ಕೋಲಾರ: ಹಬ್ಬಕ್ಕೂ ಮುನ್ನವೇ ಪೊಲೀಸರಿಂದ ದೀಪಾವಳಿ: ಲಾಂಗು, ಮಚ್ಚು ಅಂದೋರಿಗೆ ಬುಲೆಟ್ ಮೂಲಕ ಉತ್ತರ!
ಕೋಲಾರದಲ್ಲಿ ಕೇವಲ ಮೂರು ದಿನಗಳ ಅಂತರದಲ್ಲಿ ಎರಡನೇ ಶೂಟ್ ಔಟ್ ಪ್ರಕರಣ ನಡೆದಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಮೇಲೆ ಫೈರಿಂಗ್ ಮಾಡಲಾಗಿದೆ. ಆ ಮೂಲಕ ಪೊಲೀಸರಿಂದ ದೀಪಾವಳಿಗೂ ಮುನ್ನವೇ ಆರೋಪಿಗಳ ಮೇಲೆ ಫೈರಿಂಗ್ ಮಾಡುವ ಮೂಲಕ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ನಿದ್ದೆಗೆಡಿಸಿದ್ದಾರೆ.
ಕೋಲಾರ, ಅಕ್ಟೋಬರ್ 27: ಪೊಲೀಸರಿಂದ ದೀಪಾವಳಿಗೂ ಮುನ್ನವೇ ಆರೋಪಿಗಳ ಮೇಲೆ ಫೈರಿಂಗ್ (firing) ಮಾಡುವ ಮೂಲಕ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ನಿದ್ದೆಗೆಡಿಸಿದ್ದಾರೆ. ಕೇವಲ ಮೂರು ದಿನಗಳ ಅಂತರದಲ್ಲಿ ಎರಡನೇ ಬಾರಿ ಬೇರೆ ಬೇರೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರ ವಿರುದ್ದ ಬಾಲ ಬಿಚ್ಚಿದ ಆರೋಪಿಗಳ ಮೇಲೆ ಫೈರಿಂಗ್ ಮಾಡಲಾಗಿದ್ದು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಕಂಟ್ರೋಲ್ಗೆ ಪೊಲೀಸರು ಮುಂದಾಗಿದ್ದಾರೆ.
ಡಕಾಯತರ ಚಳಿ ಬಿಡಿಸಿದ ಕೋಲಾರ ಪೊಲೀಸ್: ಆರೋಪಿಗಳ ಮೇಲೆ ಫೈರಿಂಗ್!
ಕೋಲಾರದಲ್ಲಿ ಕೇವಲ ಮೂರು ದಿನಗಳ ಅಂತರದಲ್ಲಿ ಎರಡನೇ ಶೂಟ್ ಔಟ್ ಪ್ರಕರಣ ನಡೆದಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಮೇಲೆ ಫೈರಿಂಗ್ ಮಾಡಲಾಗಿದೆ. ಕೋಲಾರದ ಮಾಲೂರು ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದಿದ್ದ ಡಕಾಯತಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಮೇಲೆ ಮಾಸ್ತಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅಸ್ಸಾಂ ಮೂಲದ ಸುಹೇಬ್ ಹಾಗೂ ಶ್ಯಾಮ್ ಸುಹೇಲ್ ಮೇಲೆ ಫೈರಿಂಗ್ ನಡೆದಿದೆ. ಡಕಾಯತಿ ಪ್ರಕರಣದಲ್ಲಿ ಒಟ್ಟು ಹನ್ನೊಂದು ಜನ ಆರೋಪಿಗಳಿದ್ದು ಆಪೈಕಿ ಹತ್ತು ಜನರನ್ನು ಬಂಧಿಸಿರುವ ಪೊಲೀಸರು ಉಳಿದ ಒಬ್ಬನಿಗಾಗಿ ಬಲೆ ಬೀಸಿದ್ದಾರೆ.
ನಿನ್ನೆ ರಾತ್ರಿ ಇಬ್ಬರು ಆರೋಪಿಗಳು ಕೋಲಾರ ತಾಲ್ಲೂಕಿನ ಸಂಗೊಂಡಹಳ್ಳಿ ಗ್ರಾಮದ ಬಳಿ ಇರುವ ಮಾಹಿತಿ ಹಿಡಿದು ವೇಮಗಲ್ ಸಬ್ಇನ್ಸ್ಪೆಕ್ಟರ್ ಹೇಮಂತ್ ಹಾಗೂ ಸಿಬ್ಬಂದಿಗಳಾದ ನಿಖಿಲ್ ಮತ್ತು ವಿಶ್ವನಾಥ್ ಅವರನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ಆರೋಪಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ, ನಂತರ ಸುನಿಲ್ ಅವರ ಮೇಲೆ ಹಲ್ಲೆಗೆ ಮುಂದಾದಾಗ ಸಿಪಿಐ ಸುನಿಲ್ ಕುಮಾರ್ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಈ ಘಟನೆಯಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ತಗುಲಿದ್ದು ಆರೋಪಿಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ ಆರೋಪಿಗಳಿಂದ ಹಲ್ಲೆಗೊಳಗಾದ ಪೊಲೀಸರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂರೇ ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಫೈರಿಂಗ್, ಪೊಲೀಸರಿಂದ ದೀಪಾವಳಿ!
