ಒಂದೇ ಹುದ್ದೆ, ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಕಿತ್ತಾಟ: ಆಗಿದ್ದೇನು..?
ಸರ್ಕಾರಿ ಕಚೇರಿಯಲ್ಲಿ ಒಂದು ಹುದ್ದೆಗೆ ಒಬ್ಬರೇ ಅಧಿಕಾರ ನಡೆಸಲು ಸಾಧ್ಯ. ಆದ್ರೆ ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳ ನಡುವೆ ಫೈಟ್ ಆರಂಭವಾಗಿದೆ. ಇಬ್ಬರು ತಾವೇ ಇಲಾಖೆಯ ಉಪ ನಿರ್ದೇಶಕ ಅಂತ ಹೇಳ್ತಿದ್ದಾರೆ. ಇಬ್ಬರ ನಡುವೆ ಆರೋಪ ಪ್ರತ್ಯಾರೋಪಗಳು, ಟಾಕ್ ಪೈಟ್ ನಡೆಯುತ್ತಿವೆ. ಆದ್ರೆ ಸಮಸ್ಯೆ ಬಗೆಹರಿಸಬೇಕಿದ್ದ ಮೇಲಾಧಿಕಾರಿಗಳು ಮೌನವಾಗಿದ್ದಾರೆ.
![ಒಂದೇ ಹುದ್ದೆ, ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಕಿತ್ತಾಟ: ಆಗಿದ್ದೇನು..?](https://images.tv9kannada.com/wp-content/uploads/2025/01/thipanna.jpg?w=1280)
ಕೊಪ್ಪಳ, (ಜನವರಿ 29): ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳ ನಡುವೆ ಗುದ್ದಾಟ ನಡೆದಿದೆ. ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಹುದ್ದೆಗೆ ತಿಪ್ಪಣ್ಣ ಸಿರಸಗಿ ಮತ್ತು ಪಿ ವೈ ಶೆಟ್ಟಪ್ಪನವರ ನಡುವೆ ಜಟಾಪಟಿ ನಡೆದಿದೆ. 8.9.2023 ರಂದು ಉಪನಿರ್ದೇಶಕರಾಗಿ ಬಂದಿದ್ದ ತಿಪ್ಪಣ್ಣ ಅವರನ್ನು 3.10.24ರಂದು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿತ್ತು. ಬಳಿಕ ತಿಪ್ಪಣ್ಣ ಹುದ್ದೆಗೆ ಪಿ ವೈ ಶೆಟ್ಟೆಪ್ಪ ಎನ್ನುವರನ್ನು ಸರ್ಕಾರ ನಿಯೋಜಿಸಿತ್ತು. ಆದ್ರೆ, ಇದೀಗ ತಿಪ್ಪಣ್ಣ ಅಮಾನತ್ತಿಗೆ ಕೆಎಟಿಯಿಂದ ತಡೆ ತಂದಿದ್ದಾರೆ. ಅಲ್ಲದೇ ಅಲ್ಲದೇ ಪಿ ವೈ ಶೆಟ್ಟಪ್ಪನವರ ನಿಯೋಜನೆ ಆದೇಶವನ್ನು ಸಹ ಕೆಎಟಿ ರದ್ದುಪಡಿಸಿದ್ದದೆ. ಹೀಗಾಗಿ ತಿಪ್ಪಣ್ಣ ಅವರು ಈಗ ಅದೇ ಕುರ್ಚಿ ಬೇಕೆಂದು ಪಟ್ಟು ಹಿಡಿದಿದ್ದಾರೆ. ಆದ್ರೆ, ಪಿ ವೈ ಶೆಟ್ಟಪ್ಪ ಅವಕಾಶ ಮಾಡಿಕೊಡುತ್ತಿಲ್ಲ.
