ಕೊಪ್ಪಳ ನಗರದಲ್ಲಿ ಕುಡಿಯುವ ನೀರಿಗಾಗಿ ತತ್ವಾರ: ವಾರಕ್ಕೊಮ್ಮೆ ನೀರು ಪೂರೈಕೆ, ಆಕ್ರೋಶ
ಕೊಪ್ಪಳ ನಗರದ ಬಳಿ ತುಂಗಭದ್ರಾ ಜಲಾಶಯವಿದ್ದರೂ, ಜನರು ನೀರಿಗಾಗಿ ಪರದಾಡುವಂತಾಗಿದೆ. ಬೇಸಿಗೆಯಲ್ಲಿ ನೀರಿನ ಅಗತ್ಯ ಹೆಚ್ಚಾಗಿರುವಾಗ, ಸಮರ್ಪಕ ನೀರು ಪೂರೈಕೆಯಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಾರಕ್ಕೊಮ್ಮೆ ಮಾತ್ರ ನೀರು ಬರುತ್ತಿದ್ದು, ಅದು ಸಹ ಸರಿಯಾಗಿ ಬರುತ್ತಿಲ್ಲ. ನೀರಿಗಾಗಿ ಜನರು ಪರದಾಡುತ್ತಿದ್ದಾರೆ ಮತ್ತು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊಪ್ಪಳ, ಮಾರ್ಚ್ 25: ಕೊಪ್ಪಳ (Koppal) ನಗರದ ಬಳಿಯೇ ಅನೇಕ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡೋ ತುಂಗಭದ್ರಾ ಜಲಾಶಯವಿದೆ (Tungabhadra Dam). ಆದರೆ, ಕೊಪ್ಪಳ ನಗರಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಬೇಸಿಗೆ ಆರಂಭವಾಗಿರುವುದರಿಂದ ನೀರಿನ ಅವಶ್ಯಕತೆ ಜನರಿಗೆ ಹೆಚ್ಚಾಗಿದೆ. ಆದರೆ, ಸಮರ್ಪಕ ನೀರು ಬಾರದೇ ಇರುವ ಹಿನ್ನೆಲೆಯಲ್ಲಿ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದಡೆ ಬಡಾವಣೆಯ ಮಹಿಳೆಯರು, ವೃದ್ದರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೇ, ಇನ್ನೊಂದಡೆ ನಲ್ಲಿಯಲ್ಲಿ ಬರುವ ಅಲ್ಪ ಪ್ರಮಾಣದ ನೀರನ್ನೇ ಬುಟ್ಟಿಯಲ್ಲಿ ಹಿಡಿದು, ನಂತರ ಬಿಂದಿಗೆಗೆ ಹಾಕಿಕೊಂಡು, ಸಿಕ್ಕಷ್ಟು ಸಿಗಲಿ ಅಂತ ಮನೆಗೆ ತಗೆದುಕೊಂಡು ಹೋಗುತ್ತಿದ್ದಾರೆ.
ಉತ್ತರ ಕರ್ನಾಟಕ ಬಾಗದ ಜಿಲ್ಲೆಗಳಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ. ಹೀಗಾಗಿ, ಜನರಿಗೆ ಎಷ್ಟು ನೀರು ಇದ್ದರೂ ಕೂಡಾ ಕಡಿಮೆ. ಆದರೆ, ಕೊಪ್ಪಳ ನಗರದ ವಡ್ಡರ ಓಣಿಯಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆಯಂತೆ. ವಾರಕ್ಕೊಮ್ಮೆ ಬಿಟ್ಟರು ಕೂಡಾ ಸರಿಯಾಗಿ ಬಿಡ್ತಿಲ್ಲವಂತೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮನೆ ಮನೆಗೆ ನೀರು ಬರುತ್ತಿಲ್ಲ. ಅಲ್ಲಲ್ಲಿ ಇರುವ ಸಾರ್ವಜನಿಕ ನಲ್ಲಿಯಲ್ಲಿ ವಾರಕ್ಕೊಮ್ಮೆ ನೀರು ಬಂದರೂ ಕೂಡಾ ಸರಿಯಾಗಿ ಬರುತ್ತಿಲ್ಲ.
