ಬೆಲೆಗಳನ್ನು 2ರಿಂದ 30 ರೂಗಳವರೆಗೆ ಕಡಿಮೆ ಮಾಡಿದೆ. ವರದಿ ಪ್ರಕಾರ, ಹಾಲು, ಮೊಸರು, ತುಪ್ಪ, ಬೆಣ್ಣೆ, ಪನೀರ್ ಇತ್ಯಾದಿ ಉತ್ಪನ್ನಗಳ ಬೆಲೆಯನ್ನು ಮದರ್ ಡೈರಿ ಕಡಿಮೆಗೊಳಿಸಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Thu, 18 September 25




