22 ವರ್ಷ ನಂತರ ಕೆಜಿಎಫ್ ಚಿನ್ನದ ಗಣಿಯ ಪುನರಾರಂಭ ಸೂಚನೆ, ಆದರೆ ಆಂಧ್ರ ಸರ್ಕಾರ- ಗಣಿ ಕಾರ್ಮಿಕರ ಸಂಘರ್ಷ, ಏನಿದರ ಆಳ-ಅಗಲ?
ಗಣಿ ಪುನರಾರಂಭಿಸುವ ಸಲುವಾಗಿ ಕಾರ್ಮಿಕ ಸಂಘಟನೆಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಆದರೂ ಸರ್ಕಾರ ಹಾಗೂ ಗಣಿ ಕಾರ್ಮಿಕರ ನಡುವಿನ ಸಂಘರ್ಷ ಹಾಗೂ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಇಂದಿಗೂ ಚಿನ್ನದ ಗಣಿಯನ್ನಷ್ಟೇ ಅಲ್ಲ, ಅಲ್ಲಿರುವ ಚಿನ್ನವನ್ನು ತುಕ್ಕು ಹಿಡಿಯುವಂತೆ ಮಾಡಿರುವುದು ಸುಳ್ಳಲ್ಲ.
ಅದು ವಿಶ್ವ ಪ್ರಸಿದ್ದಿ ಪಡೆದಿರುವ ಚಿನ್ನದ ನಾಡು, ಅಲ್ಲಿ ಕೇವಲ ನೂರು ಅಡಿ ಬಗೆದರೆ ಚಿನ್ನ ಸಿಗುತ್ತಿದ್ದ (KGF Gold Mining) ಕಾಲವೊಂದಿತ್ತು. ಆದ್ರೆ 2001 ರಲ್ಲಿ ಹಲವು ಕಾರಣಗಳಿಂದ ಚಿನ್ನದ ಗಣಿಯನ್ನ ಮುಚ್ಚಲಾಯಿತು. 22 ವರ್ಷಗಳೇ ಕಳೆದರೂ ಚಿನ್ನದ ಗಣಿ ಮತ್ತೆ ಪುನರಾರಂಭಿಸುವ ಸೂಚನೆಗಳು ಮಾತ್ರ ಸಿಕ್ಕಿರಲಿಲ್ಲ. ಆದರೆ ಈಗ ಆಂಧ್ರ ಸರ್ಕಾರ ತನ್ನ ವ್ಯಾಪ್ತಿಯ ಗಣಿಯನ್ನು ಆರಂಭಿಸಲು ಮನಸ್ಸು ಮಾಡಿದೆ. ಆದರೂ ಅಲ್ಲಿ ಕಾರ್ಮಿಕರು (Labour Conflict) ಹಾಗೂ ಆಂಧ್ರ ಸರ್ಕಾರದ (Andhra Government) ಸಂಘರ್ಷ ಗಣಿ ಪುನರಾರಂಭಕ್ಕೆ ಅಡ್ಡಿಯಾಗುತ್ತಿದೆ. ಆಂಧ್ರದ ಐತಿಹಾಸಿಕ ಬಿಸ್ಸನತ್ತಂ ಹಾಗೂ ಚಿಗರಗುಂಟ ಗಣಿ ಪ್ರದೇಶ ಪಾಳು ಬಿದ್ದಿದ್ದು, ಇದೇ ಚಿನ್ನದ ಗಣಿಯನ್ನು ಪುನರಾರಂಭಿಸಲು ಆಂಧ್ರ ಸರ್ಕಾರ ಮನಸ್ಸು ಮಾಡಿದೆ. ಸದ್ಯ ಚಿನ್ನದ ನಾಡು ಕೋಲಾರದ ಕೆಜಿಎಫ್ನಲ್ಲಿ ಇಂಥಾದೊಂದು ಬೆಳವಣಿಗೆಗೆ ಕಾರಣವಾಗಿದೆ.
