ಕೋಲಾರ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಬೆಲೆ: ಕೆಜಿ ಗೂಡಿಗೆ 1,000 ರೂ. ; ಬೆಳೆಗಾರರ ಮುಖದಲ್ಲಿ ನಗು

ಕೋಲಾರದಲ್ಲಿ ರೇಷ್ಮೆ ಗೂಡಿನ ಬೆಲೆ ಪ್ರತಿ ಕೆಜಿಗೆ ₹900-1000ಕ್ಕೆ ಏರಿ, ಸಾರ್ವಕಾಲಿಕ ದಾಖಲೆ ಬರೆದಿದೆ. ವಾತಾವರಣದ ಏರುಪೇರು ಮತ್ತು ಹಿಪ್ಪುನೇರಳೆ ಗುಣಮಟ್ಟ ಕುಸಿತದಿಂದ ರೇಷ್ಮೆ ಉತ್ಪಾದನೆಯಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದ್ದು, ಇದೇ ಬೆಲೆ ಏರಿಕೆಗೆ ಕಾರಣ. ಈ ದಾಖಲೆ ಬೆಲೆಯು ರೇಷ್ಮೆ ಕೃಷಿಯಿಂದ ವಿಮುಖವಾಗಲು ಯೋಚಿಸುತ್ತಿದ್ದ ರೈತರಿಗೆ ಹೊಸ ಭರವಸೆಯನ್ನು ಮೂಡಿಸಿದೆ.

ಕೋಲಾರ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಬೆಲೆ: ಕೆಜಿ ಗೂಡಿಗೆ 1,000 ರೂ. ; ಬೆಳೆಗಾರರ ಮುಖದಲ್ಲಿ ನಗು
ಸಾಂದರ್ಭಿಕ ಚಿತ್ರ
Edited By:

Updated on: Sep 22, 2026 | 4:14 PM

ಕೋಲಾರ, ಸೆ.22: ಸಿಲ್ಕ್ ಮತ್ತು ಮಿಲ್ಕ್ ಉತ್ಪಾದನೆಗೆ ಹೆಸರುವಾಸಿಯಾದ ಸುವರ್ಣ ಜಿಲ್ಲೆ ಕೋಲಾರದಲ್ಲಿ ಕೊರೊನಾ ನಂತರದ ದಿನಗಳಲ್ಲಿ ಇದೇ ಮೊದಲ ಬಾರಿಗೆ ರೇಷ್ಮೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಗೂಡಿನ ದರ ಸಾರ್ವಕಾಲಿಕ ದಾಖಲೆ ಬರೆದಿದ್ದು, ಪ್ರತಿ ಕೆಜಿ ರೇಷ್ಮೆ ಗೂಡಿನ ಬೆಲೆ 900 ರಿಂದ 1000 ರೂ. ವರೆಗೆ ಹರಾಜಾಗುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಚೀನಾ ರೇಷ್ಮೆ ಆಮದು ಸ್ಥಗಿತಗೊಂಡಾಗ ರೇಷ್ಮೆಗೆ ಇಂತಹ ಭಾರಿ ಬೇಡಿಕೆ ಬಂದಿತ್ತು. ತದನಂತರದ ದಿನಗಳಲ್ಲಿ ಇದೀಗ ಮತ್ತೆ ಅಷ್ಟೇ ಮಟ್ಟದ ದಾಖಲೆ ಬೆಲೆ ಸಿಗುತ್ತಿರುವುದು ಬೆಳೆಗಾರರ ಸಂತಸವನ್ನು ಇಮ್ಮಡಿಗೊಳಿಸಿದೆ.