ಕೋಲಾರ ಜಿಲ್ಲೆಯಲ್ಲಿ ಮೂರೇ ದಿನದಲ್ಲಿ ಇದು ಎರಡನೇ ಬಾರಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಶ್ರೀನಿವಾಸಪುರದ ಕಾಂಗ್ರೇಸ್ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣದ ಆರೋಪಿಗಳಾದ ವೇಣುಗೋಪಾಲ್ ಮತ್ತು ಮುನೇಂದ್ರ ಮೇಲೆ ಫೈರಿಂಗ್ ಮಾಡಿದ್ದ ಪೊಲೀಸರು ಈಗ ಮತ್ತೆ ಡಕಾಯತಿ ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಈ ಮೂಲಕ ಕೋಲಾರದಲ್ಲಿ ಕಳೆದ ಮೂರು ತಿಂಗಳಂದ ಹೆಚ್ಚಾಗಿದ್ದ ಕೊಲೆ ಹಾಗೂ ಡಕಾಯತಿ ಪ್ರಕರಣಳಿಗೆ ಕಡಿವಾಣ ಹಾಕುವಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ಸುಕ್ತ ಸಂದೇಶ ರವಾನಿಸಿದ್ದಾರೆ.
ಏನಿದು ಡಕಾಯತಿ ಪ್ರಕರಣ, ಆರೋಪಿಗಳು ಯಾರು?
ಅಕ್ಟೋಬರ್-21 ರಂದು ಮಾಲೂರು ಮತ್ತು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಎರಡು ಡಕಾಯಿತಿ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಹತ್ತು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ಟೋಬರ್ 21 ರಂದು ಸುಮಾರು 11 ಜನ ಆರೋಪಿಗಳ ತಂಡ ತೀರ್ಥಬಂಡಟ್ಟಿ ದೇವಾಲಯದ ಅರ್ಚಕರಾದ ಸುಬ್ಬನರಸಯ್ಯಶಾಸ್ತ್ರಿ ಅವರ ಒಂಟಿ ಮನೆಯಲ್ಲಿ ಹಣವಿರುವ ಮಾಹಿತಿ ಮೇರೆಗೆ ಡಕಾಯತಿ ಮಾಡಿದ್ದರು ಆದರೆ ಮನೆಯಲ್ಲಿ ಕೇವಲ 1500 ರೂಪಾಯಿ ಹಣ ಮಾತ್ರ ಸಿಕ್ಕ ಹಿನ್ನೆಲೆಯಲ್ಲಿ ಮನೆಯಲ್ಲಿದ್ದವರ ಮೇಲೆ ಹಾರೆ, ಗುದ್ದಲಿ, ಪಿಕಾಸಿಗಳಿಂದ ಹಲ್ಲೆ ಮಾಡಿ ಮನೆಯಲ್ಲಿ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದರು.
ನಂತರ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೆಟ್ಟಕೋಡಿ ಬಳಿ ಗುಟ್ಕಾ ಅಂಗಡಿಯಲ್ಲಿ ಡಕಾಯತಿ ಮಾಡಿ ಸುಮಾರು 15 ಲಕ್ಷ ರೂ ಮೌಲ್ಯದ ಗುಟ್ಕಾವನ್ನು ಕಳ್ಳತನ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಹತ್ತು ಜನರನ್ನು ಬಂಧಿಸಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಬೇಕಿದೆ.
ಅಂತರಾಜ್ಯ ಅಸ್ಸಾಂ ಮೂಲದ ಈ ಡಕಾಯಿತಿ ಟೀಂ ನಲ್ಲಿ 6 ಜನ ಅಸ್ಸಾಂ ಮೂಲದವರಿದ್ದು, ನಾಲ್ಕು ಜನ ಕರ್ನಾಟಕದವರಿದ್ದಾರೆ. ಈ ಪೈಕಿ ಜ್ಯೋತಿ ಎಂಬ ಮಹಿಳೆ, ಹಾಗೂ ಖಾಸಗಿ ಚಾನಲ್ ಒಂದರಲ್ಲಿ ಕೆಲಸ ಮಾಡುವ ಮಧು ಎಂಬಾತನನ್ನು ಬಂಧಿಸಿದ್ದಾರೆ. ಅಸ್ಸಾಂ ಮೂಲದವರೆಲ್ಲರೂ ಅಸ್ಸಾಂನವರಾ ಅಥವಾ ಬಾಂಗ್ಲಾದ ವಲಸಿಗರ ಅನ್ನೋ ಅನುಮಾನ ಪೊಲೀಸರಲ್ಲಿದ್ದು ಕುರಿತು ಕೇಂದ್ರ ಗೃಹ ಇಲಾಖೆಯಿಂದ ಮಾಹಿತಿಗೆ ಪತ್ರ ಬರೆಯಲಾಗಿದೆ. ಸದ್ಯ ಆರೋಪಿಗಳ ಆಧಾರ್ ಕಾರ್ಡ್ ಆಧರಿಸಿ ಪರಿಶೀಲನೆ ನಡೆಸಲಾಗುತ್ತಿದೆ ಅನ್ನೋದು ಕೋಲಾರ ಎಸ್ಪಿ ಎಂ.ನಾರಾಯಣ್ ಅವರ ಮಾತು.
ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾದ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಲಾಂಗು, ಮಚ್ಚು ಹಿಡಿದು ಕಾನೂನನ್ನು ಕೈಗೆತ್ತಿಕೊಳ್ಳುವ ಆರೋಪಿಗಳಿಗೆ ಬುಲೆಟ್ ಮೂಲಕ ಉತ್ತರ ಕೊಟ್ಟು ಚಳಿಬಿಡಿಸುತ್ತಿದ್ದಾರೆ. ಸದ್ಯ ಪೊಲೀಸರ ಈ ದಿಟ್ಟ ಕ್ರಮದಿಂದ ಜಿಲ್ಲೆಯಲ್ಲಿ ಇನ್ನಾದ್ದರೂ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳುತ್ತದಾ ಅನ್ನೋದನ್ನ ಕಾದು ನೋಡಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.