ಮಹಿಳಾ ದಿನಾಚರಣೆ ದಿನದಂದೇ ನಗರಸಭೆ ಅಧ್ಯಕ್ಷೆಗೆ ಕಣ್ಣೀರು ಹಾಕಿಸಿದ ಕಾಂಗ್ರೆಸ್
ಕಾಂಗ್ರೆಸ್ ತಮ್ಮ ಪಕ್ಷದ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿದ್ದು ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಕಣ್ಣೀರು ಹಾಕಿ ನೋವು ತೋಡಿಕೊಂಡಿದ್ದಾರೆ. ಬಹುಮತ ಇರುವ ಕಾಂಗ್ರೆಸ್ ಪಕ್ಷದ ಸದಸ್ಯರಿಂದಲೇ ಕಿರುಕುಳ ನೀಡಲಾಗುತ್ತಿದೆ ಎಂದು ಭಾವುಕರಾಗಿದ್ದಾರೆ.
ಕೊಪ್ಪಳ: ಇವತ್ತು ವಿಶ್ವ ಮಹಿಳಾ ದಿನಾಚರಣೆ(International Women’s Day). ಹೀಗಾಗಿ ರಾಜ್ಯದ ವಿವಿಧೆಡೆ ಮಹಿಳೆಯರು ಈ ದಿನವನ್ನ ಸಂತೋಷ ಸಂಭ್ರಮದಿಂದ ಆಚರಿಸಿದ್ದಾರೆ. ಆದ್ರೆ ಮಹಿಳಾ ದಿನಾಚರಣೆ ದಿನದಂದೇ ಕಾಂಗ್ರೆಸ್ ನಗರಸಭೆ ಅಧ್ಯಕ್ಷೆಗೆ ಕಣ್ಣೀರು ಹಾಕಿಸಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪಕುಮಾರ್ ಕಣ್ಣೀರು ಹಾಕಿ, ನೋವು ತೋಡಿಕೊಂಡಿದ್ದಾರೆ. ಕಾಂಗ್ರೆಸ್ ತಮ್ಮ ಪಕ್ಷದ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿದ್ದು ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಕಣ್ಣೀರು ಹಾಕಿ ನೋವು ತೋಡಿಕೊಂಡಿದ್ದಾರೆ. ಬಹುಮತ ಇರುವ ಕಾಂಗ್ರೆಸ್ ಪಕ್ಷದ ಸದಸ್ಯರಿಂದಲೇ ಕಿರುಕುಳ ನೀಡಲಾಗುತ್ತಿದೆ ಎಂದು ಭಾವುಕರಾಗಿದ್ದಾರೆ. ಅವಿಶ್ವಾಸ ಗೊತ್ತುವಳಿ ಮಂಡಿಸುವಂತೆ ಡಿಸಿಗೆ ಕಾಂಗ್ರೆಸ್ ಸದಸ್ಯರು ಮನವಿ ಮಾಡಿದ್ದಾರೆ. ಅತ್ತ ಮನವಿ ಮಾಡುತ್ತಿದ್ದಂತಯೇ ಇತ್ತ ಮಹಿಳಾ ಅಧ್ಯಕ್ಷೆ ಕಣ್ಣೀರು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯರ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಮಹಿಳಾ ದಿನಾಚರಣೆಯಾದ ಇಂದೇ ರಾಜೀನಾಮೆ ನೀಡ್ತಿನಿ ಎಂದು ಮಾಲಾಶ್ರೀ ಶಪತ ಮಾಡಿದ್ದಾರೆ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿತ ಕಾಂಗ್ರೆಸ್‍ನ ಆಡಳಿತರೂಢ ನಗರಸಭೆ ಸದಸ್ಯರಿಂದಲೇ ಹೈಡ್ರಾಮ್ ನಡೆದಿದೆ. ಕಳೆದ 13 ತಿಂಗಳ ಹಿಂದೆ ಬಿಜೆಪಿಯೊಂದಿಗೆ ಸೆಣಸಾಡಿ ಪ್ರತಿಷ್ಟೆಯೊಂದಿಗೆ ನಗರಸಭೆಯಲ್ಲಿ ಅಧಿಕಾರಕ್ಕೆ ತಂದಿದ್ದ ಅಧ್ಯಕ್ಷೆ ಮಾಲಾಶ್ರೀ ಸಂದೀಪ ವಿರುದ್ಧ ಕಾಂಗ್ರೆಸ್ 18 ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ. ಮಂಗಳವಾರ ಕಾಂಗ್ರೆಸ್ ಪಕ್ಷದ 18 ಸದಸ್ಯರು ಅಧ್ಯಕ್ಷೆ ಮಾಲಾಶ್ರೀ ಸಂದೀಪ ಅವರನ್ನು ಅಧಿಕಾರದಿಂದ ಕೆಳಗಿಸಲು ಮುಂದಾಗಿದ್ದು, ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಮತ್ತು ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದದೇ ಏಕ ನಿರ್ಣಯ ಕೈಗೊಳ್ಳುತ್ತಿರುವುದಕ್ಕೆ ಬೇಸತ್ತ ಕಾಂಗ್ರೆಸ್ ಸದಸ್ಯರು ಮಾಲಾಶ್ರೀ ಅವರನ್ನು ಅಧಿಕಾರದಿಂದ ಮುಕ್ತಗೊಳಿಸಲು ಮುಂದಾಗಿದ್ದಾರೆ.