ತಿಪ್ಪಣ್ಣ ಸಿರಸಗಿ ಅವರು ಕೊಪ್ಪಳ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಸೆಪ್ಟಂಬರ್ 2023 ರಿಂದ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದ್ರೆ ಕರ್ತವ್ಯಲೋಪ ಆರೋಪದ ಮೇಲೆ 2024 ರ ಅಕ್ಟೋಬರ್ 3 ರಂದು ಅಮಾನತ್ತಾಗಿದ್ದರು. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಿಪ್ಪಣ್ಣ ಸಿರಸಗಿಯನ್ನು ಅಮಾನತ್ತು ಮಾಡಿ, ಆ ಜಾಗಕ್ಕೆ ಪಿ ವೈ ಶೆಟ್ಟೆಪ್ಪನವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಆದ್ರೆ ತನ್ನನ್ನು ಅಮಾನತ್ತು ಮಾಡಿದ್ದು, ಮತ್ತು ಬೇರೆಯವರನ್ನು ನಿಯೋಜನೆ ಮಾಡಿದ್ದನ್ನು ಪ್ರಸ್ನಿಸಿ ತಿಪ್ಪಣ್ಣ ಸಿರಸಗಿ, ಬೆಳಗಾವಿ ಕೆಎಟಿ ಪೀಠದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಬೆಳಗಾವಿ ಕೆಎಟಿ ಪೀಠ, ತಿಪ್ಪಣ್ಣ ಅವರ ಅರ್ಜಿಯನ್ನು ಪುರಸ್ಕರಿಸಿದ್ದು, ಅಮಾನತ್ತು ಆದೇಶವನ್ನು ರದ್ದು ಮಾಡಿತ್ತು. ಜೊತೆಗೆ ಬೇರೆಯವರನ್ನು ನಿಯೋಜನೆ ಮಾಡಿದ್ದು ಕೂಡಾ ಸರಿಯಲ್ಲ ಅಂತ ಇದೇ ಜನವರಿ 20 ರಂದು ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟ ಹತ್ತುವಾಗಲೇ 17 ವರ್ಷದ ಯುವಕ ಹೃದಯಸ್ತಂಭನದಿಂದ ಸಾವು
ಹೀಗಾಗಿ ಅವದಿಪೂರ್ಣಗೊಳ್ಳುವ ಮೊದಲೇ ಅಮಾನತ್ತಾಗಿದ್ದರಿಂದ, ತಿಪ್ಪಣ್ಣ ಸಿರಸಗಿ ಜನವರಿ 24 ರಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕಚೇರಿಗೆ ಆಗಮಿಸಿದ್ದರಂತೆ. ಆದ್ರೆ ಅವರಿಗೆ ಚಾರ್ಜ್ ನೀಡಲು ಸದ್ಯ ಉಪನಿರ್ದೇಶಕರಾಗಿ ಕೆಲಸ ಮಾಡ್ತಿರುವ ಪಿ ವೈ ಶೆಟ್ಟಪ್ಪನವರ ನಿರಾಕಾರಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕಚೇರಿಗೆ ಬಂದು ಹೋಗುವದನ್ನು ಮಾಡ್ತಿದ್ದ ತಿಪ್ಪಣ್ಣ ಸಿರಸಗಿ, ಇಂದು ಉಪನಿರ್ದೇಶಕರ ಕೊಠಡಿಗೆ ಹೋಗಿ, ಉಪನಿರ್ದೇಶಕರಿಗೆ ಮೀಸಲಾಗಿರೋ ಕುರ್ಚಿಯಲ್ಲಿ ಕೂತಿದ್ದಾರೆ. ಈ ಸಮಯದಲ್ಲಿ ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ನ್ಯಾಯಾಲಯದ ಆದೇಶದಂತೆ ತಾನು ಅಧಿಕಾರ ವಹಿಸಿಕೊಳ್ಳಲು ಬಂದಿದ್ದೇನೆ. ಆದ್ರೆ ಪಿ ವೈ ಶೆಟ್ಟಪ್ಪನವರು ಅಧಿಕಾರ ನೀಡದೆ ತನ್ನ ಮೊಬೈಲ್ ನ್ನು ಕಿತ್ತೆಸೆಯುವದು, ಬೆದರಿಕೆ ಹಾಕುವದನ್ನು ಮಾಡುತ್ತಿದ್ದಾರೆ. ಹಾಜರಾತಿ ಹಾಕಲು ಹಾಜರಾತಿ ಪುಸ್ತಕ ನೀಡುತ್ತಿಲ್ಲ. ಸಿಬ್ಬಂದಿಗೆ ತನ್ನ ಬಳಿ ಹೋಗದಂತೆ ಬೆದರಿಕೆ ಹಾಕಿದ್ದಾರೆ. ನಿನ್ನ ನೋಡಿಕೊಳ್ಳುತ್ತೇನೆ ಎಂದು ಹೇಳ್ತಿದ್ದಾರೆ. ತನ್ನ ಜೀವಕ್ಕೆ ಹೆಚ್ಚುಕಡಿಮೆಯಾದ್ರೆ ಅದಕ್ಕೆ ಪಿ. ವೈ ಶೆಟ್ಟಪ್ಪನವರೇ ಕಾರಣ ಅಂತ ತಿಪ್ಪಣ್ಣ ಸಿರಸಗಿ ಹೇಳುತ್ತಿದ್ದಾರೆ.
