ಹಣೆಗೆ ಕುಂಕುಮ ಇಡಬೇಕಿದ್ದ ಭಾವಿ ಪತಿಯಿಂದಲೇ ಕೊಲೆ: ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ಬಾಲಕಿಯನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಗಲ್ಲು ಶಿಕ್ಷೆ

ಮಡಿಕೇರಿ ನ್ಯಾಯಾಲಯವು ಅಪ್ರಾಪ್ತ ಬಾಲಕಿ ಮೀನಾ ಭೀಕರ ಕೊಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. 2024ರ ಮೇ 9ರಂದು 16 ವರ್ಷದ ಮೀನಾಳನ್ನು ಕತ್ತು ಸೀಳಿ ಕೊಲೆಗೈದ ಆರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್‌ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪು ಮೃತರ ಕುಟುಂಬಕ್ಕೆ ನ್ಯಾಯ ತಂದಿದ್ದು, ತ್ವರಿತ ನ್ಯಾಯಾಂಗ ಪ್ರಕ್ರಿಯೆಗೆ ಸಾರ್ವಜನಿಕರ ಶ್ಲಾಘನೆ ವ್ಯಕ್ತವಾಗಿದೆ.

ಹಣೆಗೆ ಕುಂಕುಮ ಇಡಬೇಕಿದ್ದ ಭಾವಿ ಪತಿಯಿಂದಲೇ ಕೊಲೆ: ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ಬಾಲಕಿಯನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಗಲ್ಲು ಶಿಕ್ಷೆ
Edited By:

Updated on: Nov 23, 2026 | 3:43 PM

ಮಡಿಕೇರಿ, ನ,23: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾದ ಖುಷಿ ಹಾಗೂ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯ ಕತ್ತು ಸೀಳಿ, ರುಂಡ ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ದ ಪ್ರಕರಣದಲ್ಲಿ ಅಪರಾಧಿಗೆ ಮಡಿಕೇರಿ ನ್ಯಾಯಾಲಯ ಮರಣದಂಡನೆ (Death Penalty) ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದ ಕುಂಬಾರಗಡಿಗೆ ಎಂಬಲ್ಲಿ 2024ರ ಮೇ 9ರಂದು ನಡೆದಿದ್ದ ಈ ರಕ್ಕಸೀ ಕೃತ್ಯದ ಅಪರಾಧಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ (32) ಎಂಬಾತನಿಗೆ ಮಡಿಕೇರಿಯ ಮೂರನೇ ಹೆಚ್ಚುವರಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರ ಅವರು ನೇಣು ಕುಣಿಕೆಯ ಶಿಕ್ಷೆ ವಿಧಿಸಿದ್ದಾರೆ.

ಅಂದು ಸೂರ್ಲಬ್ಬಿಯ ಕುಂಬಾರಗಡಿಗೆಯಲ್ಲಿ ನಡೆದಿದ್ದ ಭೀಕರ ಘಟನೆ ಏನು?

Loading...

ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಏಕೈಕ ವಿದ್ಯಾರ್ಥಿನಿಯಾಗಿದ್ದ ಮೀನಾ (16) ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಳಾಗಿ ಶಾಲೆಗೆ ಶೇ. 100ರಷ್ಟು ಫಲಿತಾಂಶ ತಂದುಕೊಟ್ಟಿದ್ದಳು. ಅದೇ ದಿನ (ಮೇ 9, 2024) ಆಕೆಗೆ ಹಮ್ಮಿಯಾಲ ಗ್ರಾಮದ 32 ವರ್ಷದ ಪ್ರಕಾಶ್ ಅಲಿಯಾಸ್ ಓಂಕಾರಪ್ಪನೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು. ಬಾಲಕಿ ಅಪ್ರಾಪ್ತೆಯಾಗಿರುವ ಮಾಹಿತಿ ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಬಾಲಕಿಗೆ 18 ವರ್ಷ ತುಂಬಿದ ಬಳಿಕವೇ ವಿವಾಹ ಮಾಡುವಂತೆ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ವಿವಾಹವನ್ನು ಮುಂದೂಡಿಸಿದ್ದರು.