ಹಿಂದುಳಿದ ವರ್ಗ ಬಿ ಮಹಿಳೆಗೆ ಮಿಸಲಾಗಿರುವ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಮಾಲಾಶ್ರೀ ಸಂದೀಪಗೆ ಮಾತ್ರ ಅವಕಾಶವಿದ್ದು, ಮಾಲಾಶ್ರೀ ಸಂದೀಪ ರಾಜೀನಾಮೆ ನೀಡಿದಲ್ಲಿ ಭಾರತೀಯ ಜನತಾ ಪಕ್ಷ ನಗರಸಭೆಯಲ್ಲಿ ಅಧಿಕಾರಕ್ಕೆರಲಿದೆ. ಈ ಸಂಗತಿ ಅರಿತಿದ್ದರೂ ಆಡಳಿತರೂಢ ಕಾಂಗ್ರೆಸ್ ಸದಸ್ಯರು ತಮ್ಮ ಪಕ್ಷದ ಅಧ್ಯಕ್ಷತೆಗೆ ಅರ್ಹರಿರುವ ಏಕೈಕೆ ಮಹಿಳೆ ಮಾಲಾಶ್ರೀ ವಿರುದ್ಧ ಕಾಂಗ್ರೆಸ್ ಪಕ್ಷದವರು ತಿರುಗಿಬಿದ್ದಿದ್ದಾರೆ. ಗಂಗಾವತಿ ನಗರಸಭೆ ಮತ್ತು ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿರ್ಣಯವೇ ಅಂತಿಮವಾಗಿದ್ದು, ಅಧ್ಯಕ್ಷೆ ಮಾಲಾಶ್ರೀ ಅವರನ್ನು ಅಧಿಕಾರದಿಂದ ಕೆಳಗಿಸಲು ಇಕ್ಬಾಲ್ ಅನ್ಸಾರಿಯೇ ತಮ್ಮ ಪಕ್ಷದ 18 ಸದಸ್ಯರಿಗೆ ಸೂಚನೆ ನೀಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್ ಪಕ್ಷದ 18 ಸದಸ್ಯರು, ಜೆಡಿಎಸ್ 1 ಮತ್ತು ಬಿಜೆಪಿಯ ಒಬ್ಬ ಸದಸ್ಯರು ಸೇರಿ 20 ಜನ ಒಟ್ಟುಗೂಡಿ ಇಕ್ಬಾಲ್ ಅನ್ಸಾರಿ ಸೂಚನೆಯಂತೆ ಕಳೆದ 2020 ನವೆಂಬರ್ 2 ರಂದು ಮಾಲಾಶ್ರೀ ಸಂದೀಪ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಅಂದಿನ ಸಂದರ್ಭದಲ್ಲಿ ಹೇಗಾದರೂ ಅಧಿಕಾರ ಹಿಡಿಯಬೇಕೆಂದು ಪಣ ತೊಟ್ಟಿದ್ದ ಬಿಜೆಪಿಗರಿಗೆ ಅನ್ಸಾರಿ ಮುಖ ಭಂಗ ಮಾಡಿದ್ದರು. ಮಾಲಾಶ್ರೀ ರಾಜೀನಾಮೆ ನೀಡಿದಲ್ಲಿ ಮಿಸಲಾತಿ ಪ್ರಕಾರ ಬಿಜೆಪಿಗೆ ಅಧಿಕಾರ ದೊರೆಯುತ್ತದೆ ಎಂಬ ವಿಷಯ ಗೊತ್ತಿದ್ದರೂ ಆಡಳಿತ ರೂಡ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ಮಂಡನೆಗೆ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರ ಸಲ್ಲಿಸಿರುವುದು ನಗರಸಭೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
18 ಸದಸ್ಯರು ತಮ್ಮ ವಿರುದ್ಧ ಅವಿಶ್ವಾಸಕ್ಕೆ ಮನವಿ ಸಲ್ಲಿಸಿರುವುದನ್ನು ಅರಿತಿರುವ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಇನ್ನೆರಡು ಮೂರು ದಿನದಲ್ಲಿ ನಗರಸಭೆ ಅಧ್ಯಕ್ಷತೆಗೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಮುಂದೆ ಬಿಜೆಪಿ ಅಧಿಕಾರ ಹಿಡಿಯಲು ರಣತಂತ್ರ ನಡೆಸಲು ಮತ್ತೆ ಸಜ್ಜಾಗುತ್ತಿದೆ.