22 ವರ್ಷಗಳ ನಂತರ ಕೆಜಿಎಫ್ ಚಿನ್ನದ ಗಣಿಯ ಪುನರಾರಂಭವಾಗುವ ಸೂಚನೆ ಕಂಡು ಬರುತ್ತಿದೆ. ಇದು ಒಂದೆಡೆ ಕೆಜಿಎಫ್ ಚಿನ್ನದ ಗಣಿ ಕಾರ್ಮಿಕರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ರೆ, ಮತ್ತೊಂದೆಡೆ ಕಾರ್ಮಿಕರಿಗೆ ಬಾಕಿ ಇರುವ ಹಣ ಕೊಡಿ ಅನ್ನೋ ಒತ್ತಾಯ ಕೂಡಾ ಕೇಳಿಬರುತ್ತಿವೆ. ಕೋಲಾರ ಕೆಜಿಎಫ್ ಚಿನ್ನದ ಗಣಿ ಪ್ರಾರಂಭವಾಗಿದ್ದು 1880 ರಲ್ಲಿ, ಕಳೆದ 22 ವರ್ಷಗಳ ಹಿಂದೆ ನಷ್ಟದ ನೆಪವೊಡ್ಡಿ ಚಿನ್ನದ ಗಣಿಗೆ ಬೀಗಹಾಕಲಾಯಿತು.
ಆದ್ರೆ ಪ್ರಸ್ತುತ ಸರ್ಕಾರಗಳು ಇನ್ನೇನು ಗಣಿ ಪುನಾರಂಭ ಮಾಡೆ ಬಿಡುತ್ತೇವೆ ಎಂದು ಹೇಳಿಕೊಂಡು ಬೊಬ್ಬೆ ಹೊಡೆಯುತ್ತಿವೆ. ಆದರೆ ಇಲ್ಲಿಯ ನೈಜ ಚಿತ್ರಣವೇ ಬೇರೆಯಾಗಿದೆ. ಆಂಧ್ರಪ್ರದೇಶ ಸರ್ಕಾರ ತನ್ನ ವ್ಯಾಪ್ತಿಗೆ ಬರುವ 3 ಗಣಿ ಪ್ರದೇಶಗಳಾದ ಚಿಗರಗುಂಟಾ, ಬಿಸ್ಸನತ್ತಂ, ಹಾಗೂ ರಾಮಕುಪ್ಪಂ ಗಣಿ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ಪುನರಾರಂಭಿಸಲು ಹಾಗೂ ಅಲ್ಲಿರುವ ಹಾಳಾಗಿರುವ ಯಂತ್ರೋಪಕರಣಗಳನ್ನು ವಿಲೇವಾರಿ ಮಾಡಲು ಟೆಂಡರ್ ಕರೆದಿದ್ದು, ಗಣಿ ಪುನಾರಂಭದ ಮುನ್ಸೂಚನೆ ಕೊಟ್ಟಿದೆ.
ಆದ್ರೆ ರಾಜ್ಯದ ಕೆಜಿಎಫ್ ನಲ್ಲಿರುವ ಗಣಿ ಆರಂಭಕ್ಕೆ ಮಾತ್ರ ರಾಜ್ಯ ಸರ್ಕಾರಗಳು ಮೀನಾಮೇಷ ಎಣಿಸುತ್ತಿದೆ. ಸುಮಾರು 12,500 ಎಕರೆ ಪ್ರದೇಶದ ಬಿಜಿಎಂಎಲ್‌ಗೆ ಸೇರಿದ ಭೂಮಿ, ಸೈನೈಡ್ ಗುಡ್ಡಗಳು, ಅಪಾರ ಪ್ರಮಾಣದ ಗಣಿ ಸಂಪತ್ತು ಕೆಜಿಎಫ್ ನಲ್ಲಿದೆ. ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಕೇಂದ್ರ ಸರ್ಕಾರಕ್ಕೆ ಒಳಪಟ್ಟಿದ್ದು, ಇತ್ತೀಚೆಗೆ ಗ್ಲೋಬಲ್ ಟೆಂಡರ್ ಕರೆಯಲು ಭೂಮಿ ಸರ್ವೆ ಕಾರ್ಯ ಮುಗಿಸಿ ಆದಷ್ಟು ಬೇಗ ಸೈನೈಡ್ ದಿಬ್ಬಗಳ ಶುದ್ಧೀಕರಣ ಕೆಲಸ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತಾದರೂ ಅದಕ್ಕೂ ಮೊದಲು ಸದ್ಯ ಆಂಧ್ರ ಹೈಕೋರ್ಟ್ ಚಿನ್ನದ ಗಣಿಯನ್ನು ಪುನರಾರಂಭ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಹೊಸ ಬೆಳವಣಿಗೆಯಾಗಿದೆ.
