ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದ ತಾಯಿ: ಚಿಕಿತ್ಸೆ ಫಲಕಾರಿಯಾಗದೆ ಮತ್ತೊಂದು ಮಗು ಸಾವು

ಮುಳಬಾಗಿಲು ಪಟ್ಟನದ ಅಂಜನಾದ್ರಿ ಬೆಟ್ಟದಲ್ಲಿ ತಾಯಿಯಿಂದಲೇ ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಂದು ಮಗು ಇಂದು (ಡಿ. 8) ಸಾವನ್ನಪ್ಪಿದೆ.

ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದ ತಾಯಿ: ಚಿಕಿತ್ಸೆ ಫಲಕಾರಿಯಾಗದೆ ಮತ್ತೊಂದು ಮಗು ಸಾವು
ಮಗುವೊಂದನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ ಸಬ್-ಇನ್ಸ್​ಪೆಕ್ಟರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 08, 2022 | 7:41 PM

ಕೋಲಾರ: ಜಿಲ್ಲೆಯ ಮುಳಬಾಗಿಲು ಪಟ್ಟನದ ಅಂಜನಾದ್ರಿ ಬೆಟ್ಟದಲ್ಲಿ ತಾಯಿಯಿಂದಲೇ ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ (Fire Mishap) ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಂದು ಮಗು ಇಂದು (ಡಿ. 8) ಸಾವನ್ನಪ್ಪಿದೆ. ಆಂಧ್ರ ಮೂಲದ ಜ್ಯೋತಿ ಎಂಬಾಕೆ ಆತ್ಮಹತ್ಯೆ ನಿರ್ಧಾರ ಮಾಡಿ ತನ್ನಿಬ್ಬರು ಮಕ್ಕಳಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಳು. ಈ ವೇಳೆ ಮೊದಲ ಮಗು 8 ವರ್ಷದ ಅಕ್ಷಯ ಬುಧವಾರ (ಡಿ. 7) ಸಾವನ್ನಪ್ಪಿದ್ದಾಳೆ. ಎರಡನೇ ಮಗು 6 ವರ್ಷದ ಉದಯಶ್ರೀ ಗಂಭೀರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉದಯಶ್ರೀ ಕೊನೆಯುಸಿರೆಳೆದಿದ್ದಾಳೆ. ಈ ಸಂಬಂಧ ತಾಯಿ ಜ್ಯೋತಿಯನ್ನು ಮುಳಬಾಗಿಲು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಜ್ಯೋತಿ ಪತಿ ತಿರುಮಲೇಶ್​​ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಕರಣ ತಿಳಿದು ಸ್ಥಳಕ್ಕೆ ಬಂದ ಪಿಎಸ್ಐ ಮಂಜುನಾಥ್ ಕೂಡಲೇ ಸುಟ್ಟಗಾಯಗಳಿಂದ ನರಳಾಡುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆ ಮೊಬೈಲ್​​ ಕ್ಯಾಮರಾದಲ್ಲಿ ಸ್ಥಳೀಯರು ಸೆರೆಹಿಡಿದಿದ್ದಾರೆ. ಇನ್ನು PSI ಮಂಜುನಾಥ್ ಮಗುವನ್ನು ಎತ್ತಿಕೊಂಡು ಹೋಗುವ ವಿಡಿಯೋ ವೈರಲ್​ ಆಗುತ್ತಿದಂತೆ ಪಿಎಸ್​ಐ ಕಾರ್ಯಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಿಲ್ಡರ್ ಹಾಗೂ ಕಟ್ಟಡ ಮಾಲೀಕನ ಮೇಲೆ ಆಂಧ್ರ ಗ್ಯಾಂಗ್​ನಿಂದ ಫೈರಿಂಗ್

ಬೆಂಗಳೂರು: ನಗರದಲ್ಲಿ ಬಿಲ್ಡರ್ ಮತ್ತು ಕಟ್ಟಡದ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿರುವಂತಹ ಘಟನೆ ಕೆ.ಆರ್.ಪುರಂನ ಸೀಗೆಹಳ್ಳಿ ಬಳಿಯ ಹಾಸ್ಯಗಾರ್ಡನ್​ನಲ್ಲಿ ಇಂದು (ಡಿ. 8) ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ನಡೆದಿದೆ. ಬಿಲ್ಡರ್ ಅಶೋಕ್, ಕಟ್ಟಡದ ಮಾಲೀಕ ಶಿವಾರೆಡ್ಡಿ ಮೇಲೆ ಫೈರಿಂಗ್​ ಮಾಡಲಾಗಿದೆ. ಬಿಲ್ಡರ್​ ಅಶೋಕ್​ ಮೇಲೆ ಒಂದು ಸುತ್ತು ಗುಂಡಿನ ದಾಳಿ ಮಾಡಿದ್ದು, ಕಟ್ಟಡದ ಮಾಲೀಕ ಶಿವಾರೆಡ್ಡಿ ಮೇಲೆ ನಾಲ್ಕೈದು ಸುತ್ತು ಫೈರಿಂಗ್ ಮಾಡಿದ್ದಾರೆ. ಈ ವೇಳೆ ಗುಂಡು ತಗುಲಿ ಗಂಭೀರ ಗಾಯಗೊಂಡಿರುವ ಅಶೋಕ್, ಶಿವಾರೆಡ್ಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಕೆ.ಆರ್.ಪುರಂ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಂಧ್ರ ಪ್ರದೇಶದಿಂದ ಬಂದಿರುವ ಗ್ಯಾಂಗ್​ನಿಂದ ಕೃತ್ಯವೆಸಗಲಾಗಿದೆ ಎಂದು ಶಂಕಿಸಲಾಗಿದೆ. ರಸ್ತೆ ಬದಿ ನಿಂತಿದ್ದಾಗ ಏಕಾಏಕಿ ಬಂದು ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.

ಇದನ್ನೂ ಓದಿ: ತುಮಕೂರು: ಅಂತ್ಯ ಸಂಸ್ಕಾರಕ್ಕೆ ಶಾಸಕ ಗುಬ್ಬಿ ಶ್ರೀನಿವಾಸ್ ಬರಬೇಕೆಂದು ಡೆತ್ ನೋಟ್ ಬರೆದು ಯುವಕ‌ ಆತ್ಮಹತ್ಯೆ

ಬೈಕ್​ಗೆ ಕಾರು ಡಿಕ್ಕಿ; ಅಪಘಾತದ ವಿಡಿಯೋ ವೈರಲ್

ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದ ಹೊರಭಾಗದ ನಾಲ್ಕನೇ ಮೈಲಿನಲ್ಲಿ ಬೈಕ್​ಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಬೆಚ್ಚಿ ಬೀಳಿಸೊ ಸಿಸಿಟಿವಿ ದೃಶ್ಯಗಳು ಸದ್ಯ ವೈರಲ್ ಆಗಿದೆ, ನಿನ್ನೆ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಬೈಕ್ ಸವಾರ ಹನುಮಂತ (30), ಮಕ್ಕಳಾದ ಯಶವಂತ (10) ಹಾಗೂ‌ ಸಂಜೀವ(5) ಗಾಯಾಳುಗಳು. ಬೈಕ್​​ನಲ್ಲಿ ಇಬ್ಬರು ಮಕ್ಕಳನ್ನ ಕರೆದುಕೊಂಡು ಹನುಮಂತ ಎಂಬುವವರು ಸಿಂಧನೂರು ಕಡೆ ಹೊರಟಿದ್ದರು. ಈ ವೇಳೆ ಕಾರ್​ನಲ್ಲಿ ಕುಷ್ಟಗಿ ಮಾರ್ಗದಿಂದ ಸಿಂಧನೂರಿಗೆ ಬರ್ತಿದ್ದ ಕಾರು ಅತೀ ವೇಗದಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಕಾರು ಚಾಲಕ ಜಯದೇವ್ ತಪ್ಪಿನಿಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಘಟನೆ ಬಳಿಕ ಗಾಯಾಳುಗಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಂಧನೂರು ಟ್ರಾಫಿಕ್ ಪೊಲೀಸರು ಆರೋಪಿ ಕಾರು ಚಾಲಕನನ್ನ ಬಂಧಿಸಿದ್ದಾರೆ. ಸಿಂಧನೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:37 pm, Thu, 8 December 22