ಕೋಲಾರ: ಮಹಿಳೆಯ ಕಾಲು ಬಿಟ್ಟು ದೇಹವೆಲ್ಲ ಸುಟ್ಟಿದ್ದ ಆರೋಪಿಯಿಂದ ಬಯಲಾಯ್ತು ಬ್ಯುಟಿಯ ಸಾವಿನ ರಹಸ್ಯ
ಜೀವನಕ್ಕಾಗಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಹಾಗೂ ತನ್ನ ಎರಡನೇ ಗಂಡನ ಸ್ನೇಹಿತನ ಜೊತೆಗೆ ಪಾಟ್ನರ್ ಶಿಪ್ನಲ್ಲಿ ಕೃಷಿ ಮಾಡ್ತಿದ್ದ ಮಹಿಳೆ ಗುರುತು ಕೂಡ ಸಿಗದ ಹಾಗೆ ಕೊಲೆಯಾಗಿದ್ದು ಆರೋಪಿ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.
ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಸುಟ್ಟು ಹಾಕಲಾಗಿದೆ. ಸದ್ಯ ಕೊಲೆಯ ಹಿಂದಿರುವ ಸತ್ಯ ಬಯಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ತನ್ನ ಜೀವನಕ್ಕಾಗಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಹಾಗೂ ತನ್ನ ಎರಡನೇ ಗಂಡನ ಸ್ನೇಹಿತನ ಜೊತೆಗೆ ಪಾಟ್ನರ್ ಶಿಪ್ನಲ್ಲಿ ಕೃಷಿ ಮಾಡ್ತಿದ್ದ ಮಹಿಳೆ ಗುರುತು ಕೂಡ ಸಿಗದ ಹಾಗೆ ಕೊಲೆಯಾಗಿದ್ದಾರೆ.
ಮಾರ್ಚ್-07ರ ಬೆಳ್ಳಂಬೆಳಿಗ್ಗೆ ಕೋಲಾರ ಎಸ್ಪಿ ಅವರ ಫೋನ್ಗೆ ಶ್ರೀನಿವಾಸಪುರ ಪಟ್ಟಣದಿಂದ ವೆಂಕಟರಮಣ ಎಂಬ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಕರೆ ಮಾಡಿ ತನ್ನ ಹೆಂಡತಿ ಭಾನುವಾರದಿಂದ ನಾಪತ್ತೆಯಾಗಿದ್ದಾಳೆ ಎಂದು ಹೇಳಿದ್ದಾರೆ. ಈ ವೇಳೆ ಎಸ್ಪಿ ನಾರಾಯಣ್ ಅವರು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ತಿಳಿಸಿದ್ದಾರೆ. ಅದರಂತೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಶೋಭಾ ಎಂಬ ಮಹಿಳೆಯ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಅತ್ತ ಕೋಲಾರ ಜಿಲ್ಲೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ ಇನ್ನು ಒಂದು ಗಂಟೆ ಕೂಡಾ ಕಳೆದಿರಲಿಲ್ಲ. ಈ ವೇಳೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಲೋಕೇಶ್ ಕುಮಾರ್ ಅವರಿಂದ ಎಸ್ಪಿ ನಾರಾಯಣ್ ಅವರಿಗೆ ಮಾಹಿತಿಯೊಂದು ಸಿಕ್ಕಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಾಯಕರಹಳ್ಳಿ ಗ್ರಾಮದ ಬಳಿಯಲ್ಲಿ ಅಪರಿಚಿತ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದೆ. ಆಕೆಯ ಕಾಲು ಹೊರತು ಪಡಿಸಿ ಇಡೀ ದೇಹ ಸಂಪೂರ್ಣವಾಗಿ ಸುಟ್ಟುಹಾಕಲಾಗಿದೆ ಮೃತಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಅನ್ನೋ ಮಾಹಿತಿ ನೀಡಿದ್ದರು. ಈ ವೇಳೆ ಎಸ್ಪಿ ನಾರಾಯಣ್ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದ ವೆಂಕಟರಮಣ ಎಂಬುವರಿಗೆ ಕರೆ ಮಾಡಿ ಅಲ್ಲಿನ ಶವದ ಗುರುತು ಪತ್ತೆ ಮಾಡುವಂತೆ ತಿಳಿಸಿದ್ದರು. ತಕ್ಷಣವೇ ನಾಯಕರಹಳ್ಳಿ ಅರಣ್ಯ ಪ್ರದೇಶಕ್ಕೆ ಹೋಗಿ ನೋಡಿದ ವೆಂಕಟರಮಣ ಸುಟ್ಟ ಶವದ ಮೇಲಿದ್ದ ಕಾಲುಂಗುರ ಹಾಗೂ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಗುರುತು ಹಚ್ಚಿದ ವೆಂಕಟರಮಣ ಇದು ತನ್ನ ಪತ್ನಿ ಶೋಭಾ ಅವರದ್ದೇ ಶವ ಎಂದು ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ಆಕೆಯ ಮೊಬೈಲ್ ಫೋನ್ ಕೂಡಾ ಅಲ್ಲೇ ಸಮೀಪದಲ್ಲಿ ಪತ್ತೆಯಾಗಿತ್ತು.
ಕೆಲವೇ ಗಂಟೆಗಳಲ್ಲಿ ನಾಪತ್ತೆ ಪ್ರಕರಣ ಹಾಗೂ ಕೊಲೆಯಾಗಿದ್ದ ಅಪರಿಚಿತ ಶವದ ಗುರುತು ಸಹ ಪತ್ತೆಯಾಗಿ ಹೋಗಿತ್ತು. ಆದರೆ ಪೊಲೀಸರಿಗೆ ಮುಖ್ಯವಾಗಿ ಉಳಿದಿದ್ದ ಪ್ರಶ್ನೆ ಎಂದರೆ ಈಕೆಯನ್ನು ಕೊಲೆ ಮಾಡಿದ್ದು ಯಾರು ಅನ್ನೋದು. ತಕ್ಷಣವೇ ಪೊಲೀಸರು ಕೊಲೆಯಾಗಿದ್ದ ಮಹಿಳೆ ಪತಿ ವೆಂಕಟರಮಣನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವೆಂಕಟರಮಣ ತನ್ನ ಪತ್ನಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದ.
ಮಹಿಳೆ ಕೊಲೆ ನಡೆದದ್ದೇಕೆ?