ರೇಷ್ಮೆ ಬೆಲೆ ದಿಢೀರ್ ಏರಿಕೆಯಾಗಲು ವಾತಾವರಣದಲ್ಲಿನ ಏರುಪೇರು ಹಾಗೂ ಹಿಪ್ಪುನೇರಳೆ (ಮಲ್ಬರಿ) ಬೆಳೆಯ ಗುಣಮಟ್ಟ ಕುಸಿತವೇ ಪ್ರಮುಖ ಕಾರಣವಾಗಿದೆ. ವಾತಾವರಣದ ವೈಪರೀತ್ಯ ಹಾಗೂ ರೋಗಬಾಧೆಯಿಂದಾಗಿ ರೇಷ್ಮೆ ಗೂಡು ಉತ್ಪಾದನೆಯಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದೆ. ಮಾರುಕಟ್ಟೆಯಲ್ಲಿ ಪ್ರಸಿದ್ಧ ‘ಸಿಬಿ’ (CB) ತಳಿ ರೇಷ್ಮೆಗೆ ವಿಪರೀತ ಬೇಡಿಕೆಯಿದ್ದು, ರೇಷ್ಮೆ ನೂಲು ತೆಗೆಯುವ ರೀಲರ್ಸ್‌ಗಳು ಹೆಚ್ಚಿನ ಬೆಲೆ ನೀಡಿ ಪೈಪೋಟಿಗೆ ಬಿದ್ದು ರೇಷ್ಮೆ ಗೂಡು ಖರೀದಿ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ 1,500ಕ್ಕೂ ಹೆಚ್ಚು ಗ್ರಾಮಗಳ 19,739 ರೈತ ಕುಟುಂಬಗಳು ರೇಷ್ಮೆ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿವೆ. ಸುಮಾರು 20,134 ಹೆಕ್ಟೇರ್ ಪ್ರದೇಶದಲ್ಲಿ ಮಲ್ಬರಿ ಬೆಳೆಯಲಾಗುತ್ತಿದ್ದು, ವಾರ್ಷಿಕ 11,500 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತದೆ. ಕೋಲಾರ ರೇಷ್ಮೆ ಮಾರುಕಟ್ಟೆಗೆ ಪ್ರತಿನಿತ್ಯ 25 ಟನ್ ರೇಷ್ಮೆ ಗೂಡಿನ ಬೇಡಿಕೆಯಿದೆ. ಆದರೆ ಪ್ರಸ್ತುತ ಕೇವಲ 10 ರಿಂದ 15 ಟನ್ ಮಾತ್ರ ಪೂರೈಕೆಯಾಗುತ್ತಿದ್ದು, ತೀವ್ರ ಅಭಾವ ಸೃಷ್ಟಿಯಾಗಿದೆ. ಮೊದಲೆಲ್ಲಾ 1 ಟನ್ ರೇಷ್ಮೆ ಉತ್ಪಾದಿಸುತ್ತಿದ್ದ ರೈತರು, ಕೂಲಿಕಾರರ ಅಭಾವ ಹಾಗೂ ರೋಗಬಾಧೆಯಿಂದಾಗಿ ಈಗ ಕೇವಲ 400 ರಿಂದ 500 ಕೆಜಿಗೆ ತಲುಪಿದ್ದಾರೆ.

ಇದನ್ನೂ ಓದಿ: ಅಡಿಕೆ ಬೆಳೆಗಾರರಿಗೆ ಶುಭಸುದ್ದಿ: ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ

ರೇಷ್ಮೆ ಮಾರುಕಟ್ಟೆ ಅಧಿಕಾರಿಗಳು ಹಾಗೂ ರೈತರ ಅಭಿಪ್ರಾಯ:

“ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಗುಣಮಟ್ಟದ ರೇಷ್ಮೆಗೆ ಅತ್ಯುತ್ತಮ ಬೇಡಿಕೆ ಹಾಗೂ ಬೆಲೆಯಿದೆ. ವಾತಾವರಣದ ಸವಾಲುಗಳ ನಡುವೆಯೂ ರೈತರು ರೇಷ್ಮೆ ಕೃಷಿಯತ್ತ ಒಲವು ತೋರಿದರೆ ಉತ್ತಮ ಲಾಭಗಳಿಸಬಹುದು. ಇಲಾಖೆಯಿಂದಲೂ ಬೆಳೆಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.” ಎಂದು ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಶ್ರೀನಿವಾಸ್ ಹೇಳಿದ್ದಾರೆ. ಬರಗಾಲದ ಈ ಸಮಯದಲ್ಲಿ ಈ ದಾಖಲೆ ಬೆಲೆಯು ರೇಷ್ಮೆ ಕೃಷಿಯಿಂದ ದೂರ ಸರಿಯಲು ಯೋಜಿಸುತ್ತಿದ್ದ ರೈತರಿಗೆ ಸಂಜೀವಿನಿಯಂತೆ ಪರಿಣಮಿಸಿದ್ದು, ಹೊಸ ಭರವಸೆಯನ್ನು ಮೂಡಿಸಿದೆ ಎಂದು ರೈತರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us