ಕಾಂಗ್ರೆಸ್ ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ್ದೇಕೆ ಹೈಕೋರ್ಟ್? ಇಲ್ಲಿವೆ ಅಸಲಿ ಕಾರಣಗಳು
ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡಗೆ ಸಂಕಷ್ಟ ಎದುರಾಗಿದೆ. ಮಾಲೂರು ಕ್ಷೇತ್ರದಿಂದ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಮತಗಳ ಮರುಎಣಿಕೆಗೂ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ತೀರ್ಪು ಜಾರಿಗೆ 30 ದಿನಗಳ ಕಾಲ ತಾತ್ಕಾಲಿಕ ತಡೆಯನ್ನೂ ನೀಡಿದೆ. ಹಾಗಾದರೆ, ನಂಜೇಗೌಡಗೆ ಆಯ್ಕೆ ಅಸಿಂಧುಗೊಳಿಸಲು ಕಾರಣಗಳೇನು? ಮತ ಎಣಿಕೆ ವೇಳೆ ಏನೇನು ನಡೆದಿತ್ತು? ಎಲ್ಲ ಮಾಹಿತಿ ಇಲ್ಲಿದೆ.

ಕೋಲಾರ, ಸೆಪ್ಟೆಂಬರ್ 17: ಮತಗಳ್ಳತನ ಆರೋಪ ಮಾಡಿ ರಾಷ್ಟ್ರಮಟ್ಟದಲ್ಲಿ ಅಭಿಯಾನ ಹಮ್ಮಿಕೊಂಡಿರುವ ಕಾಂಗ್ರೆಸ್ (Congress), ಆ ಸಂಬಂಧ ಬೆಂಗಳೂರಿನಿಂದಲೇ ರಣಕಹಳೆ ಮೊಳಗಿಸಿತ್ತು. ಇದೀಗ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ (KY Nanjegowda) ಆಯ್ಕೆಯನ್ನೇ ಕರ್ನಾಟಕ ಹೈಕೋರ್ಟ್ (Karnataka High Court) ಅಸಿಂಧು ಎಂದಿದೆ. ಅದೂ ಸಹ ಮತ ಎಣಿಕೆ ಅಕ್ರಮ ಆರೋಪದಲ್ಲಿ! ಇದನ್ನು ‘ವೋಟ್ ಚೋರಿ’ ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧದ ಪ್ರಬಲ ಅಸ್ತ್ರವನ್ನಾಗಿ ಬಿಜೆಪಿ ನಾಯಕರು ಬಳಸಲು ಆರಂಭಿಸಿದ್ದಾರೆ. ಮಾಲೂರು ವಿಧಾನಸಭಾ ಕ್ಷೇತ್ರದ 2023ರ ಚುನಾವಣೆ ಮರು ಎಣಿಕೆಗೆ ಹೈಕೋರ್ಟ್ ಆದೇಶಿಸಿದ್ದು, ನಾಲ್ಕು ವಾರಗಳಲ್ಲಿ ಮರುಎಣಿಕೆ ಮುಗಿಸುವಂತೆ ಆದೇಶ ನೀಡಿದೆ. ಅಲ್ಲದೆ, ಶಾಸಕ ಸ್ಥಾನದಿಂದ ಹಾಲಿ ಶಾಸಕ ಕೆವೈ ನಂಜೇಗೌಡ ಅವರನ್ನು ಅಸಿಂಧುಗೊಳಿಸಿದೆ.
ಸದ್ಯ ಶಾಸಕ ನಂಜೇಗೌಡ ಪರ ವಕೀಲರ ಮನವಿ ಮೇರೆಗೆ, ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಿರುವ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. 30 ದಿನಗಳ ಕಾಲವಕಾಶ ನೀಡಿದೆ. ಒಟ್ಟಿನಲ್ಲಿ, ಈ ಬೆಳವಣಿಗೆಯಿಂದ, ಮತ ಮರುಎಣಿಕೆ ಕೋರಿ ಕೋರ್ಟ್ ಮೊರೆ ಹೋಗಿದ್ದ ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಸಹಜವಾಗಿಯೇ ಸಂತೋಷಗೊಂಡಿದ್ದಾರೆ. ಆದರೆ, ಹಾಲಿ ಶಾಸಕ ನಂಜೇಗೌಡ ಕೋರ್ಟ್ ಆದೇಶದಿಂದ ಶಾಕ್ ಆಗಿದ್ದು, ನಾವು ಮರುಎಣಿಕೆಗೆ ಸಿದ್ದವಿದ್ದೆವು. ಆದರೆ ಕೋರ್ಟ್ ಅಸಿಂಧು ಮಾಡಿ ಆದೇಶ ಮಾಡಿರುವುದು ಬೇಸರ ತಂದಿದೆ. ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ‘ಟಿವಿ9’ಗೆ ತಿಳಿಸಿದ್ದಾರೆ.
ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ. ಹೀಗಾಗಿ ಜಿಲ್ಲಾ ಚುನಾವಣಾಧಿಕಾರಿ ವಿರುದ್ಧವೂ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಮಾಲೂರು ಕ್ಷೇತ್ರದ ಮತ ಎಣಿಕೆ ದಿನ ನಡೆದಿದ್ದೇನು?
2023ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೋಲಾರ ನಗರದ ಕಾಲೇಜು ವೃತ್ತದಲ್ಲಿನ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ನಡೆದಿತ್ತು. ಆಗ, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಲೂರು ಆರಂಭದಿಂದಲೂ ಗಮನ ಸೆಳೆದಿತ್ತು. ಕಾರಣ ಮಾಲೂರಿನಲ್ಲಿ ಪ್ರಬಲವಾದ ತ್ರಿಕೋನ ಪೈಪೋಟಿ ಇತ್ತು. ಮಾಲೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಪ್ರಮುಖ ಮೂರು ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಂಜೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ ಮಧ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನಿ ಜನತಾ ಪಕ್ಷದ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಮುನ್ನಡೆ ಸಾಧಿಸಿದರು. ಆ ವೇಳೆ, ಹೂಡಿ ವಿಜಯ್ ಕುಮಾರ್ ಗೆಲುವು ಬಹುತೇಕ ಖಚಿತ ಎನ್ನುವಷ್ಟರ ಮಟ್ಟಿಗೆ ಅಲ್ಲಿ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್ ಪಕ್ಷದ ಕೆಲವು ರಾಜ್ಯ ಮುಖಂಡರು ಪಕ್ಷೇತರ ಅಭ್ಯರ್ಥಿಯನ್ನು ಸಂಪರ್ಕ ಮಾಡುವ ಪ್ರಯತ್ನ ಸಹ ನಡೆಸಿದ್ದರು. ಕೊನೆಯ ಮೂರು ಸುತ್ತು ಬಾಕಿ ಇರುವಾಗ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ಗೆ ಹಿನ್ನಡೆಯಾಗಿ ಮಂಜುನಾಥ ಗೌಡ ಹಾಗೂ ನಂಜೇಗೌಡ ನಡುವೆ ಪೈಪೋಟಿ ಶುರುವಾಗಿತ್ತು. ಇನ್ನೊಂದು ಸುತ್ತು ಬಾಕಿ ಇರುವಾಗಲೇ ಮಂಜುನಾಥ ಗೌಡ ಪರ ಕಾರ್ಯಕರ್ತರು ವಿಜಯೋತ್ಸವದ ಮೂಡ್ಗೆ ತೆರಳಿದ್ದರು. ಅಲ್ಲದೆ ಮತೆಣಿಕೆ ಕೇಂದ್ರದಿಂದ ದೂರದಲ್ಲಿದ್ದ ಮಂಜುನಾಥಗೌಡರಿಗೆ ಕರೆ ಮಾಡಿ, ನೀವೇ ಗೆದ್ದಿದ್ದು ಬನ್ನಿ ಎಂದಿದ್ದರು. ಆದರೆ ಅವರು ಮತ ಎಣಿಕೆ ಕೇಂದ್ರಕ್ಕೆ ಬರುವಷ್ಟರಲ್ಲಿ ಅಲ್ಲಿನ ಚಿತ್ರಣ ಬದಲಾಗಿತ್ತು! ಕೊನೆಯ ಸುತ್ತಿನ ಎಣಿಕೆಯಲ್ಲಿ ನಂಜೇಗೌಡ ಅವರೇ 248 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರೆ ಎಂಬ ಮಾಹಿತಿ ಸಿಗುತ್ತಿದ್ದಂತೆ, ಮಂಜುನಾಥಗೌಡ ಆದಿಯಾಗಿ ಅವರ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು.