ಪಿ. ವೈ ಶೆಟ್ಟಪ್ಪ ಹೇಳುವುದೇನು?
ಇತ್ತ ಕಚೇರಿಯಲ್ಲಿ ಹೈಡ್ರಾಮಾ ನಡೆದ ನಂತರ, ಪಿ ವೈ ಶೆಟ್ಟಪ್ಪನವರು, ಸದ್ಯ ಬೇರೊಂದು ಕೊಠಡಿಯಲ್ಲಿ ಕೂತು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ತನಗೆ ಯಾವುದೇ ಸೂಚನೆ ಬಂದಿಲ್ಲ. ಕೆಎಟಿಯಲ್ಲಿ ಅವರ ಪರ ಆದೇಶವಾದ್ರು ಕೂಡಾ ಸರ್ಕಾರದಿಂದ ಅವರಿಗೆ ಚಾರ್ಜ್ ನೀಡುವಂತೆ ಆದೇಶ ಬಂದ್ರೆ ಚಾರ್ಜ್ ನೀಡುತ್ತೇನೆ. ತಿಪ್ಪಣ್ಣ ಸಿರಸಗಿ, ಅನಧಿಕೃತವಾಗಿ ಕಚೇರಿಗೆ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಇಬ್ಬರು ಅಧಿಕಾರಿಗಳ ನಡುವೆ ಕಳೆದ ನಾಲ್ಕು ದಿನಗಳಿಂದ ನಡೆದಿದ್ದ ಮುಸುಕಿನ ಗುದ್ದಾಟ, ಇಂದು ವಿಕೋಪಕ್ಕೆ ಹೋಗಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ಕಚೇರಿಯಲ್ಲಿ ನಡೆದಿವೆ. ಆದ್ರೆ ಇಬ್ಬರು ಕೂಡಾ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಸರ್ಕಾರಿ ಆದೇಶ ಪಾಲನೆ ಮಾಡಿ ಅಂತ ಇಬ್ಬರಿಗೂ ಸಿಇಓ ಹೇಳಿದ್ದು ಬಿಟ್ಟರೆ, ಸದ್ಯ ಯಾರು ಅಧಿಕಾರ ನಿರ್ವಹಿಸಬೇಕು ಎನ್ನುವುದನ್ನು ಹೇಳುತ್ತಿಲ್ಲ. ಹೀಗಾಗಿ ಇಬ್ಬರ ನಡುವಿನ ಗುದ್ದಾಟ ಮುಂದುವರಿದಿದೆ. ಹೀಗಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಇಬ್ಬರು ಗುದ್ದಾಟಕ್ಕೆ ಬ್ರೇಕ್ ಹಾಕಬೇಕಿದೆ. ಯಾರು ಅಧಿಕಾರ ನಡೆಸಬೇಕು ಎನ್ನುವುದನ್ನು ಮೇಲಾಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:15 pm, Wed, 29 January 25