ಸಿಹಿ ಅಡುಗೆ ಮಾಡಿಲ್ಲ ಎಂದು ವರನ ಕಡೆಯವರಿಂದ ತಗಾದೆ: ಕ್ಷುಲ್ಲಕ ಕಾರಣಕ್ಕೆ ಮುರಿದು ಬಿತ್ತು ಮದುವೆ
ಸಿಹಿ ಅಡುಗೆ ಮಾಡಿಲ್ಲ ಎಂದು ವರನ ಕಡೆಯವರು ಮದುವೆ ಮುರಿದು ಕೊಂಡಿರುವಂತಹ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ. ಅಡುಗೆಯಲ್ಲಿ ಸಿಹಿ ಮಾಡಿಲ್ಲ ಎಂದು ವರನ ಕಡೆಯವರ ತಗಾದೆ ತೆಗೆದಿದ್ದಾರೆ. ಮದುಮಗ-ಮಧುಮಗಳು ಪರಸ್ಪರ ಉಂಗುರ ಕಿತ್ತೆಸೆದಿದ್ದಾರೆ. ವಧು ಕಡೆಯವರಿಂದ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ವರನ ವಿರುದ್ಧ ದೂರು ದಾಖಲಾಗಿದೆ.

ಕೊಡಗು, ಮೇ 06: ಮದುವೆಯಲ್ಲಿ ಏಳೇಳು ಜನ್ಮಗಳಲ್ಲೂ ಜೊತೆ ಜೊತೆಯಾಗಿ ಇರಲಿ ಎಂಬ ಉದ್ದೇಶದಿಂದ ಸಪ್ತಪದಿ ತುಳಿಯಲಾಗುತ್ತದೆ. ಆದರೆ ಇಲ್ಲೊಂದು ಮದುವೆ (marriage) ಸಪ್ತಪದಿ ಹೋಗಲಿ ಒಂದು ಹೆಜ್ಜೆ ಇಡುವ ಮುನ್ನವೆ ಮದುವೆ ಮಂಟಪದಲ್ಲೇ ಮುರಿದು ಬಿದ್ದಿದೆ. ಅದು ಕೂಡ ಸಿಹಿ ಮಾಡಿಲ್ಲ ಎಂಬ ಸಣ್ಣ ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದು ಬಿದ್ದಿದೆ. ಇಂತಹ ಒಂದು ವಿಲಕ್ಷಣ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಗ್ರಾಮದಲ್ಲಿ ನಡೆದಿದೆ.
ನಿವೃತ್ತ ಸೈನಿಕ ಮಂಜುನಾಥ್ ಪುತ್ರಿ ಕೃತಿಕ ವಿವಾಹ ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಹರ್ಷಿತ್ ಜೊತೆ ನಿಶ್ಚಯವಾಗಿತ್ತು. ಸೋಮವಾರಪೇಟೆ ಪಟ್ಟಣದ ಜಾನಕಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಮತ್ತು ಇವತ್ತು ಮದುವೆ ನಡೆಯಬೇಕಿತ್ತು. ನಿನ್ನೆ ನಿಶ್ಚಿತಾರ್ಥ ಇಂದು ದಂಪತಿ ಮುಹೂರ್ತ ನಡೆಯಬೇಕಿತ್ತು. ಅದರಂತೆ ನಿನ್ನೆ ಸಂಜೆ ವರನ ಕಡೆಯವರು ಮದುವೆ ಮಂಟಪಕ್ಕೆ ಬಂದಾಗ ವಧುವಿನ ಕಡೆಯವರು ಸರಿಯಾಗಿ ಉಪಚರಿಸಲಿಲ್ಲ ಎಂದು ತಗಾದೆ ತೆಗೆದು ವಾಪಾಸ್ ತಮ್ಮ ಲಾಡ್ಜ್ಗೆ ತೆರಳಿದ್ದಾರೆ ಬಳಿಕ ರಾತ್ರಿ 9 ಗಂಟೆಗೆ ಬಹಳ ತಡವಾಗಿ ಆಗಮಿಸಿದರಂತೆ.
ಇಲ್ಲಿಂದಲ್ಲೇ ವಧು ಮತ್ತು ವರನ ಕಡೆಯವರ ಮಧ್ಯ ಭಿನ್ನಾಭಿಪ್ರಾಯಗಳು ಶುರುವಾಗಿತ್ತು. ಸಂಜೆ ನಡೆಯಬೇಕಾಗಿದ್ದ ನಿಶ್ಚಿತಾರ್ಥ ಮದ್ಯ ರಾತ್ರಿ 1ಗಂಟೆಗೆ ನಡೆದಿತ್ತು. ಗಂಡು ಹೆಣ್ಣು ಪರಸ್ಪರ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ ಇದೇ ಸಂದರ್ಭ ಮದುವೆ ಊಟಕ್ಕೆ ಸಿಹಿ ಮಾಡಿಲ್ಲವೆಂದು ವರನ ಕಡೆಯವರು ಗಲಾಟೆ ಮಾಡಿಕೊಂಡಿದ್ದಾರೆ. ಈ ವಿಚಾರ ವಿಕೋಪಕ್ಕೆ ಹೋಗಿ ವಧು ಮತ್ತು ವರನ ಸಂಭಂಧಿಕರ ಮದ್ಯೆ ತೀವ್ರ ಗಲಾಟೆಯಾಗಿದೆ. ಘಟನೆಯಲ್ಲಿ ತಾಳ್ಮೆ ಕಳೆದುಕೊಂಡ ಮದುಮಗ ಉಂಗುರವನ್ನು ಕಿತ್ತು ಬಿಸಾಕಿದಲ್ಲದೆ ವಧುವಿಗೆ ಹಾಕಿದ್ದ ಉಂಗುರವನ್ನು ಬಿಚ್ಚಿ ಕೊಡುವಂತೆ ತಾಕೀತು ಮಾಡಿದ್ದಾನೆ. ಸಿಟ್ಟುಗೊಂಡ ಯುವತಿ ಉಂಗುರವನ್ನು ಕಿತ್ತು ಎಸೆದಿದ್ದಾಳೆ. ಅಲ್ಲಿಗೆ ಎಲ್ಲವೂ ಮುಗಿದು ಹೋಗಿತ್ತು.