ಬರುವ ಅಲ್ಪ ಪ್ರಮಾಣದ ನೀರನ್ನು ಬುಟ್ಟಿಯಲ್ಲಿ ಹಿಡಿದುಕೊಳ್ಳಬೇಕು. ನಂತರ ಬಿಂದಿಗೆಗೆ ತುಂಬಿಸಿಕೊಂಡು ಹೋಗಬೇಕಾಗಿದೆ. ಹೀಗಾಗಿ, ಜನರು ನೀರಿಗಾಗಿ ಜಗಳ ಮಾಡುವಂತಾಗಿದೆ. ತಾವು ಕೆಲಸ ಮಾಡುವುದನ್ನು ಬಿಟ್ಟು ನೀರು ತುಂಬಿಸಲು ಪರದಾಡುವಂತಾಗಿದೆ. ಕಳೆದ ಏಳು ತಿಂಗಳಿಂದ ಇದೇ ಸಮಸ್ಯೆ ಇದೆ. ಅಧಿಕಾರಿಗಳು ಇತ್ತಕಡೆ ತಲೆ ಹಾಕುತ್ತಿಲ್ಲ ಎಂದು ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಸ್ಥಿತಿ ಕೇವಲ ವಡ್ಡರ ಓಣಿಯಲ್ಲಿ ಮಾತ್ರವಿಲ್ಲ. ಕೊಪ್ಪಳ ನಗರದ ಬಹುತೇಕ ಕಡೆ ಸರಿಯಾಗಿ ನೀರು ಬರುತ್ತಿಲ್ಲ. ಹೀಗಾಗಿ, ಬೇಸಿಗೆ ಸಮಯದಲ್ಲಿ ಜನರು ಪರದಾಡುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಜನರು ಹತ್ತಾರು ಬಾರಿ ಮನವಿ ಮಾಡಿದರು ಕೂಡ ಯಾರು ಸ್ಪಂಧಿಸುತ್ತಿಲ್ಲವಂತೆ. ಕೊಪ್ಪಳ ನಗರಕ್ಕೆ ಹೊಂದಿಕೊಂಡು ತುಂಗಭದ್ರಾ ಜಲಾಶಯವಿದೆ. ಇದೇ ಜಲಾಶಯದಿಂದ ಅನೇಕ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಸಮೀಪದಲ್ಲಿಯೇ ಜಲಾಶಯವಿದ್ದರೂ ಕೂಡ, ಕೊಪ್ಪಳ ನಗರಕ್ಕೆ ಮಾತ್ರ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಜನರು ಬಿಂದಿಗೆ ನೀರಿಗಾಗಿ ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಮಾರ್ಚ್ ತಿಂಗಳಲ್ಲೇ ಕೊಪ್ಪಳದಲ್ಲಿ ನೀರಿಗಾಗಿ ಹಾಹಾಕಾರ, ಖಾಲಿ ಕೊಡ ಹಿಡಿದು ರಸ್ತೆಮೇಲೆ ಪ್ರತಿಭಟಿಸಿದ ಜನ
ಸದ್ಯ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಆದರೆ, ಸಮರ್ಪಕವಾಗಿ ನೀರು ಬಾರದೇ ಇರುವುದರಿಂದ ನಗರದ ಅನೇಕ ಬಡಾವಣೆಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ, ನಗರಸಭೆಯ ಅಧಿಕಾರಿಗಳು ಇನ್ನಷ್ಟು ಕ್ರಮವಹಿಸಿ, ಸಮರ್ಪಕವಾಗಿ ನೀರು ಪೂರೈಕೆ ಮಾಡುವ ಕೆಲಸ ಮಾಡಬೇಕಿದೆ.