ಇದರಿಂದ ತೀವ್ರ ಆಕ್ರೋಶಗೊಂಡ ಪ್ರಕಾಶ್ ಸಂಜೆ ವೇಳೆ ಮೀನಾಳ ಮನೆಗೆ ತೆರಳಿ ಪೋಷಕರೊಂದಿಗೆ ಜಗಳ ತೆಗೆದಿದ್ದಾನೆ. ತಂದೆ ಸುಬ್ರಹ್ಮಣಿ ಅವರನ್ನು ಒದ್ದು ಕೆಡವಿದ ಬಳಿಕ, ತಾಯಿ ಜಾನಕಿ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ಮನೆಯಿಂದ ಸುಮಾರು 300 ಮೀಟರ್ ದೂರದವರೆಗೆ ಮೀನಾಳನ್ನು ಎಳೆದೊಯ್ದು, ಮಚ್ಚಿನಿಂದ ಕುತ್ತಿಗೆ ಕತ್ತರಿಸಿ ರುಂಡದೊಂದಿಗೆ ಪರಾರಿಯಾಗಿದ್ದ. ಮಡಿಕೇರಿ ಆಸ್ಪತ್ರೆಯಲ್ಲಿ ತಾಯಿ ಜಾನಕಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದರು.

ಪ್ರಕರಣದ ವಿಚಾರಣೆ ವೇಳೆ ಪ್ರಕಾಶ್‌ನ ಇಬ್ಬರು ಸ್ನೇಹಿತರು ಪ್ರತಿಕೂಲ ಸಾಕ್ಷಿಗಳಾಗಿ ಬದಲಾದರೂ, ಘಟನೆಯನ್ನು ಕಣ್ಣಾರೆ ಕಂಡಿದ್ದ ತಾಯಿ ಜಾನಕಿ ಅವರ ಸಾಕ್ಷ್ಯ ಹಾಗೂ ಕೊಲೆಗೆ ಬಳಸಲಾದ ಮಚ್ಚು ಪ್ರಕರಣದಲ್ಲಿ ಪ್ರಧಾನ ಸಾಕ್ಷಿಯಾಗಿ ಪರಿಗಣನೆಯಾಯಿತು. ಸಂತ್ರಸ್ತ ಬಾಲಕಿ ಮೀನಾ ಕುಟುಂಬದ ಪರವಾಗಿ ಖಾಸಗಿಯಾಗಿ ವಾದ ಮಂಡಿಸಿದ ವಕೀಲೆ ಮುಂಡಂಡ ದಿವ್ಯಾ ನಂಜಪ್ಪ ಅವರು, ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ಅಮಾಯಕ ಬಾಲಕಿಯ ಹತ್ಯೆಗೆ ನ್ಯಾಯ ಸಿಗಬೇಕಾದರೆ ಆರೋಪಿಗೆ ಮರಣದಂಡನೆಯನ್ನೇ ವಿಧಿಸಬೇಕೆಂದು ಪ್ರಬಲವಾಗಿ ವಾದಿಸಿದ್ದರು.

ಇದನ್ನೂ ಓದಿ: ಬಾರದಹಳ್ಳಿ, ಮಾಕೋನಹಳ್ಳಿ ಬಳಿ ಬೀಡುಬಿಟ್ಟ 38 ಕಾಡಾನೆಗಳು: 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಷೇಧಾಜ್ಞೆ

ಪ್ರಕರಣ ನಡೆದ ಎರಡೂವರೆ ವರ್ಷಗಳ ಬಳಿಕ ಆರೋಪಿಯ ಕೃತ್ಯ ಸಾಬೀತಾಗಿದ್ದು, ನ್ಯಾಯಾಲಯವು ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ತೀರ್ಪಿನಿಂದ ಮೃತರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದು, ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಟ್ಟ ನ್ಯಾಯಾಂಗ ವ್ಯವಸ್ಥೆ ಹಾಗೂ ವಕೀಲರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೋಪಾಲ್​ ಸೋಮಯ್ಯ
Loading...
Unable to load recommendations.
Follow Us