ಮತ ಎಣಿಕೆಯಲ್ಲಿ ಅಕ್ರಮದ ಆರೋಪ
ಮತ ಎಣಿಕೆಯಲ್ಲಿ ಏನೋ ಗೋಲ್ಮಾಲ್ ನಡೆದಿದೆ ಎಂದು ಮಂಜುನಾಥ ಗೌಡ ಬೆಂಬಲಿಗರು ಅನುಮಾನ ವ್ಯಕ್ತಪಡಿಸಿದರು. ಆಗ ಎರಡೂ ನಾಯಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆಯಿತು. ಚುನಾವಣಾಧಿಕಾರಿಗಳ ಬಳಿ ಮಂಜುನಾಥಗೌಡ ಮರು ಎಣಿಕೆಗೆ ಮನವಿಮಾಡಿದರಾದರೂ ಅದಕ್ಕೆ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ.
ಐದು ಬೂತ್ಗಳ ಮತ ಎಣಿಕೆ ಪರಿಶೀಲನೆ
ಅಧಿಕಾರಿಗಳು ಲಾಟರಿ ಮೂಲಕ ಐದು ಬೂತ್ಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ ಏನಾದರೂ ವ್ಯತ್ಯಾಸ ಬಂದಲ್ಲಿ ಮರು ಎಣಿಕೆಗೆ ಅವಕಾಶ ನೀಡುವುದಾಗಿ ತಿಳಿಸಿದರು. ಐದು ಬೂತ್ಗಳನ್ನು ಆಯ್ಕೆ ಮಾಡಿ ಎಣಿಕೆ ಮಾಡಿದಾಗ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಹಾಗಾಗಿ ಮರುಎಣಿಕೆಗೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಚುನವಣಾಧಿಕಾರಿ ಆಗಿದ್ದ ಅಂದಿನ ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಘೋಷಣೆ ಮಾಡಿದರು. ನಂತರ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್ ಮೊರೆ ಹೋಗಿ ಮರು ಎಣಿಕೆಗೆ ಮನವಿ ಮಾಡಿದ್ದರು.
ಮಾಲೂರು ಫಲಿತಾಂಶ: ಯಾರಿಗೆ ಎಷ್ಟು ಮತ ದೊರೆತಿತ್ತು?
- ಕೆ.ವೈ. ನಂಜೇಗೌಡ (ಕಾಂಗ್ರೆಸ್) – 50,955
- ಮಂಜುನಾಥ್ ಗೌಡ (ಬಿಜೆಪಿ) – 50707
- ಹೂಡಿ ವಿಜಯ್ ಕುಮಾರ್ (ಪಕ್ಷೇತರ) – 49362
- ಜಿ,ಇ ರಾಮೇಗೌಡ (ಜೆಡಿಎಸ್) – 17.627
- ಗೆಲುವಿನ ಅಂತರ 248
ಇದಾದ ನಂತರ ಹೈಕೋರ್ಟ್ನಲ್ಲಿ ಎರಡು ವರ್ಷಗಳ ಕಾಲ ನಡೆದ ವಾದ ಪ್ರತಿವಾದದ ನಂತರ ಮಂಗಳವಾರ ಮರು ಎಣಿಕೆಗೆ ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ, ಕೋಲಾರ ಜಿಲ್ಲಾ ಅಂದಿನ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ನಿರ್ದೇಶನ ನೀಡಿರುವ ಹೈಕೋರ್ಟ್, ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್‌ಡಿಸ್ಕ್ ಅನ್ನು ಮೆಸರ್ಸ್ ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಯಿಂದ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ MLAಗೆ ಬಿಗ್ ಶಾಕ್: ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್
ಒಟ್ಟಾರೆಯಾಗಿ, ಮಾಲೂರು ವಿಧಾನಸಭಾ ಕ್ಷೇತ್ರದ ಮರುಎಣಿಕೆಗೆ ಆದೇಶ ಮಾಡಿರುವುದು, ಮರು ಮತಣಿಕೆ ವೇಳೆ ಅದೃಷ್ಟ ಯಾರಪಾಲಾಗಲಿದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ, ಸದ್ಯ ನಂಜೇಗೌಡ ಸುಪ್ರೀಂ ಕೋರ್ಟ್ ಮೆಟ್ಟರಿಲೇರಲಿದ್ದು, ಮುಂದಿನ ಬೆಳವಣಿಗೆಗಳು ಏನಾಗಲಿವೆ ಎಂಬುದನ್ನು ಕಾದುನೋಡಬೇಕಿದೆ.