ಇನ್ನು ಕೆಜಿಎಫ್ ಚಿನ್ನದ ಗಣಿಯನ್ನು ಪುನರಾರಂಭ ಮಾಡಬೇಕು ಅನ್ನೋ ಹಲವಾರು ಕಾರ್ಮಿಕರ ಸಂಘಗಳ ಹೋರಾಟಗಳು 22 ವರ್ಷದಿಂದ ನಡೆಯುತ್ತಲೇ ಬಂದಿದೆ. ಇಂದಿಗೂ ಹಲವು ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ದ ತಮ್ಮ ಹೋರಾಟವನ್ನು ನಡೆಸುತ್ತಲೇ ಇವೆ. ಈ ನಡುವೆ ಆಂಧ್ರ ಸರ್ಕಾರ ಹೈಕೋರ್ಟ್ ನಿರ್ದೇಶನದಂತೆ ಚಿನ್ನದ ಗಣಿಯನ್ನು ಪುನರಾರಂಭಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ.
ಆದರೂ 2015ರ ಕೇಂದ್ರ ಸರ್ಕಾರದ ಕ್ಯಾಬಿನೆಟ್ ನಿರ್ಧಾರದಂತೆ ಹಾಗೂ ಎಂಎಂಡಿ ಆಕ್ಟ್ ಪ್ರಕಾರ ಚಿನ್ನದ ಗಣಿಯನ್ನು ಆರಂಭಿಸುವ ಮೊದಲು ಚಿನ್ನದ ಗಣಿ ಕಾರ್ಮಿಕರ ಬಾಕಿ ವೇತನ 52 ಕೋಟಿ ರೂಪಾಯಿ ನೀಡಬೇಕು ಹಾಗೂ ಚಿನ್ನದ ಗಣಿಯ ಟೆಂಡರ್ ಪ್ರಕ್ರಿಯೆ ಅಥವಾ ಮಾರಾಟದಲ್ಲಿ ಚಿನ್ನದ ಗಣಿ ಕಾರ್ಮಿಕ ಸಂಘಟನೆಗಳಿಗೆ ಮೊದಲ ಆದ್ಯತೆ ನೀಡಬೇಕು ಅನ್ನೋ ನಿರ್ದೇಶನ ನೀಡಿದೆ.
ಆದರೆ ಕೆಜಿಎಫ್ ಚಿನ್ನದ ಗಣಿ ಪ್ರದೇಶ ಆಂಧ್ರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಹಂಚಿಹೋಗಿದ್ದರೂ ಕೂಡಾ ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಕ್ಯಾಬಿನೆಟ್ ನಿರ್ಧಾರ ಎರಡೂ ರಾಜ್ಯಗಳಿಗೂ ಅನ್ವಯವಾಗುತ್ತದೆ. ಹಾಗಾಗಿ ಆಂದ್ರ ಪ್ರದೇಶದ ಹೈಕೋರ್ಟ್ ನೀಡಿರುವ ಆದೇಶ ಒಪ್ಪುವಂತಹದ್ದಲ್ಲ. ಮೊದಲು ಕಾರ್ಮಿಕರಿಗೆ ಬಾಕಿ ಇರುವ ವೇತನ ಇತ್ಯರ್ಥ ಮಾಡಿದ ನಂತರವಷ್ಟೇ ಚಿನ್ನದ ಗಣಿಯನ್ನು ಪುನರಾರಂಭ ಮಾಡುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಕಾರ್ಮಿಕ ಸಂಘಟನೆಗಳು ಹೇಳಿವೆ. ಹಾಗಾಗಿ ಕೇಂದ್ರ ಸರ್ಕಾರದ ಒಡೆತನದ ಚಿನ್ನದ ಗಣಿ ಹಾಗೂ ಕಾರ್ಮಿಕ ನಡುವಿನ ಸಂಘರ್ಷ ಮಾತ್ರ 23 ವರ್ಷಗಳೇ ಕಳೆದರೂ ಕೂಡಾ ಸೌಹಾರ್ದಯುತವಾಗಿ ಬಗೆಹರೆಯುವ ಲಕ್ಷಣಗಳು ಕಾಣುತ್ತಿಲ್ಲ.
ಒಟ್ಟಾರೆ ಚಿನ್ನದ ಗಣಿ ಮುಚ್ಚಿದ ನಂತರ ಗಣಿ ಪುನರಾರಂಭಿಸುವ ಸಲುವಾಗಿ ಕಾರ್ಮಿಕ ಸಂಘಟನೆಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಆದರೂ ಸರ್ಕಾರ ಹಾಗೂ ಗಣಿ ಕಾರ್ಮಿಕರ ನಡುವಿನ ಸಂಘರ್ಷ ಹಾಗೂ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಇಂದಿಗೂ ಚಿನ್ನದ ಗಣಿಯನ್ನಷ್ಟೇ ಅಲ್ಲ ಅಲ್ಲಿರುವ ಚಿನ್ನವನ್ನು ತುಕ್ಕು ಹಿಡಿಯುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.
ಕೆಜಿಎಫ್ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