ಕೊಲೆಯಾದ ಶೋಭಾ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಬಲ್ಲ ಗ್ರಾಮದವರು. ಈಕೆಗೆ ಕಳೆದ ಹತ್ತು ಹನ್ನೆರಡು ವರ್ಷಗಳ ಹಿಂದೆ ಆಂಧ್ರದ ಮದನಪಲ್ಲಿ ಹುಡುಗನೊಂದಿಗೆ ಮದುವೆ ಮಾಡಲಾಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಆಕೆಯ ಗಂಡ ಸಾವನ್ನಪ್ಪಿದ್ದ ಇದಾದ ನಂತರ ಶೋಭಾ ತನ್ನ ಎರಡು ಮಕ್ಕಳೊಂದಿಗೆ ಶ್ರೀನಿವಾಸಪುರ ಪಟ್ಟಣಕ್ಕೆ ಬಂದು ನೆಲೆಸಿದ್ದರು. ಶ್ರೀನಿವಾಸಪುರ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸಿಕೊಂಡು, ಕೆಲವೊಂದು ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡಿ ಕೊಂಡು ಬದುಕುತ್ತಿದ್ದರು. ಹೀಗಿರುವಾಗಲೇ ಶ್ರೀನಿವಾಸಪುರ ತಾಲ್ಲೂಕು ಪೆದ್ದಪಲ್ಲಿ ಗ್ರಾಮದ ವೆಂಕಟರಮಣ ಎಂಬುವನ ಪರಿಚಯವಾಗಿ ಆತನನ್ನು 2ನೇ ಮದುವೆಯಾಗಿದ್ದರು. ವೆಂಕಟರಮಣಗೆ ಬೇರೆ ಮದುವೆಯಾಗಿ ಮಕ್ಕಳಿದ್ದರೂ ಆದರೂ ಈಕೆಯನ್ನು ಎರಡನೇ ಮದುವೆ ಮಾಡಿಕೊಂಡಿದ್ದ. ಆದರೆ ಇತ್ತೀಚೆಗೆ ಕಳೆದ ಕೆಲವು ತಿಂಗಳುಗಳಿಂದ ತನ್ನ ಸ್ನೇಹಿತ ರಮೇಶ್ ಎಂಬುವನ ಜೊತೆಗೆ ಶೋಭಾ ಹೆಚ್ಚಾಗಿ ಇರುತ್ತಿದ್ದರು. ಅಲ್ಲದೆ ಭಾನುವಾರ ಕೂಡಾ ಅವನೊಂದಿಗೆ ಇದ್ದದ್ದುನ್ನು ನಾನು ನೋಡಿದ್ದೆ ಎಂದು ವೆಂಕಟರಮಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ವೇಳೆ ಪೊಲೀಸರ ಗಮನ ಸಂಪೂರ್ಣವಾಗಿ ರಮೇಶನ ಮೇಲೆ ತಿರುಗಿತ್ತು. ತಕ್ಷಣ ರಮೇಶ್ ಎಲ್ಲಿದ್ದಾನೆ ಎಂದು ಹುಡುಕಿದ ಪೊಲೀಸರಿಗೆ, ರಮೇಶ್ ತಲೆಮರೆಸಿಕೊಂಡು ಬೆಂಗಳೂರಿನತ್ತ ಹೊರಡಲು ಸಿದ್ದವಾಗಿದ್ದ ಅಷ್ಟೊತ್ತಿಗೆ ಕಾರ್ಯ ಪ್ರೌರುತ್ತರಾದ ಪೊಲೀಸರು ಕೂಡಲೇ ರಮೇಶ್ನನ್ನು ವಶಕ್ಕೆ ಪಡೆದಿದ್ದರು.
ರಮೇಶನಿಗೂ ಕೊಲೆಯಾದ ಶೋಭಾಗೂ ಏನು ಸಂಬಂಧ?
ಶೋಭಾ ಹಾಗೂ ವೆಂಕಟರಮಣ ನಡುವೆ ಸಂಸಾರ ನಡೆದುಕೊಂಡು ಹೋಗುತ್ತಿರುವಾಗಲೇ ಶೋಭಾ ತನ್ನ ಬ್ಯೂಟಿ ಪಾರ್ಲರ್, ಕೆಲವೊಂದು ಸ್ತ್ರೀಶಕ್ತಿ ಸಂಘ, ರೈತ ಸಂಘದಲ್ಲೂ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದರು. ಇನ್ನು ವೆಂಕಟರಮಣ ತನ್ನ ಸ್ನೇಹಿತ ರಮೇಶ್ ಎಂಬುವರ ಜೊತೆಗೆ ಪಾಟ್ನರ್ ಶಿಪ್ನಲ್ಲಿ ವ್ಯವಸಾಯ ಮಾಡುತ್ತಿದ್ದರು. ರಮೇಶ್ಗೆ ಶ್ರೀನಿವಾಸಪುರ ಆವಲಕುಪ್ಪ ಗ್ರಾಮದ ಬಳಿಯಲ್ಲಿ ಒಂದಷ್ಟು ಜಮೀನಿತ್ತು ಅದರಲ್ಲಿ ಟೊಮ್ಯಟೋ ಸೇರಿದಂತೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದರು, ಈವಿಷಯ ಗೊತ್ತಿದ್ದ ಶೋಭಾ ತಾನು ಕೂಡಾ ಅವರ ಜೊತೆಗೆ ಸೇರಿ ಕೃಷಿಯಲ್ಲಿ ಒಂದಷ್ಟು ಬೆಳೆ ಬೆಳೆದು ಹಣ ಸಂಪಾದನೆ ಮಾಡಬೇಕು ಎಂದು ಇವರ ಜೊತೆಗೆ ತಾನೂ ಸೇರಿಕೊಂಡಿದ್ದರು. ಹೀಗಿರುವಾಗಲೇ ಕೃಷಿ ಮಾಡೋದಕ್ಕಾಗಿ ಒಂದಾಗಿದ್ದ ವೆಂಕಟರಮಣ, ರಮೇಶ್, ಹಾಗೂ ಶೋಭಾ ದಿನ ಕಳೆದಂತೆ ಶೋಭಾ ಹಾಗೂ ರಮೇಶ್ ನಡುವೆ ವೆಂಕಟರಮಣನಿಗೆ ಗೊತ್ತಿಲ್ಲದಂತೆ ಸಲುಗೆ ಶುರುವಾಗಿತ್ತು. ಇಬ್ಬರ ನಡುವೆ ಅಕ್ರಮ ಸಂಬಂಧ ಶುರುವಾಗಿತ್ತು. ಶೋಭಾಗೆ ಏನಾದರೂ ಬೇಕೆಂದಾಗ ರಮೇಶ್ ಹಣ ಕೊಡುವುದು, ಬೇಕಾದನ್ನು ಕೊಡಿಸುವುದು ಹೀಗೆ ನಡೆದುಕೊಂಡು ಹೋಗುತ್ತಿತ್ತು.
ವೆಂಕಟರಮಣ ಕಣ್ಣು ತಪ್ಪಿಸಿ ಇಬ್ಬರೂ ಅಲ್ಲಿ ಇಲ್ಲಿ ಹೋಗೋದು, ವೆಂಕಟರಮಣ ತನ್ನ ಮೊದಲ ಹೆಂಡತಿ ಮನೆಗೆ ಹೋದಾಗ ರಮೇಶ ಶೋಭಾ ಮನೆಗೆ ಬಂದು ಹೋಗೋದು ಇಲ್ಲಾ ರಮೇಶ್ ತೋಟದ ಮನೆಗೆ ಶೋಭಾ ಹೋಗೋದು ಹೀಗೆ ಇಬ್ಬರ ನಡುವೆ ಸಂಬಂಧ ನಡೆದುಕೊಂಡು ಹೋಗುತ್ತಿತ್ತು ಹೀಗಿರುವಾಗಲೇ. ಕೆಳೆದ ಕೆಲವು ದಿನಗಳಿಂದ ರಮೇಶ್ ಹಾಗೂ ಶೋಭಾರ ಸಂಬಂಧ ಹಳಸಿತ್ತು. ಶೋಭಾ ರಮೇಶ್ನನ್ನು ಬಿಟ್ಟು ಬೇರೆ ಯಾರದೊ ಜೊತೆಗೆ ಹೋಗುತ್ತಿದ್ದಾಳೆ ಅನ್ನೋ ಅನುಮಾನ ರಮೇಶ್ಗೆ ಶುರುವಾಗಿತ್ತು. ಅದರ ಜೊತೆಗೆ ಶೋಭಾ ರಮೇಶ್ ಬಳಿ ತನಗೆ ಹಣ ಬೇಕೆಂದು ಪದೇ ಪದೇ ಡಿಮ್ಯಾಂಡ್ ಮಾಡಿದ್ದಾರೆ. ಹಲವು ಬಾರಿ ಹಣಕೊಟ್ಟಿದ್ದ ರಮೇಶ್ ಕೊನೆಗೆ ತನ್ನ ಬಳಿ ಹಣ ಇಲ್ಲಾ ಎಂದಾಗ ರಮೇಶನಿಗೆ ಬೆದರಿಸಿದ್ದಾರೆ, ನನ್ನ ನಿನ್ನ ಸಂಬಂಧ ನಿಮ್ಮ ಮನೆಯವರಿಗೆ ಹೇಳೋದಾಗಿ ಶೋಭಾ ಹೆದರಿಸಿದ್ದಾರೆ. ಇದರಿಂದ ಹೆದರಿದ ರಮೇಶ್ ಆಕೆಯನ್ನು ಮುಗಿಸಿಬಿಡುವ ನಿರ್ಧಾರಕ್ಕೆ ಬಂದಿದ್ದಾನೆ. ಅದರಂತೆ ಮಾರ್ಚ್-5 ರಂದು ಶೋಭಾಳನ್ನು ತನ್ನ ತೋಟದ ಮನೆಗೆ ಕರೆಸಿಕೊಂಡು ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ.
