ಮಡಿಕೇರಿಯಲ್ಲಿ ಆನೆ ದಾಳಿಗೆ ವಿದ್ಯಾರ್ಥಿ ಸಾವು; ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ
ಮೃತ ವಿದ್ಯಾರ್ಥಿಯ ಕುಟುಂಬವನ್ನ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಮಾಡಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಕುಟುಂಬಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಗು: ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಬಳಿ ಕಾಡಾನೆ (Elephant) ದಾಳಿಗೆ ಓರ್ವ ವಿದ್ಯಾರ್ಥಿ (Student) ಮೃತಪಟ್ಟಿದ್ದಾನೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ನೆಲ್ಯಹುದಿಕೇರಿ ಗ್ರಾಮದ ಮೊಹಮ್ಮದ್ ಆಶಿಕ್ (19) ಸಾವನ್ನಪ್ಪಿದ್ದಾನೆ. ಇನ್ನೊರ್ವ ವಿದ್ಯಾರ್ಥಿ ಅಸ್ಮಿಲ್ ಗಂಭೀರ ಗಾಯಗೊಂಡಿದ್ದಾನೆ. ವಿದ್ಯಾರ್ಥಿಗಳು ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿಯ ಕುಟುಂಬವನ್ನ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಮಾಡಿಲ್ಲ ಹೀಗಾಗಿ ವಿದ್ಯಾರ್ಥಿಗಳ ಕುಟುಂಬಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು ನೆಲ್ಯಹುದಿಕೇರಿ ಗ್ರಾಮದಲ್ಲಿ ಕ್ರಿಕೆಟ್ (Cricket) ಆಟವಾಡಿ ನಿನ್ನೆ ಸಂಜೆ ಸಂಜೆ 6.30 ರ ಸುಮಾರಿಗೆ ಒಂದೇ ಬೈಕ್ನಲ್ಲಿ ಮನೆಯತ್ತ ಮರಳುತ್ತಿದ್ದರು. ಈ ವೇಳೆ ಕಾಫಿ ತೋಟದೊಳಗಿನಿಂದ ಏಕಾಏಕಿ ಕಾಡಾನೆಯೊಂದು ಇವರ ಮೇಲೆ ದಾಳಿ ನಡೆಸಿದೆ. ಇಬ್ಬರೂ ಯುವಕರು ಬೈಕಿನಿಂದ ಕೆಳಗೆ ಬಿದ್ದಿದ್ದಾರೆ. ಆನೆದಾಳಿಗೆ ಒಳಗಾದ ಇಬ್ಬರೂ ತೀವ್ರ ಗಾಯಗೊಂಡಿದ್ದರು. ಮೊಹಮ್ಮದ್ ಆಶಿಕ್ನನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಗಾಯಾಳು ಅಸ್ಮಿಲ್ಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಡಾನೆ ದಾಳಿಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಬರುವವರೆಗೆ ಶವ ಪಡೆಯುವುದಿಲ್ಲ ಅಂತ ಕೆಲಕಾಲ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಸ್ಥಳೀಯ ಜನಪ್ರತಿನಿಧಿಗಳು ಕುಟುಂಬಸ್ಥರ ಮನವೊಲಿಕೆ ಮಾಡಿದರು.
ಅರೆಕಾಡು, ನೆಲ್ಯಹುದಿಕೇರಿ ಭಾಗದಲ್ಲಿ ಸಂಜೆ ಆರು ಗಂಟೆಯ ಬಳಿಕ ಓಡಾಡುವುದೇ ಸಾಧ್ಯವಾಗುವುದಿಲ್ಲ. ಕಾಡಾನೆ ಹಾವಳಿಯಲ್ಲಿ ಇನ್ನೆಷ್ಟು ಜನ ಬಲಿಯಾಗಬೇಕು. ಈ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಗ್ರಾಮ ಪಂಚಾಯತಿ ಸದಸ್ಯೆ ಸುನೀತಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸದ್ಯ ಅರೆಕಾಡು, ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ
ಇದನ್ನೂ ಓದಿ
ಸೆಲೆಬ್ರಿಟಿಗಳನ್ನೂ ಹುಚ್ಚೆಬ್ಬಿಸಿದ ಸಮಂತಾ ಸಾಂಗ್; ಮಾದಕ ಅವತಾರದಲ್ಲಿ ಸಂಜೀದಾ ಶೇಖ್ ಪೋಸ್
ಮಕರ ಸಂಕ್ರಾಂತಿ ಹಿನ್ನೆಲೆ ನದಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತರು ನೀರುಪಾಲು
Published On - 12:16 pm, Sat, 15 January 22