
ಬೆಂಗಳೂರು, ಅ.10: ಇತ್ತಿಚೆಗೆ ಕೊಪ್ಪಳ ಮತ್ತು ವಿಜಯಪುರದಲ್ಲಿ ಬಸ್‌ಗಳಿಗೆ ಡೀಸೆಲ್ ಅಭಾವ ಎದುರಾಗಿತ್ತು. ಇಂಧನಕ್ಕಾಗಿ ಡಿಪೋಗಳಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದು, ಸಾರ್ವಜನಿಕರು ಪರದಾಡು ಸ್ಥಿತಿ ನಿರ್ಮಾಣವಾಗಿತ್ತು ಎಂಬ ಬಗ್ಗೆ ಟಿವಿ9 ಕನ್ನಡ ವರದಿ ಮಾಡಿತ್ತು. ಇದೀಗ ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ರಾಜ್ಯದ ನಾಲ್ಕೂ ಸರ್ಕಾರಿ ರಸ್ತೆ ಸಾರಿಗೆ ನಿಗಮಗಳು ಎದುರಿಸುತ್ತಿದ್ದ ತೀವ್ರ ಇಂಧನ ವೆಚ್ಚದ ಹೊರೆ ಹಾಗೂ ಡೀಸೆಲ್ ಬಾಕಿ ಪಾವತಿಯ ಸಮಸ್ಯೆಗೆ ರಾಜ್ಯ ಸರ್ಕಾರ ಕೊನೆಗೂ ಪರಿಹಾರ ನೀಡಿದೆ. ನಾಲ್ಕೂ ಸಾರಿಗೆ ನಿಗಮಗಳ ಡೀಸೆಲ್ ಬಾಕಿ ಮೊತ್ತವನ್ನು ತೀರಿಸಲು ಒಟ್ಟು 100 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 2026-27ನೇ ಸಾಲಿನ ಬಜೆಟ್ ಹಂಚಿಕೆಯಡಿ ಈ ಅನುದಾನ ಬಳಕೆಗೆ ಸರ್ಕಾರ ಅನುಮತಿ ನೀಡಿದ್ದು, ಸಾರಿಗೆ ಸಂಸ್ಥೆಗಳ ದಿನನಿತ್ಯದ ಕಾರ್ಯಾಚರಣೆಗೆ ಈ ನಿರ್ಧಾರ ಭಾರಿ ಬೆಂಬಲ ನೀಡಲಿದೆ.
ಸರ್ಕಾರ ಬಿಡುಗಡೆ ಮಾಡಿರುವ ಒಟ್ಟು 100 ಕೋಟಿ ರೂ. ಅನುದಾನದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಅತಿ ಹೆಚ್ಚಿನ ಪಾಲು ದೊರೆತಿದೆ. ನಿಗಮವಾರ ಹಂಚಿಕೆಯ ವಿವರ ಹೀಗಿದೆ.
| ಸಾರಿಗೆ ನಿಗಮ | ಬಿಡುಗಡೆಯಾದ ಅನುದಾನ (ರೂ. ಗಳಲ್ಲಿ) |
| ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) | ₹62.53 ಕೋಟಿ (ಅತಿ ಹೆಚ್ಚು) |
| ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) | ₹18.90 ಕೋಟಿ |
| ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) | ₹10.61 ಕೋಟಿ |
| ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) | ₹7.96 ಕೋಟಿ |
ಇದನ್ನೂ ಓದಿ: ಕೊಪ್ಪಳ ಆಯ್ತು, ಈಗ ವಿಜಯಪುರದಲ್ಲೂ ಕೆಎಸ್ಆರ್ಟಿಸಿ ಬಸ್‌ಗಳಿಗೆ ಡೀಸೆಲ್ ಅಭಾವ!
ಆರ್ಥಿಕ ಇಲಾಖೆಯು ಅಕ್ಟೋಬರ್ 8 ರಂದು ಈ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿತ್ತು. ಅದರ ಬೆನ್ನಲ್ಲೇ ಅಕ್ಟೋಬರ್ 9 ರಂದು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಬಿಡುಗಡೆಯಾಗಿರುವ ಅನುದಾನವನ್ನು ಸಂಪೂರ್ಣವಾಗಿ ಡೀಸೆಲ್ ಬಾಕಿ ಪಾವತಿಗೆ ಮಾತ್ರವೇ ಬಳಸಬೇಕು ಹಾಗೂ ಸರ್ಕಾರದ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ವಿನಿಯೋಗಿಸಬೇಕು ಎಂದು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸರ್ಕಾರದ ಈ ಸಮಯೋಚಿತ ನಿರ್ಧಾರದಿಂದಾಗಿ ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ಇಂಧನ ಪೂರೈಕೆಯಲ್ಲಿ ಎದುರಾಗಬಹುದಾಗಿದ್ದ ವ್ಯತ್ಯಯ ತಪ್ಪಿದಂತಾಗಿದೆ. ಇನ್ನು ಇದು ರಾಜ್ಯಾದ್ಯಂತ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಹಾಗೂ ‘ಶಕ್ತಿ’ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರಿಗೆ ಬಸ್ ಸಂಚಾರದಲ್ಲಿ ಇಂಧನ ಕೊರತೆಯಿಂದ ಯಾವುದೇ ವ್ಯತ್ಯಯ ಉಂಟಾಗದಂತೆ ತಡೆಯಲು ಈ ಅನುದಾನ ನೆರವಾಗಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