ಕೋಲಾರ: ಸರ್ಕಾರಿ ಶಾಲೆಯನ್ನು ಮನೆ ಮಾಡಿಕೊಂಡು 5 ವರ್ಷದಿಂದ ವಾಸವಾಗಿರುವ ಕುಟುಂಬ
ವ್ಯಕ್ತಿಯೋರ್ವ ಕುಟುಂಬ ಸಮೇತವಾಗಿ ಶ್ರೀನಿವಾಸಪುರ ತಾಲೂಕಿನ ಕೋಡಿಹಳ್ಳಿ ಪಂಚಾಯತಿ ವ್ಯಾಪ್ತಿಯ ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದ ವಾಸವಾಗಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿಲ್ಲ.
ಕೋಲಾರ, ನವೆಂಬರ್ 08: ಶ್ರೀನಿವಾಸಪುರ (Srinivaspur) ತಾಲೂಕಿನ ಕೋಡಿಹಳ್ಳಿ ಪಂಚಾಯತಿ ವ್ಯಾಪ್ತಿಯ ಗಾಂಧಿನಗರ ಸರ್ಕಾರಿ ಶಾಲೆಯನ್ನು (Government School) ವ್ಯಕ್ತಿಯೋರ್ವ ಮನೆ ಮಾಡಿಕೊಂಡಿದ್ದಾನೆ. ಗೌನಿಪಲ್ಲಿ ಗ್ರಾಮದ ನಿವಾಸಿ ಕುಮಾರ್ ಕುಟುಂಬ ಸಮೇತ ಶಾಲೆಯಲ್ಲಿ ವಾಸವಾಗಿದ್ದಾನೆ. ಗಾಂಧಿನಗರ ಸರ್ಕಾರಿ ಶಾಲೆ ಐದು ವರ್ಷಗಳ ಹಿಂದೆ ಮುಚ್ಚಿದೆ. ಈ ವಿಚಾರ ತಿಳಿದ ಕುಮಾರ್, ಕಳೆದ ಐದು ವರ್ಷಗಳಿಂದ ಬಂದ್ ಆದ ಸರ್ಕಾರಿ ಶಾಲೆಯಲ್ಲೇ ಕುಟುಂಬ ಸಮೇತ ವಾಸವಾಗಿದ್ದಾನೆ. ಶಾಲೆಯ ಅಡುಗೆ ಮನೆ, ಗೋಡೌನ್ ಮತ್ತು ಕೊಠಡಿ ಉಪಯೋಗಿಸುತ್ತಿದ್ದಾನೆ. ಗ್ರಾಮಸ್ಥರು ಹಲವು ಭಾರಿ ದೂರು ನೀಡಿದರೂ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿಲ್ಲ.
ಒಂದೇ ಕೊಠಡಿಯಲ್ಲಿ 3 ತರಗತಿ ಮಕ್ಕಳಿಗೆ ಪಾಠ
ಯಾದಗಿರಿ: ಸುರಪುರ ತಾಲೂಕಿನ ಬೋನಾಳ್ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಕಟ್ಟಡ ಚಿಕ್ಕದಾಗಿದ್ದು, ಮಕ್ಕಳು ಹೆಚ್ಚಾಗಿದ್ದಾರೆ. 450ಕ್ಕೂ ಅಧಿಕ ಮಕ್ಕಳಿರುವ ಶಾಲೆಯಲ್ಲಿ ಕೇವಲ ನಾಲ್ಕು ಕೋಣೆಗಳು ಮಾತ್ರ ಇವೆ. ಒಂದು ಕೋಣೆಯಲ್ಲಿ ಎರಡರಿಂದ ಮೂರು ತರಗತಿಯ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಹೆಚ್ಚುವರಿ ಕೋಣೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿದೆ. ಆದರೆ ಗ್ರಾಮದಲ್ಲಿ ಸರ್ಕಾರಿ ಜಾಗ ಇಲ್ಲ.
ಸರ್ಕಾರಿ ಜಾಗ ಒತ್ತುವರಿ ತೆರವು
ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ ಸರ್ಕಾರಿ ಜಾಗವನ್ನು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ತೆರವು ಮಾಡಿಸಿದ್ದಾರೆ. ಯಾದಗಿರಿ ನಗರದಲ್ಲಿರುವ ಪೂರ್ಣಿಕಮಲ್ ಶ್ರೇಣಿಕರಾಜ್ ದೋಖಾ ಜೈನ್ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಸರ್ಕಾರಿ ಉದ್ಯಾನವನ ಒತ್ತುವರಿ ಮಾಡಿಕೊಂಡಿದೆ. ಒತ್ತುವರಿ ಮಾಡಿದ ಜಾಗದಲ್ಲಿ ಶಾಲೆ ಆಟದ ಮೈದಾನ ನಿರ್ಮಾಣ ಮಾಡಿದೆ. ಅಕ್ರಮ ಒತ್ತುವರಿ ತೆರವಿಗೆ ಮುಂದಾಗುತ್ತಿದ್ದ ಅಧಿಕಾರಿಗಳು ರಾಜಕೀಯ ನಾಯಕರ ಪ್ರಭಾವದಿಂದ ಹಿಂದೆ ಸರೆದಿದ್ದರು.
ಆದರೆ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಒತ್ತುವರಿ ತೆರವು ಮಾಡಿಸಿದ್ದಾರೆ. ಬಳಿಕ, ಅದೇ ಸ್ಥಳದಲ್ಲಿ ಕಾಂಪೌಂಡ್ ನಿರ್ಮಿಸಿದ್ದಾರೆ. ಇನ್ನು, ಶಾಲೆಯಲ್ಲಿ ಶೌಚಾಲಯ ಹಾಗೂ ಕುಡಿಯಲು ನೀರು ಇರದಿದ್ದಕ್ಕೆ ಶಿಕ್ಷಣ ಇಲಾಖೆ ಶಾಲೆಗೆ ನೋಟೀಸ್ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