18 ಕಾಂಗ್ರೆಸ್ ಸದಸ್ಯರು ಅವಿಶ್ವಾಸಕ್ಕೆ ಮನವಿ ಆಡಳಿತರೂಢ 18 ಜನ ಕಾಂಗ್ರೆಸ್ ಪಕ್ಷದ ಸದಸ್ಯರು ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ ವಿರುದ್ಧ ಅವಿಶ್ವಾಸಕ್ಕೆ ಮನವಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಅಧ್ಯಕ್ಷರಿಗೆ ಈಗಾಗಲೇ ತಲುಪಿಸಲಾಗಿದೆ. ಅಧ್ಯಕ್ಷರು ಶೀಘ್ರ ಸಭೆ ಕರೆದು ಅಂತಿಮ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೂ ಮಾಹಿತಿ ಸಲ್ಲಿಸಲಾಗುವುದು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರಾದ ಅರವಿಂದ ಜಮಖಂಡಿ ತಿಳಿಸಿದ್ದಾರೆ.
ನಗರಸಭೆಯಲ್ಲಿ ನಮ್ಮ ಪಕ್ಷದಿಂದ ಹಿಂದುಳಿದ 2 ಬಿ ವರ್ಗದಲ್ಲಿ ಏಕೈಕ ಮಹಿಳೆ ಮಾಲಾಶ್ರಿ ಒಬ್ಬರೆ ಇದ್ದರು. ಮಿಸಲಾತಿ ಪ್ರಕಾರ ಅವರಿಗೆ ನಾವು ಅಧ್ಯಕ್ಷರನ್ನಾಗಿ ಮಾಡಿದ್ದೇವು. ಆದರೆ ಅಧ್ಯಕ್ಷರು ಸರಿಯಾದ ರೀತಿಯ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುತ್ತಿಲ್ಲ ಮತ್ತು ಯಾವುದೇ ಸದಸ್ಯರೊಂದಿಗೆ ಅಭಿವೃದ್ಧಿ ಕುರಿತು ಚರ್ಚಿಸುತ್ತಿಲ್ಲ. ಮತ್ತು ಅವರ ಪತಿ ವರ್ತನೆಯಿಂದ ನಮಗೆಲ್ಲ ಬೇಸರವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದೇವೆ. ಮುಂದೆ ಆಗುವ ಬೆಳವಣಿಗೆ ಕಾದು ನೋಡುತ್ತೇವೆ ಎಂದು ನಗರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ನಗರ ಅಧ್ಯಕ್ಷರು, ಶ್ಯಾಮೀದ್ ಮನಿಯಾರ್ ಹೇಳಿದ್ರು.
ವಿಶೇಷ ವರದಿ ಶಿವಕುಮಾರ್ ಪತ್ತಾರ ಟಿವಿ9 ಕೊಪ್ಪಳ
ಇದನ್ನೂ ಓದಿ: ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ; ನಿಲ್ಲೋಕೆ ನೆರಳಿಲ್ಲ ಕುಡಿಯೋಕೆ ನೀರಿಲ್ಲ, ಅಂತರಗಂಗೆಯಲ್ಲಿ ಕೋತಿಗಳ ಪರದಾಟ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: 29 ಸಾಧಕಿಯರಿಗೆ ನಾರಿ ಶಕ್ತಿ ಪ್ರಶಸ್ತಿ ಪ್ರದಾನ
Published On - 8:53 pm, Tue, 8 March 22