ಬೆಸ್ಕಾಂ ಗೋಲ್ಮಾಲ್: ಕೋಟ್ಯಂತರ ರೂ. ಅವ್ಯವಹಾರ ಆರೋಪ, ಕೋಲಾರದಲ್ಲಿ ಪ್ರಕರಣ ದಾಖಲು
ವಿದ್ಯುತ್ ಪರಿಕರಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಮಾರಾಟ ಮಾಡಿರುವ ಆರೋಪದಲ್ಲಿ ಮೂವರು ಬೆಸ್ಕಾಂ ಎಂಜಿನಿಯರ್ ಸೇರಿ ಹಲವು ಸಿಬ್ಬಂದಿ ವಿರುದ್ದ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಗರಣದಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಆರೋಪವಿದ್ದು, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ.

ಕೋಲಾರ, ಆಗಸ್ಟ್ 4: ವಿದ್ಯುತ್ ತಂತಿ ಹಾಗೂ ಬೆಲೆ ಬಾಳುವ ವಿದ್ಯುತ್ ಪರಿಕರಗಳನ್ನು ಕಳ್ಳತನ ಮಾಡಿ ಯಾವುದೇ ಟೆಂಡರ್ ಇಲ್ಲದೆ ಮಾರಾಟ ಮಾಡಿರುವ ಹಗರಣದ ಆರೋಪ ಬೆಸ್ಕಾಂ (BESCOM) ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಮೂವರು ಎಂಜಿನಿಯರ್‌ಗಳು ಸೇರಿದಂತೆ ಇತರೆ ಸಿಬ್ಬಂದಿ ವಿರುದ್ದ ಕೋಲಾರ (Kolar) ನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಬೆಸ್ಕಾಂ ಉಗ್ರಾಣದ ಎಂಜಿನಿಯರ್‌ಗಳಾದ ಕರಿಮುಲ್ಲಾ ಹುಸೇನಿ, ನಹೀದ್ ಪಾಷಾ, ಜನಾರ್ದನ್ ಹಾಗೂ ಮತ್ತಿತ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ ಸೇರಿದ ಕೋಲಾರ ಕಾರ್ಯನಿರ್ವಾಹಕ ಎಂಜಿನಿಯರ್ ಆಡಳಿತ ವಿಭಾಗದ ಬೆಂಗಳೂರು ಮುಖ್ಯರಸ್ತೆಯಲ್ಲಿರುವ ಉಗ್ರಾಣದಲ್ಲಿ 2.10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿದ್ಯುತ್ ಪರಿಕರ, ಸಾಮಗ್ರಿ ದರೋಡೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅದಕ್ಕೆ ಬೇಕಾದ ಅಗತ್ಯ ವಿಡಿಯೋಗಳು ಸೇರಿದಂತೆ ಹಲವು ದಾಖಲೆಗಳನ್ನು ನೀಡಲಾಗಿದೆ.
ಉಗ್ರಾಣದಿಂದ ವಾಹನಗಳಲ್ಲಿ ವಸ್ತುಗಳನ್ನು ದರೋಡೆ ಮಾಡಿ ಮಾರಾಟ ಮಾಡಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ದೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಒತ್ತಾಯಿಸಿದ್ದು, ಅದರಂತೆ ಪೊಲೀಸರು ದೂರು ದಾಖಲಿಸಿಕೊಂಡು ಬೆಸ್ಕಾಂ ವಿಭಾಗೀಯ ಕಚೇರಿಗೆ ಪ್ರಾಥಮಿಕ ವಿಚಾರಣೆಗೆ ನೋಟಿಸ್ ಕಳುಹಿಸಿದ್ದರು. ಆದರೆ, ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಸ್ಕಾಂ ಅವ್ಯವಹಾರ: ಆರೋಪಿಗಳು ನಾಪತ್ತೆ
ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮೂವರು ಎಂಜಿನಿಯರ್‌ಗಳ ಜೊತೆಗೆ 15 ಕ್ಕೂ ಹೆಚ್ಚು ಸಿಬ್ಬಂದಿ, ನೌಕರರು, ಹೊರಗುತ್ತಿಗೆ ಸಿಬ್ಬಂದಿ, ಸಂಸ್ಥೆಯ ವಾಹನ ಚಾಲಕರು ಶಾಮೀಲಾಗಿದ್ದಾರೆ. ಮಾತ್ರವಲ್ಲದೆ ಬೆಸ್ಕಾಂನ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಕೋಲಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಆರಂಭವಾಗಲಿದೆ ಮಿನಿ ಹೆಲಿಕಾಪ್ಟರ್ ನಿರ್ಮಾಣ ಮಾಡುವ ಟಾಟಾ ಕಂಪನಿ ಘಟಕ
ಬೆಸ್ಕಾಂ ಅವ್ಯವಹಾರ ಅರೋಪದ ಬಗ್ಗೆ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ಸಂಸದ ಮಲ್ಲೇಶ್ ಬಾಬು, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲೇ ಲೋಕಾಯುಕ್ತ ದಾಳಿಗಳು ಹೆಚ್ಚಾಗಿದ್ದು, ಬೆಸ್ಕಾಂ ಮಾತ್ರವಲ್ಲ ಜಿಲ್ಲೆಯ ಹಲವು ಇಲಾಖೆಗಳಲಲಿ ಇದೆ ರೀತಿ ಅಕ್ರಮಗಳು ನಡೆದಿದೆ ಎಂದು ಟೀಕಿಸಿದ್ದಾರೆ.