ವಿಚಾರಣೆ ವೇಳೆ ಆರೋಪಿ ರಮೇಶ್ ಹೇಳಿದ್ದೇನು?
ಸದ್ಯ ರಮೇಶ್ ಪೊಲೀಸರ ವಶದಲ್ಲಿದ್ದು ವಿಚಾರಣೆ ವೇಳೆ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ತನ್ನ ತೋಟದ ಮನೆಯಲ್ಲಿ ಇಬ್ಬರ ನಡುವೆ ಜೋರಾದ ಜಗಳ ನಡೆದಿದ್ದು ಹೊಡೆದಾಟ ನಡೆದಿದೆ. ಈವೇಳೆ ಇಬ್ಬರ ನಡುವೆ ಜಗಳ ಅತಿಯಾದಾಗ ರಮೇಶ್, ಅಲ್ಲಿದ್ದ ಕೆಲವರ ಸಹಾಯ ಪಡೆದುಕೊಂಡು ಆಕೆಯ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ. ನಂತರ ಅಲ್ಲೇ ಇದ್ದ ಪಾಲಿಥಿನ್ ಕವರ್ನಲ್ಲಿ ಶವವನ್ನು ಸುತ್ತಿ ತನ್ನ ಕಾರ್ನ ಡಿಕ್ಕಿಯಲ್ಲಿ ಹಾಕಿದ್ದಾನೆ. ನಂತರ ರಾತ್ರಿಯಾಗುವುದನ್ನೇ ಕಾದುಕೊಂಡಿದ್ದ ರಮೇಶ್ ಹಾಗೂ ಆತನ ಸ್ನೇಹಿತರು, ರಾತ್ರಿ ಹನ್ನೆರಡು ಗಂಟೆಯಾದ ನಂತರ ಕುಡಿಯೋದಕ್ಕೆ ಒಂದಷ್ಟು ಬಿಯರ್ ಬಾಟಲ್, ಪೆಟ್ರೋಲ್ ಎಲ್ಲವನ್ನು ತೆಗೆದುಕೊಂಡು ಸೀದಾ ನಾಯಕರಹಳ್ಳಿ ಅರಣ್ಯ ಪ್ರದೇಶದ ನಿರ್ಜನ ಜಾಗಕ್ಕೆ ತೆರಳಿ ಶವವನ್ನು ಸುಟ್ಟುಹಾಕಿದ್ದಾರೆ. ಅತ್ತ ಶವ ಸುಡುತ್ತ ಒಂದು ಕಡೆ ಕೂತು ಕುಡಿದು ಶವ ಬಹುತೇಕ ಸುಟ್ಟ ನಂತರ ಅಲ್ಲಿದ್ದ ರಮೇಶ್ ಹಾಗೂ ಆತನ ಸ್ನೇಹಿತರು ಹೊರಟು ಹೋಗಿದ್ದಾರೆ ನಂತರ ಮಂಗಳವಾರ ನಾಯಕರಹಳ್ಳಿ ಗ್ರಾಮದ ಕುರಿಗಾಹಿಗಳು ಬಂದು ನೋಡಿದ ನಂತರ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರವೇ ಇಡೀ ಪ್ರಕರಣ ಬಯಲಾಗಿದೆ, ಜೊತೆಗೆ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:24 pm, Sat, 11 March 23