ಇದನ್ನೂ ಓದಿ: ಮಡಿಕೇರಿಯಲ್ಲಿ ತಲೆಎತ್ತಿದ ಸ್ಕೈ ಬ್ರಿಡ್ಜ್; ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವ ಅನುಭವ
ಸಣ್ಣಪುಟ್ಟ ಭಿನ್ನಾಭಿಪ್ರಾಯದಿಂದ ಆರಂಭವಾದ ಜಗಳ ಮದುವೆಯೇ ಮುರಿದು ಬೀಳುವ ಹಂತಕ್ಕೆ ತಳುಪಿದೆ ಆದರೆ ಈಗ ವಿವಾಹ ಮುರಿದು ಬೀಳಲು ವರದಕ್ಷಿಣೆ ಕಿರುಕುಳ ಕಾರಣವೆಂದು ವಧುವಿನ ಕಡೆಯವರು ಆರೋಪಿಸುತ್ತಿದ್ದಾರೆ. ವರನ ಕಡೆಯವರು ಕೇಳಿದಷ್ಟು ಚಿನ್ನ ಮಾಡಿಲ್ಲವೆಂಬ ಕಾರಣಕ್ಕೆ ಮದುವೆ ಮುರಿದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ವರನ ಕಡೆಯವರು 100 ಗ್ರಾಂ ಚಿನ್ನ ಕೇಳಿದ್ದು 60 ಗ್ರಾಂ ಚಿನ್ನ ನೀಡಲಾಗಿತ್ತು. ಅಲ್ಲದೆ ದಂಪತಿ ವಾಸ ಮಾಡಲು ಮನೆ ಬೊಗ್ಯಕ್ಕೆ ಹಾಕಲು 10 ಲಕ್ಷ ರೂ ಕೇಳುದ್ದರಂತೆ. ಆದರೆ ಆ ಹಣ ನೀಡಲು ಆಗಿರಲಿಲ್ಲ. ಈ ಎಲ್ಲಾ ಕಾರಣದಿಂದ ಮದುವೆ ಮುರಿದಿದ್ದಾರೆ ಎಂದು ಸೋಮವಾರಪೇಟೆ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
ಇದನ್ನೂ ಓದಿ: ಲಕ್ಷ್ಮಣ ತೀರ್ಥ ನದಿ ಬತ್ತಲು ಕಾರಣವಾಯ್ತು ಹವಾಮಾನ ವೈಪರೀತ್ಯ: ಹೇಗೆ ಗೊತ್ತಾ?
ಇದೀಗ ಮಧುಮಗ ಹರ್ಷಿತ್ ಈ ರೀತಿ ಜಗಳ ಇದಕ್ಕಿಂತ ಮೊದಲು ಮೂರು ಬಾರಿ ಮದುವೆ ಮುರಿದಿದ್ದಾನೆ ಎಂಬ ಆರೋಪವೂ ಇದೆ. ಪೋಲಿಸ್ ದೂರು ನೀಡಲಾಗಿದ್ದರು ಇನ್ನೂ ಎಫ್ಐಆರ್ ದಾಖಲಾಗಿಲ್ಲ. ವರದಕ್ಷಿಣೆ ಕಾರಣಕ್ಕೆ ಮದುವೆ ಮುರಿದು ಬಿದ್ದಿದ್ದರೆ ಸೂಕ್ತ ತನಿಖೆಯಾಗಬೇಕಿದೆ. ಒಂದು ವೇಳೆ ಸಣ್ಣಪುಟ್ಟ ಕಾರಣಕ್ಕೆ ಜಗಳವಾಗಿ ವಿವಾಹ ಮುರಿದು ಬಿದ್ದಿದ್ದರೆ ಅದು ವಿಪರ್ಯಾಸವೆ ಸರಿ. ಏನೇ ಆದರೂ ಲಕ್ಷಾಂತರ ರೂ. ಖರ್ಚು ಮಾಡಿ ವಿವಾಹ ನಡೆಸಲು ಮುಂದಾದ ಪೋಷಕರು ಮಾತ್ರ ಕೈ ಸುಟ್ಟುಕೊಂಡು ಮನಸ್ಸು ಮುರಿದುಕೊಂಡು ವೇದನೆ ಪಡುವಂತಾಗಿದೆ.
ಮತ್ತಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.